Friday, October 19, 2012



ಅಂದೇಕೋ ಕಡಲ ತೀರದಲ್ಲೊಂದು 
ಮರಳ ಗೂಡು ಕಟ್ಟುವ ಮನಸಾಗಿತ್ತು ..
ಸುಮ್ಮಗೆ ಹೊರಟಿದ್ದ ನನಗೆ ನೀ ಕಂಡಿದ್ದೆ ..
ಕಡಲು ಭೋರ್ಗರೆಯುತ್ತಿತ್ತು .. 

ಪ್ರತೀ ಸಲ ಕಟ್ಟಿದ ನಿನ್ನ ಮರಳ ಗೂಡನ್ನು 
ಚುಂಬಿಸಿ ಹೋಗುತ್ತಿತ್ತು 
ನನ್ನ ಮನವೂ ಭೋರ್ಗರೆದಿತ್ತಾ ?? 
ಸುಮ್ಮನೆ ಬಂದು ನಿನ್ನೆದುರು ಕೂತು 
ನಿನ್ನ ಜೊತೆ ಕೈ ಸೇರಿಸಿದ್ದೆ ..
ಅಕ್ಕ ಪಕ್ಕ ಮತ್ತೆರಡು ದಿಬ್ಬ ಮಾಡಿ 
ಮರಳ ಗೂಡ ಮೇಲೆ ನಿನ್ನ ಹೆಸರ ಕೆತ್ತಿದ್ದೆ ..

ನಿನ್ನ ಬಾವನೆಗಳೂ ಭೋರ್ಗರೆದಿತ್ತಾ ?? ..
ಸುಮ್ಮಗೆ ಮುಂಗುರುಳ ಸರಿಸಿ ನನ್ನ ಕಣ್ಣ ನೋಡಿದ್ದೇ 
ಪಕ್ಕ ನನ್ನ ಹೆಸರೂ ಬರೆದಿದ್ದೆ ...ತುಟಿಯಂಚಿನಲಿ 
ತುಂಟ ನಗುವಿತ್ತು ...
ಎಲ್ಲಿಂದಲೋ ಹೆಕ್ಕಿ ತಂದ ಹೂಗಳನೂ ಸಿಂಗರಿಸಿದ್ದೆ ..
ನನಗರ್ಥವಾಗಿರಲಿಲ್ಲ  ಕಡಲು ಭೋರ್ಗರೆದಿದ್ದು ..

ಇಂದೇಕೋ  ಕಡಲು ಕೂಡ ಪ್ರಶಾಂತವಾಗಿದೆ 
ಗೊತ್ತಾಗಿರಬಹುದೇನೋ ಅದಕ್ಕೂ ..
ನೀ ದೂರವಾದದ್ದು ..
ಅದಕ್ಕೆ ನೀ ಕಟ್ಟಿದ ಮರಳ ಗೂಡನೂ ಸೋಕದೆ 
ಸುಮ್ಮನಾಗಿದೆ ...

Friday, October 12, 2012


ನನ್ನದೊಂದಿಷ್ಟು ಪಕೀರನ ಕನಸುಗಳು . 
ಹೊಟ್ಟೆಗೊಂದಿಷ್ಟು ಪರಮಾತ್ಮ ಸೇರಿದಾಗ 
ನಿಶೆ ಏರಿದ ಹಾಗೆ ಅವುಗಳದೇ ಲೋಕದಲ್ಲಿ 
ತೇಲಾಡುವ ಪಕೀರನಂತೆ ... ನನ್ನ  ಕನಸುಗಳು ..

ಬೇಕಿಲ್ಲ ಯಾವ ದೊಣ್ಣೆ ನಾಯಕನ ಕಟ್ಟಪ್ಪಣೆ
ಮನಸಲ್ಲಿ  ಹಾಡುವ ಹಾಡು ಕುಣಿತಗಳಿಗೆ 
ಚಂದ್ರ ನಕ್ಷತ್ರಗಳೇ ಸಂಯೋಜಕರು 
ಕೇಳಿ ಕಿವಿಗೊಟ್ಟು ... ಕನಸುಗಳ ಲೊಕದಲ್ಲೊಂದು 
ನನ್ನದೇ ಕಥಾಮಂಜರಿ ..
ರಸವತ್ತಾದ ಕನಸುಗಳಿಗೊಂದು  ಮರೀಚಿಕೆ ಕಥಾನಾಯಕಿ..

ನಾಚಬೇಕು ಕಥಾನಾಯಕಿ .. ಪಕೀರನ ವರ್ಣನೆಗಳಿಗೆ ..
ಬಿಟ್ಟು ಕೊಡುವುದಿಲ್ಲ ಒಂಟಿಯಾಗಿ ..
ತಂಗಾಳಿ ಬೀಸಿ ಮುಸ್ಸಂಜೆ ಕೆಂಪೆರುತ್ತದೆ.. ಜೊತೆಗೊಂದಿಷ್ಟು 
ಚುಕ್ಕಿ ತಾರೆಗಳೂ ಮುದಗೊಳ್ಳುತ್ತವೆ ..
ಪ್ರಕೃತಿಯೂ ಸಿಂಗಾರಗೊಳ್ಳುತ್ತವೆ..
ನವ ವಧುವಿನಂತೆ .. 

