Tuesday, December 27, 2011

ಮೆರವಣಿಗೆಒಮ್ಮೆ ನಿನ್ನೆರಡೂ  ಕೈಗಳ ನೀಡು ...
ಹಾಗೆ ನವಿರಾಗಿ ಮದರಂಗಿಯ ಬಿಡಿಸಿಬಿಡುತ್ತೇನೆ 
ಚಿತ್ತಾರವಾಗಿಬಿಡಲಿ ಕೈಗಳರಡೂ ...
ಮೆಲ್ಲಗೆ ಕಾಡಿಗೆಯನ್ನೂ ಬಳಿದು ಬಿಡುತ್ತೇನೆ ಆ ಕಣ್ಣ ರೆಪ್ಪೆಗಳಿಗೆ  ..
ಅಲಂಕಾರವಾಗಿಬಿಡಲಿ ....ನಿನಗೆ 
ನನ್ನ ಕನಸಿನೂರಿಗೆ ಕರೆದೊಯ್ಯುವ ಮೊದಲು ..
ಸಿಂಗರಿಸಿ ನಿಂತಿದೆ ಪ್ರಕೃತಿ ..
ನೀ ಬರುವ ಸುದ್ದಿ ಕೇಳಿ ...ತನ್ನೆಲ್ಲ ಚೆಲುವ ಹರಡಿ ..
ನಿನಗೇ ಸಾಟಿಯಾಗಲು ...
ಒಮ್ಮೆ ನಕ್ಕಿಬಿಡು ಸಾಕು ಪ್ರಕೃತಿಯ ಪೆದ್ದತನಕ್ಕೆ ...
ಕಾಲಿಟ್ಟ ಕ್ಷಣವೇ ಸಾಕು ..ಭುವಿ  ಬಿಸಿಯಾಗಿ ..ಆವಿಯಾಗಿ 
ಮೋಡ ಕಟ್ಟಿ ಹನಿಯೊಡೆದು ಪ್ರಕೃತಿ  ಒದ್ದೆಯಾಗಲು...
ಅಲ್ಲಾಗಲೇ ಮಾವಿನ ತಳಿರ ತೋರಣಗಳು ಸಿಂಗರಿಸಿವೆ..
ನಿನ್ನ ಕಾಯುತ್ತ ... ಮನೆಯೆಲ್ಲ ರಂಗೊಲಿಯಾಗಿವೆ ..
ನಿನ್ನ ಪಾದ ಸೋಕಲು ...
ಮನೆಯವರೆಲ್ಲ ಸಿಂಗರಿಸಿ ನಿಂತಿದ್ದಾರೆ ವಾದ್ಯ ಮೇಳಗಳೊಡನೆ ..
 ನಿನ್ನ ಎದುರುಗೊಳ್ಳಲು ..
ನಾಚಬೇಡ ... ನೋವಾಗಲೂಬಹುದು ನನಗೆ ನೀ ನನ್ನ ಕೈ ಹಿಸುಕಿದ ರೀತಿಗೆ ..
ಎಲ್ಲ ನಿನ್ನವರೇ ... 
ಈಗಷ್ಟೇ ಗೋಡೆಯ ಸಿಂಗರಿಸಿದ್ದಾರೆ ...ನಿನ್ನ ಹಸ್ತಾಕ್ಷರ ಮೂಡಿಸಲು ..
ಹಾಗೆ ಬಳಿದುಬಿಡು ಗೋಡೆಯ ತುಂಬೆಲ್ಲ ...ಏಳೂ ಬಣ್ಣಗಳ ..
ನಮ್ಮಿಬ್ಬರ ಜೀವನದ ತುಂಬೆಲ್ಲ ...
ಪ್ರವೇಶ ವಾಗಿಬಿಡಲಿ ನನ್ನ ಕನಸಿನ ಲೋಕಕ್ಕೆ ...
ನೀ  ಕಾಲಿಟ್ಟ ಗಳಿಗೆಯಿಂದ ...
ಸಿಂಗಾರಗೊಳ್ಳಲಿ ಅದೂ  ಕೊಂಚ ...

