Friday, July 30, 2010

ಮಳೆಗಾಲದ ಸಂಜೆ



ಅದೊಂದು ಮಳೆಗಾಲದ ಸಂಜೆ
ನಾ ಕುಳಿತು ಆಗಸದೆಡೆ ಕಣ್ಣು ನೆಟ್ಟಿದ್ದೆ .
ಆ ಕಪ್ಪು ಮೋಡಗಳು ಆಗಸದ ತುಂಬೆಲ್ಲ ,
ಇನ್ನೇನು ಮಳೆ ಹನಿ ಹನಿಯಾಗಿ ಬರಬೇಕು ,
ಅಷ್ಟರಲ್ಲೇ ನೀನು ಬಂದೆ ಕೋಲ್ಮಿಂಚಿನಂತೆ .
ಮೆಲ್ಲಗೆ ಚುಂಬಿಸಿ ಕಣ್ಣು ತೆರೆಯುವುದರಷ್ಟಲ್ಲೇ
ಮಾಯವಾಗಿ ಬಿಟ್ಟಿದ್ದೆ .
ನಿನ್ನ ನೆನಪಲೆ ಕುಳಿತಿದ್ದೆ ,ಆಗಲೇ ಹನಿಹನಿಯಾಗಿ
ಬೀಳುತ್ತಿದ್ದವು ಜಲಧಾರೆ ....
ಹಾಗೆ ಕಣ್ಣು ಮುಚ್ಚಿದೆ ನಿನ್ನ ನೆನಪಿಗಾಗಿ ,
ಮತ್ತೆ ಬಂದೆ ಸದ್ದಿಲ್ಲದೇ ......
ಕಿವಿಕಚ್ಚಿ, ಪಿಸುನುಡಿದು ಓಡಿ ಬಿಟ್ಟಿದ್ದೆ
ಕಣ್ಣು ಬಿಟ್ಟಾಗ ತೊಟ್ಟಿಕ್ಕುದ್ದವು ಎಲೆಗಳ ತುದಿಯಲ್ಲಿ
ಮಳೆಹನಿಗಳು ....
ಇದೇನು ಕನಸೋ ,ನನಸೋ ಎಂಬ ಭ್ರಮೆಯಲ್ಲಿರುವಾಗ
ಮತ್ತೆ ನೀ ಬಂದೆ ....ಹತ್ತಿರ,, ಹತ್ತಿರ,, ಬಲು ಹತ್ತಿರ ...
ಇನ್ನೇನು ಹಿಡಿಯಬೇಕು ಎನ್ನುವಷ್ಟರಲ್ಲಿ
ಕೈಗೆ ಸಿಗದೇ ಚಿಟ್ಟೆಯಾಗಿ ಹಾರಿ ಬಿಟ್ಟಿದ್ದೆ

Saturday, July 24, 2010

ಸಾವಿರ ಕನಸುಗಳ ಧಾರಾವಾಹಿ ...


ಮನಸಿನಾಳದ ಸುತ್ತ ಕಟ್ಟಿಕೊಂಡ ಕನಸುಗಳು
 ಗಿರಕಿ ಹೊಡೆಯುತ್ತಿದೆ ನಿನ್ನ ಸುತ್ತ..
ಬರಿ ಮಾತು ಚೂರು ನಗು ಒಂದು ಕಣ್ಣ ನೋಟಕ್ಕೆ
 ಕಟ್ಟಿಕೊಂಡ ರಾಶಿ ಕನಸುಗಳವು,
ಹೇಗೆ ತಿಳಿಸಲೇ ನಿನಗೆ ???
ಅದಾರೋ ಹೇಳಿದರು ಪ್ರೀತಿ ಹುಟ್ಟುವುದು ,
ಹೃದಯ ಮಿಡಿಯುವುದು ಮನಸುಗಳು ಕೂಡಿದಾಗ
ನೀನಾದರೋ ಕೈಗೆಸಿಗದ ಮರೀಚಿಕೆ ,
ನನ್ನ ಮನಸಿನ ಬಾವನೆಗಳು, ನನ್ನ ಕವನಗಳು.
ಕವನಗಳೋ ನಿನಗೊಂದು ಅರ್ಥವಾಗದ ರಾಮಾಯಣ ,
ಕೇಳಿಲ್ಲಿ ....
ಎಲ್ಲವನ್ನೂ ಹೇಳಲಾಗುವುದಿಲ್ಲ ಬಾಯ್ಬಿಟ್ಟು,
ನನ್ನ ಕಣ್ಣುಗಳನೊಮ್ಮೆ ಕಣ್ಣಿಟ್ಟು ನೋಡು ...
ಅರ್ಥವಾಗುತ್ತದೆ ನನ್ನ ಸಾವಿರ ಕನಸುಗಳ ಧಾರಾವಾಹಿ ....