ಪಕೀರನ ಕನಸುಗಳಿವು ... ಮನಸು ಪೂರ್ಣ ಬೆತ್ತಲೆ ..
ಬಾವನೆಗಳ ಅಡಗಿಸಿ ಮೇಲಿನ ಅಲಂಕಾರಗಳಿಲ್ಲ..
ಒಪ್ಪ ಓರಣಗಳಿಲ್ಲ ..
ಕನಸಿನ ಲೋಕಕ್ಕೆ ಕಾಲಿಡಬೇಕು ಒಮ್ಮೆ ..
ಪಕೀರನ ಲೋಕವಿದು .
ಏನಿಲ್ಲ !!!... ಏನಿಲ್ಲದಿರಲಿ... 
ಜುಟ್ಟಿಗೆ ಮಲ್ಲಿಗೆಯಂತೂ ಇದೆ .. ಒಳಬಂದವಳಿಗೆ 
ಗೊತ್ತು ... ಪಕೀರನ ಕನಸುಗಳು ...
ಇವನಿಗೆ ಮಾತ್ರ ಬಚ್ಚಿಟ್ಟು ಕೊಂಡಿದ್ದೆ ಬಂತು ..
ಹೊರಬರಲು ಗೊತ್ತಿಲ್ಲ ... ತನ್ನದೇ ಕನಸುಗಳ ಲೋಕದಿಂದ ... 






Thursday, October 4, 2012


ಇನ್ನೂ ಹೇಳಲಾಗದೆ ಉಳಿದುಹೋಗಿದೆ ನನ್ನಲ್ಲಿ 
ನಿನ್ನನರಸಿ ಬಂದ ಮಾತುಗಳ ತಡಕಾಡಿದ ಮನಸೀಗ 
ಒಂಟಿತನದ ನಿತ್ಯ ಸಂಗಾತಿ...
ಪಿಸುಗುಡುತ್ತಿವೆ ಇನ್ನೂ ಮನಸಿನೊಳಗೆ ..
ನಿನ್ನ ಕಂಡ ಕ್ಷಣದಲ್ಲಿ ಆಡುವ ಮಾತುಗಳಿಗಾಗಿ ..
ನಿನ್ನ ನೆನಪಾಗುವ ರಾತ್ರಿಗಳೀಗ  ಕಡುಗತ್ತಲು..
ಬೆಳದಿಂಗಳಿಲ್ಲ ...ಮಿನುಗೋ ನಕ್ಷತ್ರಗಳಿಲ್ಲ..
ಎಲ್ಲವೂ ನೀನಿರದೆ ಮಿನುಗುವುದನ್ನೇ ಮರೆತಿವೆ ..
ಸಿಂಗರಿಸಬೆಕಿತ್ತು ನನ್ನೆಲ್ಲ ಕನಸುಗಳ 
ಚುಕ್ಕಿ ಚಿತ್ತಾರಗಳಂತೆ..ನಿನ್ನ ಜೊತೆಗೂಡಿ 
ಆಸೆಯಿತ್ತು ನನ್ನ ಮನಕೂ ನೀ ಬಂದ ಆ ಕ್ಷಣ 
ನನ್ನ ಮನಸಿನೊಳಗೆ   ..
ತಡಬಡಾಯಿಸಿದ ಮಾತುಗಳು ...ಹೇಳಲು ನೂರಿದ್ದವು  ಮನಸಿನಾಳದ ಬಾವನೆಗಳು 
ಹೇಳಬೇಕಾದ ಮಾತುಗಳೆಲ್ಲ ನಾಚಿ ..
ಬರೀ ಮೌನಗಳೇ ಮಾತಾಗಿದ್ದವು ..
ಕಾತರವಿದೆ ಮನಸಿಗೀಗ ..ನೀ ಬರುವ ಕ್ಷಣಗಳ ..
ಮತ್ತೆ ಸಿಂಗರಿಸಬೇಕಿದೆ ..ನನ್ನೊಳಗಿನ ಕನಸುಗಳ 
ನಿನ್ನ ಜೊತೆ.... ಚುಕ್ಕಿ  ಚಿತ್ತಾರವಿಟ್ಟು 

Thursday, September 27, 2012


ಮೊನ್ನೆ ಚೂರು ಹರಿದಿತ್ತು ..
ಎಷ್ಟೋ ವರ್ಷಗಳಿಂದ ನನ್ನ ಅಪ್ಪಿದ್ದ ಆ ಹಳೆಯ ಚಾದರ 
ಅದೆಂತದೋ ಆಪ್ತತೆ ..ನನಗೂ ಅದಕೂ ..
ನನ್ನ ರಾತ್ರಿಗಳ ನಿತ್ಯ ಸಂಗಾತಿ ..
ಎಷ್ಟೋ ಕನಸುಗಳ ಬೆಚ್ಚಗಿರಿಸಿ ...ಕಣ್ಣೀರುಗಳ ಒರೆಸಿ ..
ನನ್ನ ಜತೆಗಿತ್ತದು ..
ಬಣ್ಣ ಮಾಸಿ ಹಳೆಯದಾಗಿದ್ದರೂ ಹೊಸದರ ಮೇಲೆ ಮನಸಾಗುತ್ತಿಲ್ಲ 
ಒಂದು ದಿನ ತೆಗೆದಿರಿಸಿ ಮತ್ತೆ ಅದನ್ನಪ್ಪಿದ್ದೆ 
ಅದಾದರೂ ಎಷ್ಟು ದಿನ ತಡೆದೀತು ??
ದಿನ ದಿನವೂ ನನ್ನ ಕಾಲಡಿಗೆ ಸಿಗುವ 
ಆ ಚಾದರ ...ಎರಡಾಗುವ ಮೊದಲು ಬಿಡಬೇಕು ...
ಏನಾಗಲಿ ಇವತ್ತೊಂದಿನ ....
ನಾಳೆ ಬದಲಿಸಿದರಾಯಿತು ....  