Saturday, December 17, 2011
ಕನಸ ಕಾಣಲು ಬಿಡು  ಹಾಗೆ ನನ್ನ , ...
ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಕೊನೆಯವರೆಗೂ ..
ಕಾಣುವುದಿದೆ ಎಷ್ಟೋ ಕನಸುಗಳ ...ನಿನ್ನ ಜೊತೆ ..
ನನಸಾಗುವುದೋ ....ಕನಸಾಗುವುದೋ ... 
ನನಸು ಹೃದಯದೊಳಗಿನ ಮರೀಚಿಕೆ ..
ನೋಡ ನೋಡುತ್ತಲೇ ಕನಸಾಗಿಬಿಡುವುದು..
ಸಾಕಿನ್ನು ಕಣ್ಣ ಅಂಚುಗಳ ಒಂಟಿತನ ..  
ಹಾಗೆ ಮುಚ್ಚಿಬಿಡು ಒಮ್ಮೆ ನನ್ನ ಕಣ್ಣುಗಳ ...
ನಿನ್ನ ಮುಖವೇ ಶಾಶ್ವತವಾಗಿ ಬಿಡಲಿ ಈ ಕಣ್ಣುಗಳಿಗೆ ..
ಈ ಜೀವ ಹೋಗುವ ಮುನ್ನ ...Thursday, December 15, 2011ಕನಸ ಕಟ್ಟುವ ಮುನ್ನ ...ಹೂವ ಅಲಂಕರಿಸುವ ಮುನ್ನ ...
ಒಮ್ಮೆ ಬಂದುನೋಡು ನನ್ನ ಮನದಂಗಳಕೆ ...
ನಿನ್ನ ಹೆಸರ ಕೆತ್ತುವ ಮುನ್ನ ...
ಕನಸುಗಳೀಗ  ಕಾಲೀ ಹಾಳೆಗಳ ಗಾಳೀಪಟ ...
ನಿನ್ನಲ್ಲಿ ಹಾರಿ ಬಿಡುವ ಮುನ್ನ ...
ಬರೆಯಬೇಕಿದೆ ಮನದನ್ನೆ  ..ನಿನ್ನ ಚಿತ್ತಾರವನ್ನ ..


ನೀನಿಲ್ಲದ  ಬಾವನೆಗಳ ತೂಗುಯ್ಯಾಲೆ ..
ಕಣ್ಣ ರೆಪ್ಪೆಗಳಿಗೂ   ಒಂಟಿತನದ ಛಾಯೆ ..
ಆಗಸಕೆ ಕಟ್ಟಿದ ಉಯ್ಯಾಲೆಯೀಗ ...
ಸುಮ್ಮನೆ ಸಿಂಗರಿಸಿ ನಿಂತಿದೆ ... ನಮ್ಮಿಬ್ಬರ ಬರುವಿಕೆಯನ್ನ ..