Thursday, July 22, 2010

ಕೋರ್ಟು, ಕಲಾಪ ,ಪ್ರಲಾಪ


ಇಂದು ಮಾತ್ರ ಕೋರ್ಟಿನ ಕಲಾಪಗಳು
ಮನಸ್ಸಿಗೆ ಹಿತ ನೀಡಿದ್ದವು ,ಹಳೆ ಫೈಲುಗಳೆಲ್ಲ
ಧೂಳು  ಕೊಡವಿ ಅತ್ತಿಂದಿತ್ತ ಹಾರಾಡತೊಡಗಿದ್ದವು
ಪ್ರೇಮದ ಸಂದೇಶ ಹೊತ್ತು .
ಹುಡುಗೀ ಮೊದಲ ಸಲ ಏನೊಂದೂ ಗೊತ್ತಾಗುತ್ತಿರಲಿಲ್ಲ ,
ನನ್ನೆದುರಿಗೆ ಬಂದು ನಿಂತ ನಿನ್ನ ನೋಡಿ .
ನ್ಯಾಯಾಧೀಶರ ಮಾತೂ ಕೇಳದಾಗಿತ್ತು.
ಹುಡುಗೀ ನಿನ್ನ ನಗುವಿಗೆ ನನ್ನ ಮಾತೂ ಮರೆತುಹೋಗಿತ್ತು .
ಕಣ್ಣು ತೆಗೆಯದಾಗಿದ್ದೆ ನಿನ್ನ ಕಣ್ಣ ಬಿಟ್ಟು
ಮುಂಗುರುಳ ಸರಿಸಿ ಬೀರೋ ಓರೆನೋಟ ,
ಕಣ್ಣಂಚಿನ  ಕಪ್ಪು ಕಾಡಿಗೆ , ಅರಳು ಹುರಿದ ಮಾತು
ನಕ್ಕಾಗ ನಿನ್ನ ಕೆಂಪುಗೆನ್ನೆಗುಳಿಯೊಳಗೆ ನನ್ನ ನಾನೇ ಮರೆತಿದ್ದೆ
ಯಾರ ಕೂಗೂ ಕೇಳದಾಗಿತ್ತು ನನಗೆ ,
ನಿನ್ನ ನೋಡುತ್ತಾ ನನ್ನ ಕೇಸನ್ನೇ ನಾ ಮರೆತಿದ್ದೆ !  

Friday, July 16, 2010

ಬಂದಿರುವಳೆನ್ನ ಹುಡುಗಿ




ಓ ಚೈತ್ರ ಸಂಕುಲವೇ ,ಹೂವ ಮಳೆಯನು ಸುರಿಸು
ಬಂದಿರುವಳೆನ್ನ ಹುಡುಗಿ .
ಬೀಸುವ ಗಾಳಿಯೇ ರಾಗಗಳ ನೀ ನುಡಿಸು
ಬಂದಿರುವಳೆನ್ನ ಹುಡುಗಿ ,
ಆ ಸುಂದರ ಕೈಗಳಿಗೆ ,ಕೆಂಪು ಹೂ ಮದರಂಗಿಯ
ಬಳಿದುಬಿದು ತಿಳಿದ ಹಾಗೆ .
ಕಪ್ಪು ಕಾಡಿಗೆಯಾಗಿ ಬನ್ನಿ ಓ ಮೋಡಗಳೇ
ಈ ಕಪ್ಪು ಕಣ್ಣುಗಳಿಗೆ ,
ಸಿಂಗರಿಸಿ ತಾರೆಗಳೇ ,ನೀಳಜಡೆ ..ಬೈತಲೆಯ ...
ಓ ಚೆಲುವ ನೋಟಗಳೆ ಹೊದಿಸಿಬಿಡಿ ಎಲ್ಲೆಡೆ
ಬೆಳಕ ಮಕಮಲ್ಲ ಹೊದಿಕೆಯ ,
ಸಜ್ಜುಗೊಲಿಸಿವೆ ಇಲ್ಲಿ ಅರೆಬಿರಿದ ಮೊಗ್ಗುಗಳು ,
ಸೊಗಸಾದ ಪ್ರೇಮಮಂಚ.
ಅವಳ ಹೆಜ್ಜೆಯನರಸಿ ಬಂದರೂ ಬರಬಹುದು .....
ಗೊತ್ತಿರಲಿ ನಿಮಗೂ ಕೊಂಚ .
ಅವಳ ಹೆಜ್ಜೆಯನರಿಸಿ ಪ್ರೇಮರುತು ಬಂದರೂ ಬರಬಹುದು
ರಂಗಾದ ರುತುಗಳೇ ಬಣ್ಣಗಳ ಹರವಿಬಿಡಿ ,
ತುಂಬಾ ನಾಚಿಕೆಯವಳು ,ನಿಮ್ಮೆದುರು ನಸುನಾಚಿ
ಹೊರತುಹೊದಾಳು ಆಕೆ ...
ಒಂದಿಷ್ಟು ಒಳಗಿಳಿದು ಹೃದಯವನು ಚೇತರಿಸಿ ,
ಬಂದಿರುವಳೆನ್ನ ಹುಡುಗಿ