Saturday, September 1, 2012

ಮುಸ್ಸಂಜೆ


ಪ್ರತೀ ಮುಸ್ಸಂಜೆ ನಿನ್ನನಗಲುವ ವಿರಹದ ಸಮಯ 
ದಿನವೆಲ್ಲ ಕಣ್ಣಲ್ಲಿ ಕಣ್ಣಿಟ್ಟು ನಿನ್ನ ನೋಡಿ 
ಮುಸ್ಸಂಜೆಯಾಗಲು ವಿರಹ ವೇದನೆ 
ಹೋಗುವ ಮೊದಲೊಮ್ಮೆ  ನೋಡೋಣವೆಂದರೆ 
ತುಂಟ ಮೋಡಗಳ ಕೀಟಲೆ ..ನಿನ್ನ ಮರೆಮಾಚಿ 
ಹಕ್ಕಿ ಪಿಕ್ಕಿಗಳ ಕಲರವ ನೀ ಹೋಗುವ ಸಮಯ 
ಗಾಳಿಗೂ ವಿರಹದ ನಿಟ್ಟುಸಿರು ...ಮೆಲ್ಲನೆ ಮೇಲೇರಿದೆ 
ತುಂಡು ಮೋಡಗಳ ಚದುರಿಸಲು..
ಅಲ್ಲಲ್ಲಿ ಅಡಗಿ ಕುಳಿತ ನಕ್ಷತ್ರಗಳ ಸಾಲು ..
ಇದನ್ನೆಲ್ಲಾ  ನೊಡುತ್ತ ಉಳಿದೆ ನಾನು ಅಲ್ಲೇ ...
ಮುಂದೆನಾಗುವುದೂ ಎಂದು ...
ಚಂದಿರನ ಮುಖ ರಂಗು ಚೆಲ್ಲಿ ..
ಖುಷಿಯಿಂದ ಮುಗುಳ್ನಗುತ್ತಿದ್ದ ......

Thursday, July 26, 2012

ಕತ್ತಲೆ ಬೆಳಕಿನ ಆಟ



ಅದೊಂದು ಹಾಗೆ ಸುಮ್ಮನೆ ಬಾವಗಳ ಮಿಲನ 
ಬೆಳಕು ಕತ್ತಲೆ ನಡುವಿನ ಬದುಕಿನ ಆಟ..
ಅನಿವಾರ್ಯವದು ಬೆಳಕ ನಡುವೆ ಬದುಕಲು 
ಅವಶ್ಯಕತೆಯದು ಕತ್ತಲೆಯ ನೀರವ ಮೌನವ ತೊಡೆಯಲು ..
ಬೆತ್ತಲೆಯಾಗುವ ಅಪರಿಚಿತ ಬಾವನೆಗಳಿಗೊಂದು ಕಾಲಮಿತಿ 
ಬರಿದೇ ಬಾವನೆಗಳ ಸಮ್ಮಿಲನ ... 
ಬರಿಯ ನಿಟ್ಟಿಸುರುಗಳಷ್ಟೇ ... ಬೇಕಿಲ್ಲ ಸಂಬಂದಗಳ ಬೇರು 
ಬರಿಯ ಅವಶ್ಯಕತೆಯದು .. ಬದುಕ ಅನಿವಾರ್ಯವದು ..
ಕತ್ತಲೆಯ ಬದುಕಿಗೆ ಹೊಂದಿಕೊಂದವರೆಷ್ಟೋ .. ಕತ್ತಲೆಯಾಗುವುದೇ 
ಕಾಯುವರೆಷ್ಟೋ ... 
ಕತ್ತಲೆಯಾದರೆ ಕಾದು ನಿಲ್ಲಬೇಕು ಅವಶ್ಯಕತೆಯವರ ಹುಡುಕಿ ..
ಜಾಣ ವ್ಯವಹಾರವದು .. ಎಲ್ಲೆಂದರಲ್ಲಿ ಹುಡುಕುವ ಹಾಗಿಲ್ಲ 
ಚೌಕಾಸಿ ವ್ಯಾಪಾರ ... ಲಾಭವೂ ಇಲ್ಲ ನಷ್ಟವೂ ಇಲ್ಲ ..
ಬೆಳಕು ಹರಿಯುವ ಮುನ್ನ  ವ್ಯಾಪಾರ ಮುಗಿಸಬೇಕು ..
ಬೇಕಿಲ್ಲ ಯಾರ ಕಟ್ಟಪ್ಪಣೆ ಇಲ್ಲಿ ... ಮಾಡಿಲ್ಲ ಯಾವ ಚೌಕಟ್ಟು ಇಲ್ಲಿ ..
ಒಬ್ಬರಿಗದು ಅನಿವಾರ್ಯತೆ  ...ಹುಡುಕಿ ಬರುವವರ ಅವಶ್ಯಕತೆ ..
ಒಂದೊಂದು ಅವಶ್ಯಕತೆಗೂ ಹೊಂದಿಕೊಳ್ಳುವ ಅನಿವಾರ್ಯತೆ ,,
ದಣಿದ ಮನಕೆ ಸಿಗುವ ಕಾಂಚಾಣ  ಅವಡುಗಟ್ಟಿದ ನಿಟ್ಟಿಸುರೊಂದೆ  ....