Tuesday, December 6, 2011ಮಳೆಗೂ ಅವಳಿಗೂ ಅದೆಲ್ಲಿನ ಸಂಬಂಧವೋ ... 
ಪ್ರತೀ ಸಲ ಮಳೆ ಬೀಳುವಾಗಲೂ ಅವಳು ನೆನಪಾಗುತ್ತಾಳೆ ..
ಬೀಳುವ ಪ್ರತಿ ಹನಿಯ ಜೊತೆ ಅವಳೂ ಮನಸ ತಂಪನೆರೆಯುತ್ತಾಳೆ...
ಇದೆ ಮಳೆಯೇ ತಾನೇ ನಮ್ಮಿಬ್ಬರ ಒಂದು ಮಾಡಿದ್ದು ...
ಪಕ್ಕದ ಮರದ ರೆಂಬೆ ಮುರಿದು ಬೀಳುವಾಗ ಚೀರಿ ತಬ್ಬಿ ಹಿಡಿದದ್ದು ...
ಒಂದೊಂದು ಹನಿಯೂ ಕೂಡ ಅವಳ ನೆನಪ ಕಾಡುತ್ತಿವೆ ..
ಅದೇ ಹನಿಗಳನಲ್ಲವೇ ಇಬ್ಬರೂ ನಾಲಿಗೆ ಚಾಚಿ ಹೀರಿದ್ದು ...
ಪ್ರತೀ ಸಲ ಸುರಿಯೋ ಮಳೆಗೆ ಅಂಗಾತ  ಮೈಚಾಚಿ...
 ಮಳೆಗೆ ಕಣ್ಣು ಕೊಟ್ಟು ನೋವಾದಾಗ ತಬ್ಬಿ ಮೆಲ್ಲಗೊಂದು 
ಮುತ್ತನೀದಿದ್ದು ...
....................................................
ಇಂದೂ ಮಳೆ ಬೀಳುತ್ತಿದೆ ... ಅವಳ ನೆನಪೂ ಕೂಡ ...
ಆದರೆ ಆ ಮಳೆಯ ಜೊತೆ ಅವಳೂ ಭೂಮಿ ಸೇರಿದ್ದಾಳೆ ...
ನನ್ನ ಕಣ್ಣೀರೂ ಸಹ ..... 

Friday, December 2, 2011

ಕವನವೆಂದರೆ ...ಕವನ ಬರೆಯುವುದು ಸುಲಭವಲ್ಲ ಬರೆದದ್ದೆಲ್ಲವೂ ಕವನವಾಗುವುದಿಲ್ಲ ..
ಶಬ್ದಗಳ ಪೋಣಿಸಬೇಕು ಮನಸ ಮೂಲೆಯಿಂದ ಆರಿಸಿ 
ಪದಪುಂಜಗಳ ಜೋಡಿಸಬೇಕು ...
ಕನಸ ಲೋಕದೊಳಗೆ ಲಗ್ಗೆಯಿಡಬೇಕು...
ಒಂದೊಂದೇ ಕನಸುಗಳ ಹೆಕ್ಕಿ ಸ್ವಲ್ಪ ಬಣ್ಣ ಬಳಿದು 
ಜುಳು ಜುಳು ಹರಿವ ತೊರೆಯ ನೀರಲ್ಲಿ ದೋಣಿಯಂತೆ 
ಹರಿಯ ಬಿಡಬೇಕು ....
ಒಮ್ಮೆ ಹರಿಯಬಿಟ್ಟರೆ ಅದು ಗಮ್ಯದವರೆಗೆ ಸಾಗಬೇಕು ...
ಅಲ್ಲಿಯವರೆಗೂ ಮರೆನಿಂತು ನೋಡಬೇಕು ....
ಕವನವೆಂದರೆ ...
ಅತೀತ ವರ್ಣನೆಗಳ ಮಾಯಾಲೋಕ ...
ಬಾವನೆಗಳ ವರ್ಣಿಸಬೇಕು....ಅತಿಶಯೋಕ್ತಿಗಳ ತಬ್ಬಿ ಕೂರಬೇಕು 
 ಮಾಯಾನಗರಿಯ ಮೂಲೆ ಮೂಲೆ ಗಳ ತಡಕಾಡಬೇಕು... 
ಬಚ್ಚಿಟ್ಟ ನಿಧಿಯ ಹುಡುಕಿ ತೆಗೆದು ...
ಮನಸ ಮೂಲೆಯೊಳಗೆ ಕಾಪಿಡಬೇಕು ....
ಕವನವೆಂದರೆ ಮತ್ತೇನಿಲ್ಲ.... ಎನ್ನುತ್ತಲೇ ಮನಸ ಬಾವನೆಗಳ 
ಹರಿಬಿಡಬೇಕು...