ನಿದ್ದೆಯೂ ಮುಷ್ಕರ ಹೂಡಿವೆ 
ನೀನು ಹೊರಟು ಹೋದ ಮೇಲೆ ...
ರಾತ್ರಿಯಿಡೀ ಕಣ್ಣುಬಿಟ್ಟು,ಆಗಸದಲ್ಲಿ 
ನಕ್ಷತ್ರಗಳ ಲೆಕ್ಕ ಹಾಕುತ್ತಿವೆ ...
ಮನಸಿಗೂ ಲೆಕ್ಕ ತಪ್ಪಿವೆ,,
ಕೂಡಿ ಕಳೆಯುವ ಲೆಕ್ಕಾಚಾರ 
ಆಕಾಶವೆಲ್ಲ ಖಾಲಿ ಖಾಲಿ 
ನೀನು ಹೊರಟು ಹೋದ ಮೇಲೆ 
ಹೃದಯ ಬುಟ್ಟಿಯ ತುಂಬಾ  ನಿನ್ನದೇ ಕನಸುಗಳ ಮೆರವಣಿಗೆ 
ದಿಕ್ಕು ತಪ್ಪಿವೆ  ಎಲ್ಲ ನಿನ್ನ ಕಾಣದೆ 
 ಬರಿ ಮೌನ  ಮನದ ಮೂಲೆಯ ತುಂಬಾ 
ಮೂಕವಾಗಿದೆ ಮನಸು ನಿನ್ನ ಮಾತು ಕೇಳದೆ ...

Wednesday, July 14, 2010

ನನ್ನ ಪ್ರೀತಿಯ ಹುಡುಗಿ



ನನ್ನ ಪ್ರೀತಿಯ ಹುಡುಗಿ ಒಂದು ದಿನ ತೀರ ನಸುಕಿನಲಿ ,
ಬೆಳಕಿನ್ನೂ ಕಣ್ಣುಜ್ಜಿಕ್ಕೊಳ್ಳುತ್ತ   ಎಚ್ಚರಾಗುವ ಸಮಯದಲಿ 
ನನ್ನ ಎದೆಯಲ್ಲೊಂದು ಕವಿತೆ ನೆಟ್ಟು ಹೋದಳು ,
ಪ್ರೀತಿಯ ಮೇಲೆ  ಬದುಕಿನ ಬದುಕಿನ ಮೇಲೆ ,
ನನ್ನ ಪ್ರೀತಿಯ ಹುಡುಗಿ ಹೊನ್ನ ಹೊಳಪುಳ್ಳ ಗೌರವರ್ಣದ ಬೆಡಗಿ ,
ಮುಗುಳ್ನಗುತ್ತ ಮಾತನಾಡುವ ,ಮಾತಿಗೆಳೆಯುವ ಇಷ್ಟಗಲ ಕಣ್ಣುಗಳ 
ಚೆಲುವೆ ,ನೋಡಬೇಕವಳ ಮೂಗಿನ ತುದಿಯ ಬಿಂಕವನ್ನ,
ಹತ್ತಿರ ಕರೆದೂ ....ದೂರವಿರಿಸುವ ,ತುಟಿಗಳ ತುಂಟತನವನ್ನ 
ಬೇಕಷ್ಟೇ ತುಟಿ ತೆರೆದು ನಕ್ಕಾಗ ಹೊಳೆವ ಸಾಲು ಹಲ್ಲುಗಳ ಮೋಹಕತೆಯ ,
ನನ್ನ ಪ್ರೀತಿಯ ಹುಡುಗಿ ,ಮಧ್ಯರಾತ್ರಿಯ ಕತ್ತಲಲಿ ,
ಕನಸು ಬೀಳುವ ಸುಮುಹೂರ್ತ ಸಮಯದಲಿ 
ಕಿವಿಯಲ್ಲುಸುರಿ ಹೋದಳು ,ನಂಬಿಸುವ ದನಿಯಲ್ಲಿ .....
ಹುಚ್ಚು ಹುಡುಗಾ ,
ಕವಿತೆ ಹುಟ್ಟುವುದು ಪ್ರೀತಿ ಮೊಳೆಯುವುದು 
ಒಂದೇ ಜಾಗದಲ್ಲಿ ಎದೆಯ ಗೂಡಿನ ಮೌನದಲ್ಲಿ .......

Saturday, July 10, 2010

ಅಮರ ಪ್ರೇಮ .