Wednesday, June 20, 2012



ಇಂದೇಕೋ ಮನದಲ್ಲಿ ನಿನ್ನದೇ ಸೋನೆ ಮಳೆ ..
ನೆಲವೆಲ್ಲ ಹಸಿಯಾಗಿದೆ ..ಗೊತ್ತಿಲ್ಲ ಎಂದು ಪ್ರೀತಿ 
ಮೊಳಕೆಯೋಡೆಯುವುದೋ...

ಆಗಸದ ಮೋಡಕ್ಕೂ ನಿನ್ನಾಕರ್ಷಣೆಯ 
ತಡೆಯಲಾರದೆ ನಿನ್ನ ತಲುಪಲು 
ಮಳೆಯಾಗಿ ಸುರಿದು ಬಂದಿದೆ ...
ಗೊತ್ತಿಲ್ಲ ಮಳೆ ಸುರಿದ ರಭಸಕ್ಕೆ 
ನಿನ್ನೊಡಲ ತಲುಪುವುದೋ..

ನನ್ನ ಪ್ರೀತಿ ನಿನ್ನಲ್ಲಿ ಚಿಗುರಲು ನೀ 
ಹಸಿಯಾಗಬೇಕು ..ಮಳೆ ಸುರಿಯಬೇಕು 
ಬಿತ್ತಿದ ಪ್ರೀತಿಯೆಲ್ಲ  ಹಸಿರಾಗಿ 
ಮೊಳೆಯಬೇಕು .. 
ಮಳೆ ಸುರಿದು ಮನವೆಲ್ಲ    ತಂಪಾಗಿ 
ಹಸಿರಾದ ಮೇಲೆ ಕಾಮನಬಿಲ್ಲಿನ 
ಚಿತ್ತಾರ ಮೂಡಬೇಕು .. ನಿನ್ನೊಲವ ಸೇರಲು ..




Thursday, May 17, 2012


ಹಾಗೆ ಬಂದು ಸುಮ್ಮನೆ ಹೋಗಿ ಬಿಡಿ ಮೋಡಗಳೇ 
ಈಗಷ್ಟೇ ಸಿಂಗರಿಸಿದ್ದೇನೆ ಕನಸುಗಳ ನನ್ನ ಸಂಗಾತಿಗೆಂದು 
ಮಳೆಸುರಿಸಬೇಡಿ...
ಒಂದಷ್ಟು ಹಣತೆಗಳ ಹಚ್ಚಿಟ್ಟು , ಬೆಳದಿಂಗಳಿಗಾಗಿ ಕಾಯುತ್ತಿದ್ದೇನೆ 
ಈ ಮುಸ್ಸಂಜೆ ಬೆಳದಿಂಗಳಿಗೆ ಮಾತ್ರ ಆಮಂತ್ರಣ ..
ತಂಗಾಳಿಗೂ ಹೇಳಿಬಿಟ್ಟಿದ್ದೇನೆ .. ಕದ್ದು ಕದ್ದು ನೋಡ ಬೇಡವೆಂದು ,..
ನನ್ನವಳ ಜೊತೆಗೊಂದು ಸುಂದರ ಮುಸ್ಸಂಜೆಯ ನನಗೆ ಬಿಡು ..
ನಮ್ಮಿಬ್ಬರ ಆತುರಕ್ಕೆ ಸೂರ್ಯನೂ ನಾಚಿ ಮೊದಲೇ ಮರೆಯಾಗಿ 
 ಮುಸ್ಸಂಜೆಯ  ಕಳಿಸಿ ಕೊಟ್ಟಿದ್ದಾನೆ ..
ಹಂಚಿ ಕೊಳ್ಳುವುದಿದೆ ಎಷ್ಟೋ ಕನಸುಗಳ ಮುಸ್ಸಂಜೆ ಸಾಕ್ಷಿಯಾಗಿ ..
ಇಡೀ ರಾತ್ರಿ ಕೈ ಕೈ ಹಿಡಿದು ಆಗಸದ ನಕ್ಷತ್ರಗಳ ಪಾಲು ಮಾಡ ಬೇಕಿದೆ ..
ಕಾಲುಗಳ ನೀರಲ್ಲಿ ಬಿಟ್ಟು ಹಾಗೆ ಆಗಸವ ನೊಡುತ್ತ ಅಷ್ಟೂ ಬೆಳದಿಂಗಳ  
ಬೆಳಕನ್ನು ನನ್ನವಳ ಕಣ್ಣ ತುಂಬಬೇಕಿದೆ ..
ನಮಗಾಗೆ ಇರುವ ಮುಸ್ಸಂಜೆಯಿದು ಸುಮ್ಮನೆ ದೂರದಿಂದ 
ನಾಲ್ಕೇ ನಾಲ್ಕು ಹನಿಯ ನಯವಾಗಿ ನನ್ನವಳ ತುಟಿಯ ಮೇಲೆ  ಸುರಿಸಿಬಿಡು ..
ಬೆಳದಿಂಗಳ ಬೆಳಕಿಗೆ ನೀರ ಹನಿಗಳೆಲ್ಲ  ಮುತ್ತಾಗಲಿ..
ಆ ಮುತ್ತುಗಳನೆಲ್ಲ  ಬಚ್ಚಿಡಬೇಕಿದೆ  ನನ್ನೊಳಗಿನ ಕನಸುಗಳಲ್ಲಿ ...