ನಾ ಹೇಳುವೆನು  ಜಗದಲ್ಲಿ  ನನ್ನದು ಮಾತ್ರ
ಅಮರ ಪ್ರೇಮ .
ಸ್ವಾರ್ಥ ,ಅಸೂಯೆ ದ್ವೇಷಗಳಲ್ಲಿ ಬೆಂದು ಹೋದವರೆಸ್ಟೋ.
ಪ್ರೀತಿಗಾಗಿ ಪ್ರಾಣ ಕೊಟ್ಟವರೆಷ್ಟೋ,,
ಅವಾವವೂ ಬದುಕುಳಿಯಲಿಲ್ಲ ...ಬದುಕಲು ಪ್ರೇಮಿಗಳು ಇದ್ದಾರೆ ತಾನೇ ?
ಅದಕ್ಕೆ ನಾ ಹೇಳುವುದು ನಾ ಮಾತ್ರ ಅಮರ ಪ್ರೇಮಿ ...
ಏಕೆಂದರೆ ನಾ ಪ್ರೀತಿಸುತ್ತಿರುವುದನ್ನು ನಿನಗೆ ಹೇಳಿದರೆ ತಾನೇ!
ಪ್ರೀತಿ ಸತ್ತರೂ ಪ್ರೇಮಿ ಬದುಕಲು ಬಿಡುವವರಾರು?
ನಿನ್ನ ಅಂತರಂಗವನ್ನು ನಾನೇನೂ ತಿಳಿಯಲಿಲ್ಲವಲ್ಲ ..
ಹೇಗಿರುವುದೋ  ಏನೋ ನನಗೇನು ಗೊತ್ತು ? 
ಈಗಿರುವ ಪ್ರೀತಿಯಲ್ಲೇ ಇರುವುದು ಒಳ್ಳೆಯದಲ್ಲವೇ ?  
ಈಗ ಮಾತ್ರ ನೀನೆ ಎಲ್ಲ ನಿನ್ನ ಬಿಟ್ಟರೆ ಉಸಿರಿಲ್ಲ  
ಎಂದೆಲ್ಲ ಹೇಳುವೆನಾದರೂ ಮುಂದೊಮ್ಮೆ ನಿನ್ನ
ಅಂತರಂಗವ ತಿಳಿದು ಈಗಿರುವ ಪ್ರೀತಿಯೂ
ಇಲ್ಲವಾದರೆ ????
ನನ್ನದಾಗುವುದು ಹೇಗೆ ಅಮರ ಪ್ರೇಮ....  

Thursday, July 8, 2010

college days

 ಮರಳಿಸು ನನಗೆ  ಕಾಲೇಜ್  ದಿನಗಳನ್ನ
ಮೋಜು ಮಸ್ತಿಯ ಕ್ಷಣಗಳನ್ನ ,
ಬದಲಾಗಿ ತೆಗೆದುಕೋ ,
 ಡಿಗ್ರಿ , ಸರ್ಟಿಫಿಕೆಟ್ , ನೌಕರಿ
ಮರಳಿಸು ನನಗೆ  ಮಧುರ ನೆನಪುಗಳನ್ನ
 ಕಾಲೇಜ್,ಬಂಕ್ ಮಾಡೋ ಕ್ಲಾಸ್ ,
ಚೀರಾಡೋ ಕ್ಲಾಸ್ , ಹಾರಾಡೋ ಕ್ಲಾಸ್ ,
ಮತ್ತು ಕನ್ನಡ ಪಿರಿಯಡ್ .
ಮರಳಿಸು ನನಗೆ  ನೆನಪುಗಳನ್ನು ,
 ನೋಟ  ಕನಸು ,ಅದಲು ಬದಲಾಗೋ
 ಕುಳಿತ ಜಾಗ .
ಮರಳಿಸು ನನಗೆ  ಎಲ್ಲ ರಾಕೆಟ್ ಗಳ
ಕ್ಲಾಸ್ ತುಂಬಾ ಹಾರಾಡಿದ ಕನಸಿನ
ಗಾಳಿಪಟಗಳ ,
ಎಲ್ಲ ಬೇಕಾಗಿದೆ ನನಗೆ ಮತ್ತೊಮ್ಮೆ
 ಗೆಳೆತನ , ಚೀರಾಟ , ಹಾರಾಟ ,
ಮತ್ತೆ ಕುಳಿತುಕೊಳ್ಳಬೇಕಾಗಿದೆ  ಎಲ್ಲ ಪಿರಿಯಡ್ ಗೆ ,
ಮತ್ತೆ ಮತ್ತೆ ,ಪ್ರಾಕ್ಸಿ ಹಾಕಲು

ಮೌನರಾಗ ..

ಎರಡು ಮನಸುಗಳ ನಡುವೊಂದು
ಮೌನರಾಗ ...
ಕಾರಣವಿರದೆ ಹುಟ್ಟಿಕೊಂಡ ಒಂದು ಚಿಕ್ಕ ಕಂದರ ,
ಹೃದಯದಾಳದ ಬಾವನೆಗಳಿಗೊಂದು ಬಲವಂತದ
ಕಡಿವಾಣ ...
ಕಂಡರೂ ಕಾಣದಿರುವ ನೋಟಗಳ ಅಂತರ
ಬರಿ ಅಹಮುಗಳ ನಡುವೆ ದೊಡ್ಡದಾಗುತ್ತಿರುವ
ಕಂದರ .
ಎರಡು ಮನಸುಗಳಲೂ ನೋಟಗಳ ತಾಕಲಾಟ ,
ಮೌನ ಮುರಿಯುವ ನಿರೀಕ್ಷೆಗಳಿಗಾಗಿ..
ಆದರೇಕೋ ,,
ಮತ್ತೆ ಮತ್ತೆ ಮೌನಗಳಿಗೆ ತಳಕುಗಳ ಬಂದನ .
ಕನಸ ಹಂಚಿಕೊಂಡ ಮನಸು ,,ಬಾವನೆಗಳ
ಬಂದನದಲ್ಲಿ ನರಳಿ ಮೌನವಾದಾಗ ....
ಬರುವುದೊಂದು ಕಾಲ ....ಸೋನೆ ಮಳೆಯ ಹಾಗೆ ..
ನೀರಾಗಿ ಹರಿಯುವುದು ಮೌನ ...ಎಲ್ಲ ಬಂದನಗಳ ಕಳಚಿ

Monday, July 5, 2010

ಸಮಾಧಿ






ಕಟ್ಟಿಬಿಡು ನನಗೊಂದು ಸಮಾಧಿ ನಿನ್ನ ಕಯ್ಯಾರೆ

ನನ್ನೆಲ್ಲ ಕನಸುಗಳ ಹುದುಗಿ,
ಅಲಂಕರಿಸು ಹೂವುಗಳಂತೆ ,
ಸಮಾಧಿಯ ಸುತ್ತೆಲ್ಲಾ ಚೂರಾದ ಹೃದಯಗಳ ಸಾಲ
ನಿನ್ನ ಬಯಸಿದ ಈ ಮನಸಿಗೆ ಕಟ್ಟಿಬಿಡು ಸಮಾಧಿ ,
ಮತ್ತೆ ಎದ್ದೇಳದಂತೆ ಕನಸುಗಳ ಚಿಗುರು .
ಮತ್ತೆ ಬಯಸದಂತೆ ನಿನ್ನ ಮನಸ,
ಕಟ್ಟಿಬಿಡು ಸಮಾಧಿ
ನನಗೊಂದು .....ನನ್ನ ಪ್ರೀತಿಗೊಂದು ....
ಮರು ಜನ್ಮ ಬರದ ಹಾಗೆ... ,ಮುಕ್ತಿ ಕಾಣದ ಹಾಗೆ....
ಕಟ್ಟಿಬಿಡು ಸಮಾಧಿ
ನನ್ನೆಲ್ಲ ಕನಸುಗಳಿಗೆ ,ಬಾವನೆಗಳಿಗೆ ,ಪ್ರೀತಿಗಳಿಗೆ
ಮತ್ತೆ ನಿನ್ನ ಬಯಸದ ಹಾಗೆ .....

Saturday, July 3, 2010

ನನ್ನ ಕವನ





ನನ್ನ ಎದೆಯ ಗೂಡಲಿ ಒಬ್ಬ ಕವಿ ಕವನ ಕಟ್ಟುತ್ತಿರಲು,
ನೀನು ಕಲ್ಪನೆಯ ಹೂದೋಟದಲಿ
ಕನಸುಗಳೊಂದಿಗೆ ಕಣ್ಣು ಮುಚ್ಚಾಲೆಯಾಡುತ್ತಿದ್ದೆ.
ಬಳ್ಳಿ ಹೂಗಳು ನಿನ್ನ ಮುಖ ಮರೆಮಾಡಿ ,
ನೀನು ನನ್ನ ಕಾಡಿಸುತ್ತ ಹಿಂದೆ ನಗುತಲಿದ್ದೆ .
ನಿನ್ನ ಕಣ್ಣುಗಳ ಮುಗಿಲ ನಕ್ಷತ್ರಗಳಲಿ ಹುಡುಕಿಕೊಂಡು
ನಿನ್ನ ಮುಗುಳ್ನಗೆ ಬೆಳದಿಂಗಳ ಬೆಳಕಲಿ ,
ನಾ ನಿನ್ನ ಕಾಣುವಾಗ ,
ನೀನು ಹಾದುಬಂದ ಮೋಡದಾ ತೆರೆಯಲಿ ಮರೆಯಾದೆ .
ಕರಗಲಿಲ್ಲ ನಾನು ,ನಿನ್ನ ಬೆರಗಿಗೆ ಕಾದೆ .
ನೀನೊಮ್ಮೆ ಎದುರಾದಾಗ ಬರೆಯಹೊರಟೆ ಕವಿತೆ
ಸಾಲುಗಳು ಬೆಳೆಯುವಲ್ಲಿ ಮುಂದಿನವುಗಳ ನೀನೆ ಹಾಡುತಲಿದ್ದೆ,
ನಿನ್ನ ಹಾಡಿಗೆ ಶ್ರುತಿ ಸೇರಿಸಲು ಪ್ರಯತ್ನಿಸಿ ನಾ ಸೋತಾಗ
ನೀನೇ ಶೃತಿಯಾಗಿ ಬಿಡುತ್ತಿದ್ದೆ