Monday, April 23, 2012


ಕನಸುಗಳೂ ಹಠ ಹಿಡಿದಿವೆ ..
ನೀನಿಲ್ಲದ ಕಣ್ಣುಗಳ ಜೊತೆ ನಿದ್ದೆ ಹೋಗಲು..
ನೀ ನಂಬಿಸಿ ಹೋದ ಮೇಲೆ .. 
 ಕಣ್ಣ ರೆಪ್ಪೆಗಳಿಗೂ ನಿನ್ನದೇ ಚಿಂತೆ  ..
ಸುಮ್ಮಗೆ ಒಂದಕ್ಕೊಂದು ಪಿಸುಗುಡುತ್ತಾ 
ಯೋಚಿಸುತ್ತಿರುತ್ತವೆ ..
ಅಷ್ಟೆಲ್ಲ ದಿನಗಳು ನಿನ್ನ ಜೊತೆಗಿದ್ದ 
ಮನಸೀಗ ಒಂಟಿತನದ ನಿತ್ಯ ಸಂಗಾತಿ 
ಸುಮ್ಮಗೆ ಮೂಲೆಯ ಹಿಡಿದು ನಿನ್ನ ಹೆಸರ ಗೀಚುತ್ತಿದೆ ..
ಬಣ್ಣದಲ್ಲಿ ಗೀಚಿದ ಹೆಸರಿಗ ಅಸ್ಪಷ್ಟ ...
ಮನಸಿಗೂ ತಿಳಿಯುತ್ತಿಲ್ಲ ....ಒಂಟಿತನ ಬಿಡುತ್ತಿಲ್ಲ ..
ಜೊತೆ ಜೊತೆಗೆ ಇರುವ ಒಂಟಿತನವೀಗ 
ಕಣ್ಣ ರೆಪ್ಪೆಗಳಿಗೂ ಇಷ್ಟ ...
ಒಂದಷ್ಟು ಹೊತ್ತು ಪಿಸು ನುಡಿದು
ಕನಸಿನೊಳಗೆ ನೀನಿದ್ದಿಯೋ ಇಲ್ಲವೋ ಎಂದು ನೋಡಿ 
ಸುಮ್ಮಗೆ ನಿದ್ದೆ ಹೋಗುತ್ತಿವೆ .. 
ಕನಸುಗಳು ... ಈಗೀಗ ಮೌನಿಯಾಗಿವೆ ...
ಕೊನೆಯ ಉಸಿರಿನ ಮೌನ ...









Thursday, April 12, 2012


ಭೂಮಿಗೆ ಬಂದ ವರ್ಷದೊಳಗೆ ಕಲಿತಿದ್ದೆ 
ದಾರಿಗಳ ಗುರುತಿಸಲು ..
ಆಗ ಸ್ಪಷ್ಟವಿರಲಿಲ್ಲ ದಾರಿ ಯಾವುದೆಂದು 
ಕಂಡ ದಾರಿಯೆಲ್ಲ ಚೆನ್ನ ... ನಡೆಯುವ ಉತ್ಶಾಹ 
ನಡೆದದ್ದಷ್ಟೇ ಗೊತ್ತು .. 
ಹಲವಾರು ಏಳು ಬೀಳುಗಳು ... ಕೈ ಹಿಡಿದು ನಡೆಸುವ ಕೈಗಳಿತ್ತು..
ಭದ್ರವಾದ ಕೈಗಳು .. ಕುಶಿಯಿತ್ತು ಎಂದೂ ಬೀಳುವುದಿಲ್ಲ ಎಂದು ... 
ವರ್ಷ ಕಳೆದಂತೆ  ನಡಿಗೆ ಸ್ಪಷ್ಟ ವಿತ್ತು ..
ಉತ್ಸಾಹ ದಲ್ಲಿದ್ದ ನನಗೆ ಭದ್ರವಾಗಿ ಹಿಡಿದ ಕೈಗಳು ಬಿಟ್ಟು ಹೋದದ್ದು ಗಮನವಿರಲಿಲ್ಲ ..
ಕಣ್ಣ ಮುಂದೆ ಹಲವಾರು ದಾರಿಗಳು ..
ಹಲವಾರು ಮುಖಗಳು ... ಎಲ್ಲ ಒಳ್ಳೆಯವೇ ..ಪರಿಚಿತರೆ ..
ನಡೆಯುವ ಛಲ ... ತಪ್ಪಿಹೋಗಿತ್ತು ದಾರಿ ... 
ಹಿಂದೆ ನೋಡಿದರೆ ಹಿಡಿದು ನಡೆಸುವ ಕೈಗಳಿಲ್ಲ ..
ಮುಂದೆ ಏನಿದೆ ಅಂದು ನೋಡುವ ಆತುರ..
ತಪ್ಪಿದ ದಾರಿಯಾದರೇನು ಸರಿ ದಾರಿ ಸಿಗಬಹುದಲ್ಲ .. 
ಎನ್ನುತ್ತಲೇ ಸಾಗಿದ ದಾರಿ ...
ಕೊನೆಗೂ ಸಿಗಲಿಲ್ಲ ... ಕೈ ಹಿಡಿದು ನಡೆಸುವ ಕೈಗಳು 
ವಯಸ್ಸು ಮೀರಿತ್ತು ಸರಿ ದಾರಿ ಹುಡುಕುವ ಆಸೆ ಯಿತ್ತು 
ಕಾಲ ಮೀರಿದಂತೆ  ದಾರಿ ಗೋಚರವಾಗಿತ್ತು ... 
ಎಲ್ಲ ದಾರಿಗಳೂ ಅಲ್ಲಿ ಬಂದು ಸೇರಿತ್ತು ...
ಅಲ್ಲಿಂದ ಮುಂದೆ ಅದೊಂದೇ ದಾರಿ ... 