ಗೊಂದಲ





ಅದೊಂದು ದಿನ ಹೊತ್ತಲ್ಲದ ಹೊತ್ತಲ್ಲಿ ಹುಡುಕಿ ಹೊರಟೆ
ಅದಿನ್ನೂ ಸೂರ್ಯ ಮೈಮುರಿಯುತಲಿದ್ದ
ಸ್ಪಷ್ಟವಿರಲಿಲ್ಲ ಏನೂ ...
ಹೀಗೆ ದಾರಿ ಸವೆಯುತಲಿತ್ತು
ನೂರಾರು ಭಾವನೆಗಳು ಹೊಯ್ದಾಡುತಲಿತ್ತು
ಮನದಲ್ಲಿ.....
ಏನೋ ಕಳೆದು ಕೊಂಡಂತಹ ,ಮತ್ತೇನೋ ಪಡೆದು ಕೊಂಡಂತಹ .
ಆದರೂ ಹುಡುಕಿ ಹೊರಟೆ ,
ಸದ್ದಿಲ್ಲದೇ ಎಚ್ಚರವಾಗಿತ್ತು ಪ್ರಕೃತಿ ,
ಇಬ್ಬನಿಯ ತೆರೆ ಸರಿದು ನಿಚ್ಚಳದತ್ತ ಸಾಗಿತ್ತು
ಸುಸ್ಪಸ್ತವಾಗಿತ್ತು ದಾರಿ ..
ಅದೇಕೋ ನಿನ್ನ ಮುಖ ತೇಲಿಬಂತು ,
ಗೊಂದಲಗಳು ,,,,
ಹೊತ್ತಲ್ಲದ ಹೊತ್ತಿನಲ್ಲಿ ಹುಡುಕಿ ಹೊರಟಿದ್ದು ಇದೇನಾ ಎಂದು ?
ಯಾವುದೂ ಬೇಡವೆಂದು ಎಲ್ಲ ತೊರೆದು ಹೊರಟಿದ್ದೆ
ಪ್ರಕೃತಿ ಹೇಳಿತ್ತು ಹುಚ್ಚು ಹುಡುಗಾ ,,,
ಎಲ್ಲಿ ಹೋದರೂ ನಿನ್ನ ಮನಸನ್ನ ತೊರೆಯಲು ಸಾದ್ಯವಿಲ್ಲ
ನಾನೂ ನಕ್ಕಿದ್ದೆ ,,,
ನನ್ನ ಮನಸು ನನ್ನ ಕೈಲಿದ್ದರೆ ತಾನೇ ???
ಪ್ರಕೃತಿಯೂ ನಕ್ಕಿತ್ತು ....
ನನಗೇನು ಗೊತ್ತಿತ್ತು ಅದರರ್ಥ
ಹೋಗಿ ನಿನ್ನ ಮನಸ ಸೇರೆಂದು ??

ಪ್ರೀತಿಯ ಗುಟ್ಟು ,


ಹೃದಯ ಮಿಡಿಯುವ ಹೊತ್ತು
ಅಧರ ಕಂಪಿಸುವ ಹೊತ್ತು ಅವುಗಳಿಗೆನು ಗೊತ್ತು
ಪ್ರೀತಿಯ ಗುಟ್ಟು .
ಕಣ್ಣು ಕಣ್ಣು ಕೂಡಿ ,ಮನಸಲ್ಲಿ ಮನಸ ಬೆಸೆದು
ಕೈ ಕೈ ಹಿಡಿದು ನಡೆಯುವಾಗ ಅವುಗಳಿಗೆನು ಗೊತ್ತು ?
ಪ್ರೀತಿಯ ಗುಟ್ಟು ,
ಕಣ್ಣಲ್ಲಿ ಕಂಡ ಕನಸು ,ತೀರಿಸುವ ಬಯಕೆಯ ವಯಸು ,
ಎಲ್ಲ ಕೂಡಿ ಮೈ ಮರೆಯುವಾಗ
ಅವುಗಳಿಗೆನು ಗೊತ್ತು ?
ಪ್ರೀತಿಯ ಗುಟ್ಟು ,
ಸಮಯಗಳನು ಕಳೆದು ,
ಕನಸುಗಳು ಅಳಿದು
ಚಿಗುರುಗಳು ಮೂಡಲು ಆರಂಬಿಸಿದಾಗ
ಕಾಣುವುದು ಗುಟ್ಟೆಂಬ ಬಟ್ಟ  ಬಯಲು .