{ ಚಿತ್ರಕೃಪೆ : - ದಿಗ್ವಾಸ್ ಹೆಗಡೆ} 

Thursday, April 5, 2012



ನನ್ನ ಹುಡುಗಿ ಕೇಳಿದಳೊಮ್ಮೆ ನನ್ನ ,
ನನ್ನನ್ನೇಕೆ ಇಷ್ಟೊಂದು ಪ್ರೀತಿಸುವೆಯೆಂದು?
ನಾ ಹೇಳಿದೆ ಹುಡುಗೀ ,ಪ್ರೀತಿಗೆ ಕಾರಣ ಬೇಕೇ ?
ಆದರೂ ಹಠ ಹಿಡಿದಳವಳು
ಪ್ರೀತಿಗೆ ಕಾರಣವೇನೆಂದು ?
ಏನು ಹೇಳಲಿ ಹುಡುಗೀ ,ನನ್ನ ಪ್ರೀತಿಗೆ ಕಾರಣವ
ನೀನೆಲ್ಲಿ ಸುಂದರವಾಗಿರುವೆಯೆಂದು ಹೇಳಿದರೆ ,
ರಂಬೆ ಊರ್ವಶಿ,ಮೆನಕೆಯರು ಕೋಪಗೊಂಡು
ಆಮೇಲೆ ಶಾಪ ಕೊಟ್ಟಾರು.
ನಿನಗೀಗಿರುವ ಸೌಂದರ್ಯವೇ ಸಾಕಲ್ಲವೇ?
ನೀನೆ ಆಕರ್ಷಣೆಯ ಕೇಂದ್ರಬಿಂದು ,ನಿನ್ನ ಬಿಟ್ಟರೆ ಬೇರಿಲ್ಲ
ಎಂದೆಲ್ಲ ಹೇಳಲು ವಯಸ್ಸು ನನ್ನ ಬಿಡಬೇಕಲ್ಲ ,
ನಿನಗಿಂತ ಸುಂದರ ಹುಡುಗಿ ಎದುರಿಗೆ ಬಂದರೆ
ಕಣ್ಣು ಮುಚ್ಚಿಕೊಳ್ಳಲೇ ?
ಕೇಳಿಲ್ಲಿ ಹುಡುಗಿ
ಪ್ರೀತಿ ಹುಟ್ಟುವುದು ,ಸೌಂದರ್ಯದಿಂದಲ್ಲ,
ಹೃದಯದಾಳದ ಮನಸಿನಿಂದ ,
ಅದಕ್ಕೆ ಕಾರಣ ಬೇಕಿಲ್ಲಾ,
ಅದು ವಿನಾಕಾರಣ

Thursday, March 22, 2012


ಅದೊಂದು ದಿನ ನನ್ನ ಹಳೆ ಪುಸ್ತಕಗಳನ್ನು 
ಜಾಲಾಡಿದಾಗ ನನಗೆ ನೀ ಕೊಟ್ಟ ನವಿಲುಗರಿ 
ಸಿಕ್ಕಿತ್ತು .. 
ಅಲ್ಲೆಲ್ಲೋ ಪಾಪದ ನವಿಲು ಗರಿಬಿಚ್ಚಿ ಕುಣಿವಾಗ 
ಬಿದ್ದ  ಗರಿಯದು ..ನಿನಗದು ನಮ್ಮಿಬ್ಬರ ಪ್ರೀತಿಯ 
ಸಂಕೇತವಾಗಿತ್ತದು ..
ಆ ಬೆಳದಿಂಗಳ ನಡುವೆ ಮರದ ಕೆಳಗೆ 
ಬುಜದ ಮೇಲೆ ತಲೆಯಾನಿಸಿ ಪಿಸುನುಡಿದಿದ್ದೆ
ನನ್ನಾಣೆ .. ಈ ನವಿಲುಗರಿಯಲ್ಲಿದೆ ನನ್ನ ಹೃದಯ 
ಕಳೆಯಬೇಡ.. ಹೇಗೆ ಬಚ್ಚಿಡುತ್ತೀಯ ಕೇಳಿದ್ದಳವಳು..
ಸುಮ್ಮಗೆ  ಮುಂಗುರುಳ ಸರಿಸಿ , ನಕ್ಕು ಹೇಳಿದ್ದೆ .....
ಎಂದೂ ನಾ ನೋಡದ ಪುಸ್ತಕದಲ್ಲಿಡುತ್ತೇನೆ.. 
ಕಣ್ಣಂಚಿನ ಕಂಬನಿಯೊಂದು ಜಾರಿ ನನ್ನ ಎದೆಯ ಮೇಲೆ 
ಬಿದ್ದಿತ್ತು ...ನಾ ರಾಧೆ ,, ನೀ ಕೃಷ್ಣ .. ಹೀಗೆ ಇರಲಿ ನಮ್ಮಿಬ್ಬರ 
ಪ್ರೀತಿ ಎಂದು ಬಿಗಿದಪ್ಪಿದ್ದಳು ... 
ಅಲ್ಲೆಲ್ಲೋ ಮಿಂಚಿನ ಬೆಳಕು ಭುವಿಯ ಸೇರಿತ್ತು ..
ಅಲ್ಲೇ ಕೀಟಲೆ ಮಾಡಿದ್ದೆ ... ನೀ ರಾಧೆಯಾದರೆ .....
ರುಕ್ಮಿಣಿ ಯಾರು ಅಂದು ... 
ನೀ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೆ ... ರುಕ್ಮಿಣಿಯ ಮಾತು ಮರೆತು ಹೋಗಿತ್ತು ..
ಹಾಗೆ ಹೇಳಿದವಳೇ ಮೌನವಾಗಿದ್ದೆ ..
ನವಿಲುಗರಿಯೂ ಕನಸ ಕಂಡಿತ್ತು ..
ಎಂದೂ ನೋಡದ ಪುಸ್ತಕದಲ್ಲಿ ಶಾಶ್ವತವಾಗಿ ಇರುತ್ತೇನೆ ಎಂದು ..
ಪಾಪದ ನವಿಲುಗರಿ ... ಇನ್ನೂ ಹಾಗೆ ಇದೆ ..
ಇಂದೇಕೋ ನವಿಲು ಗರಿ ಮತ್ತೆ ನೆನಪಾಗುತ್ತಿದೆ ..
ಬಚ್ಚಿಟ್ಟುಕೊ ಎಂದ  ರಾಧೆಯೂ ಮೌನ ತಳೆದಿದ್ದಾಳೆ ... 







Saturday, March 17, 2012


 ಒಂದಷ್ಟು ಕನಸುಗಳ ಚಿತ್ತಾರ ಬಿಡಿಸಿ 
ಅದಕ್ಕೊಂದಿಷ್ಟು ಬಣ್ಣಗಳ ಹರವಿಬಿಡು..
ಮನದ ಗೂಡ ತುಂಬಾ ಅಲಂಕರಿಸಿಬಿಡುತ್ತೇನೆ..
ಸಿಂಗಾರಗೊಳ್ಳಲಿ ನನ್ನ ಮನಸೂ ಕೊಂಚ 
ನೀ ಕಾಲಿಡುವ ಮುನ್ನ ..
ಹೇಳಿದ್ದೇನೆ ಬಾನ ಚಂದಿರಗೆ ... ಸ್ವಲ್ಪ ಬೆಳಕ 
ಕೂಡಿಟ್ಟುಕೋ ..ಎಲ್ಲವ ಕಾಲಿ ಮಾಡಬೇಡ ...
ನನ್ನವಳು ಬಂದಾಗ ಬೆಳಗುವಿಯಂತೆ ..
ಬಾನ ಚುಕ್ಕಿ ಗಳೂ ಸಿದ್ದವಾಗಿಯೇ ಇವೆ ..
ನೀ ಬಂದಾಗ ಮನದ ಬಾಗಿಲ ಮುಂದೆ ರಂಗೋಲಿ ಬಿಡಿಸಲು ..
ಅಲ್ಲೆಲ್ಲೋ ನೋಡಬೇಡ ...ದಾರಿ ತೋರಿಸಲು 
ತಂಗಾಳಿ ಸಿದ್ದವಾಗಿಯೇ ಇದೆ ..
ನೀ ಬಂದೊಡನೆ ನನ್ನ ಮನದ ಕಡೆಗೆ 
ಅದು ನಿನ್ನ ಜೊತೆಗಿರುತ್ತದೆ ...
 ಸಿಂಗರಿಸಿಕೊಂಡಿವೆ ನೀ ಬರುವ ದಾರಿ ತುಂಬಾ ..
ಎಲ್ಲ ಹೂಗಳು ...ತಾವೇನು ಕಡಿಮೆ ಎಂದು ..
ದುಂಬಿಗಳಿಗೂ ರಜಾ ... ಎಲ್ಲ ಕೂಡಿ ಹಾಡಲು ಸಿದ್ದವಾಗಿವೆ ..
ಮಿಂಚು ಹುಳಗಳೂ ಮಿನುಗುತ್ತಿವೆ ನೀ ಬರುವ ಸುದ್ದಿ ಕೇಳಿ ..
ಮತ್ತೇಕೆ ತಡ ... ನಾ ಕಳಿಸಿದ ಬಾಳ ದೋಣಿ  ಬಂದಿದೆ 
ಹತ್ತಿ ಬಂದುಬಿಡು ... ನನ್ನ ಮನದ ಕಡೆಗೆ ...
ದಾರಿಯಂತೂ ತಪ್ಪುವುದಿಲ್ಲ ...ತಂಗಾಳಿ ನಿನ್ನ ಜೊತೆಗಿದೆ ... 