ಮೌನ ಮಾತನಾಡಿದಾಗ


ಮನದ ಮುಗಿಲಲ್ಲಿ ಕಟ್ಟಿಕೊಂಡ ಕನಸುಗಳು
ಹನಿಯಾಗಿ ಧರೆಗಿಳಿದು
ಲೆಕ್ಕಹಾಕೋ ನಕ್ಷತ್ರಗಳನೆಲ್ಲ ಒಟ್ಟುಗೂಡಿಸಿ
ಜೊತೆಗಿಟ್ಟ ಚಂದ್ರನ ಚೂರು
ನಿನ್ನ ಪದತಲ ಸೇರುವ ಸಮಯ ಮೌನ ಮಾತನಾಡಿದಾಗ
ಬೀಸುವ ಗಾಳಿಯ ಜೊತೆಗೆ ಹರಿವ ಝಾರಿಗಳಲಿ ,
ನಿನ್ನ ಹೆಸರ ಹರಿಬಿಟ್ಟು ಸದ್ದಾಗದೆ ಸುಮ್ಮಗೆ ನಿಂತು ಆಲಿಸುವಾಗ ,
ಹಸಿರ ಹೊದ್ದು ಮಲಗಿದ ಪ್ರಕೃತಿಗೆ ಕೊಂಚ ಸುಣ್ಣ ,ಬಣ್ಣ ಬಳಿದು
ಶೃಂಗರಿಸಿ ಕಾಯುವ ಸಮಯ ,
ಮೌನ ಮಾತನಾಡಿದಾಗ .
ಹೃದದೊಳಗಿನ ಬಾವನೆಗಳೆಲ್ಲ  ಬೆಚ್ಚಗೆ ಹೊದ್ದು ಮಲಗಿರುವಾಗ
ಸದ್ದಾಗದೆ ಆಡುವ ಮಾತುಗಳೆಲ್ಲ ಪಿಸುಗುಟ್ಟುವವು
ಮೌನ ಮಾತನಾಡಿದಾಗ

ಎರಡು ಅಸಂಗತ ಪ್ರಾರ್ಥನೆಗಳು









1
ಇರುಳು ಬಂತೆಂದರೆ ಭಯವಾಗುತ್ತದೆ
ಆಕಾಶದಲ್ಲಿ ಕನಸುಗಳ ಹೆಣ ತೇಲುತ್ತದೆ
ಸುತ್ತೆಲ್ಲ ಸಾವಿರ ಹಣತೆಗಳ ಉರಿಸಲಾಗುತ್ತದೆ
ನಾನು ಪ್ರಾರ್ಥಿಸುತ್ತೇನೆ
ಆಕಾಶದಲ್ಲಿ ಹೆಣಗಳು ದಯವಿಟ್ಟು ಬೇಡ ಪ್ರಭೂ ,
ಎಣಿಸುವುದಕ್ಕೆ ನನಗೆ ಹಣತೆಗಳಷ್ಟೇ ಉಳಿದಿರಲಿ .
2
ದಿನವೂ ಬೆಳಗಾದಾಗ ಹಗಲು ದಿಗಿಲು ಹುಟ್ಟಿಸುತ್ತದೆ
ನನ್ನ ಹಸಿವನ್ನು ಕಷ್ಟ ನೋವುಗಳನ್ನು ಸುಡಲಾರದ
ಬಿಸಿಲು ಕಂಬನಿಯನ್ನು ಸುಡುತ್ತದೆ
ಬಚ್ಚಿಟ್ಟುಕೊಂಡು ಕತ್ತಲಲಿ ರೆಪ್ಪೆ ಮುಚ್ಹೊನವೆಂದರೆ ,
ಕನಸುಗಳ ನೆನಪಾಗುತ್ತದೆ
ಓ ಪ್ರಭೂ ದಯವಿಟ್ಟು ಹರಸು ,
ಬೇಕಿದ್ದರೆ ಬಿಸಿಲು ನನ್ನನ್ನು ಸುಟ್ಟುಬಿಡಲಿ
ನನ್ನಥವನಿಗೆ ದು:ಖವಾದಾಗ ಬೇಕಾಗುತ್ತದೆ
ಕಂಬನಿಗಳು ಮಾತ್ರ ಹಾಗೆ ಇರಲಿ ...

Friday, July 2, 2010

ನನ್ನೊಳಗಿನ ಕವಿ



ಮದ್ಯರಾತ್ರಿ ಬೆಳದಿಂಗಳ ನಡುವೆ
ದಟ್ಟನೆ ಸುರಿಯುತ್ತಿರುವ ಹಿಮಗಳ ನಡುವೆ
ತೊಯಿಸಿಕೊಳ್ಳುತ್ತಿತು ಈ ಭುವಿ ತನ್ನೊಡಲ .
ಬಿಳಿಮುತ್ತುಗಳು ಆಗಸದಿಂದ ಧಾರೆಯೆರೆದಂತೆ
ಬೀಳುವ ಹಿಮಗಳನು ಚೂರುಪಾರು ಹಿಡಿದುಕೊಳ್ಳುವ
ತವಕದಲ್ಲಿದ್ದವು ವೃಕ್ಷಸಂಕುಲಗಳು.
ಗಡಗಡನೆ ನಡುಗಿಸೋ ಚಳಿಗೆ ತಬ್ಬಿಕುಳಿತಿದ್ದವು
ಮರಿಹಕ್ಕಿಗಳು ಬೆಚ್ಚನೆಯ ಗೂಡ ಒಳಗೆ .
ಈ ಭುವಿಯೂ ಮರೆತಿತ್ತು ,ತನ್ನೆಲ್ಲ ಸೌಂದರ್ಯವನು
ತೆರೆದು ಕುಳಿತಿತ್ತು ,
ಇದನ್ನೆಲ್ಲಾ ನೋಡುತ್ತಾ ನಿಂತೇ ಉಳಿದೆ ನಾನು
ಭುವಿಯೋಳಗಿನ ಸೌಂದರ್ಯವ ಸವಿಯುತ್ತ
ನನ್ನೊಳಗಿನ ಪರಧಿಯ ಮೀರಿ ಕವಿಯಾಗಿದ್ದೆ

ನೀನಿಲ್ಲದ ಹೊತ್ತು





ಮನಸಿನಂಗಳದಲ್ಲಿ ಕನಸ ಬಿತ್ತಿ
ಮೂಡುವ ಚಿತ್ತಾರಗಳೆಲ್ಲ ಬರೀ ಕಪ್ಪು ಬಿಳುಪು ,
ನೀನಿಲ್ಲದ ಹೊತ್ತು .
ಬಾನಂಗಳದಲ್ಲಿ ಹೊಳೆವ ನಕ್ಷತ್ರಗಳ ಹೆಕ್ಕಿ ,
ಜೊತೆಗಿಟ್ಟ ಬಿದಿಗೆ ಚಂದ್ರ ,
ಎಲ್ಲ ಕೂಡಿಸಿ ಪೊಣಿಸುವಾಗ ಮೂಡುವ ಆಕಾರಗಳೆಲ್ಲ ಅಸ್ತವ್ಯಸ್ತ ,
ನೀನಿಲ್ಲದ ಹೊತ್ತು.
ತಿಳಿನೀರ ಕಲಕಿದ ಹಾಗೆ
ನೀನಿಲ್ಲದ ಹೊತ್ತು ,
ನಿನ್ನ ನೆನಪು ಮತ್ತೆ ಮತ್ತೆ ಬರುವವು ಅಲೆಗಳ ಹಾಗೆ
ನೀನಿಲ್ಲದ ಹೊತ್ತು !

ಪುಟ್ಟ ಕನಸ ಗೂಡು







ನನ್ನದೊಂದು ಪುಟ್ಟ ಕನಸ ಗೂಡಾಗಿತ್ತದು
ನಾನೇ ಇಷ್ಟಪಟ್ಟು ,ಕಷ್ಟಪಟ್ಟು ಕಟ್ಟಿಕೊಂಡ
ಗೂಡದು .
ಬರಿ ಪ್ರೀತಿ ಮತ್ತು ಭಾವನೆಗಳೇ ತುಂಬಿಕೊಂಡ
ಪುಟ್ಟ ಗೂಡದು .
ಯಾರಿಗೂ ತೋರಿಸಿರಲಿಲ್ಲ ,
ಆ ಪುಟ್ಟ ಗೂಡ ಒಳಗೆ
ನನಗೆ ಮಾತ್ರ ,ನಾನೇ ಕಟ್ಟಿಕೊಂಡ ಪ್ರಪಂಚವಿತ್ತು .
ನೂರಾರು ಆಸೆಗಳು ನೂರಾರು ಭಾವನೆಗಳು ,
ಒತ್ತೊಟ್ಟಿಗಿತ್ತು .
ಅಂದೊಮ್ಮೆ ನೀನು ನನ್ನ ಪುಟ್ಟ ಕನಸ ಗೂಡೊಳಗೆ
ಇಣುಕಿ ನೊಡಿದ್ದೆ....
ದಿಘ್ಬ್ರಮೆಯಿಂದ ನನ್ನ ನೊಡಿದ್ದೆ ,
ಕನಸುಗಳೂ ಹೀಗಿರುತ್ತವಾ ಎಂದು ?
ನಾ ಹೇಳಿದ್ದೆ ಹುಚ್ಚೀ ಪ್ರೀತಿ ಮರೆತರೂ
ಕನಸು ಶಾಶ್ವತ ,ನಿತ್ಯಸತ್ಯ .
ನೀನೂ ನೋಡಲು ಮರೆತಿದ್ದೆ
ಆ ಪುಟ್ಟ ಕನಸ ಗೂಡ ಹೆಸರ ,
.....ನಿನ್ನ ಹೆಸರಾಗಿತ್ತದು !