Friday, March 9, 2012



ನನ್ನವಳ ಮೈ ಗಂಧ ..ಎಷ್ಟು ಸುಗಂಧ ...
ನನ್ನವಳ ಮೈ ಗಂಧ ..ಎಷ್ಟು ಸುಗಂಧ ...
ಒಂದು ಸಲ ಪಾರಿಜಾತ .. ಮತ್ತೊಮ್ಮೆ ಶ್ರೀಘಂಧ 
ಮಗದೊಮ್ಮೆ ಗುಲಾಬಿ .. ಕೆಂಡಸಂಪಿಗೆ ...ಮಲ್ಲಿಗೆ 
ದಿನದಿನವೂ ತರಾ ತರಹದ ಸುವಾಸನೆ .. 
ನೋಡಬೇಕವಳ ಬಿಂಕ ಬಿನ್ನಾಣವ ..
ಒಮ್ಮೆ ಹಾದು ಹೋದರೆ ಸಾಕು ಸುತ್ತಮುತ್ತೆಲ್ಲ 
ಪಸರಿಸುವುದು ಅವಳ ಸುಘಂದ ...  
ಕೇಳಿದೆ ಅವಳ ಕಣ್ಣಲ್ಲಿ ಕಣ್ಣಿಟ್ಟು ..
ಕೇಳಿದೆ ಅವಳ ಕಣ್ಣಲ್ಲಿ ಕಣ್ಣಿಟ್ಟು .. 
ಪ್ರಿಯೆ ಇನ್ನಾದರೂ ಹೇಳಬಾರದ 
ಯಾವ ಅಗರ ಬತ್ತಿ ಫ್ಯಾಕ್ಟರಿ ಎಂದು ...

Thursday, March 8, 2012



ಸುಮ್ಮನೆ ಹಾಗೆ ಮೌನಿಯಾಗಿ ನೋಡುತ್ತಿರಬೇಡ 
ಮುಸ್ಸಂಜೆ ಕವಿದು ,ಕತ್ತಲು ಹರಿದು  ..
ಆಗಸದಲಿ ನಕ್ಷತ್ರಗಳ ಚಿತ್ತಾರ ಮೂಡುವ ಹಾಗೆ 
ನಿನ್ನ ಮನದ ಬಾವನೆಗಳ ತೆರೆದಿಡು 
ನನ್ನ ಮನದನ್ನೆ ...
ಸುಮ್ಮನಿರಬೇಡ ... ಕಾಲವೇನೂ ನಿಲ್ಲುವುದಿಲ್ಲ 
ಕಣ್ಣಲ್ಲಿ ಕಣ್ಣಿಟ್ಟು ನೋಡಿದರೇನು ಬಂತು ..
ಮನಸುಗಳು ಹತ್ತಿರ ಸರಿದರೆಷ್ಟು ಬಂತು ..
ಬಾವನೆಗಳೇ ಮೂಕವಾದರೆ ...ಸಮಯವೇನೂ ನಿಲ್ಲುವುದಿಲ್ಲ .
ಸುಮ್ಮನೆ ನೀ ನನ್ನ ನೋಡುತ್ತಿರಬೇಡ ..
ಎಷ್ಟು ಕಾಡಿದರೇನು ಮನುಸುಗಳೆರಡು ಕೂಡುವ 
ಕಾಲ ಬಂದಾಗ ಒಂದಾಗಲೇ ಬೇಕು ...
ಸುಮ್ಮನೆ ಅತ್ತಿತ್ತ ನೋಡಬೇಡ ..
ಆಗಸದ ಚಂದಿರನ ಆಣೆ ..
ಸುಮ್ಮನೆ ಅವನನ್ನೂ ಕಾಯಿಸಬೇಡ ..
ಮತ್ತೂ ಕಾಯಿಸಬೇಡ ನೀ ಮೌನವಾಗಿ ..
ಕಾಲ  ಸರಿಯುತ್ತಿದೆ .. ಋತುಗಳೂ ಬದಲಾಗುತ್ತವೆ ..
ವಸಂತ ಕಳೆದು ಮಾಮರ ಚಿಗುರೊಡೆಯುತ್ತಿದೆ ..
ಕಾಯುತ್ತಿವೆ ಇನ್ನೂ ನಕ್ಷತ್ರಗಳು ದಿನವೂ 
ಚಿತ್ತಾರ ಮೂಡಿಸಿ ... ಚಂದಿರ ಬೆಳಕ ಸೂಸಿ ...
ನೀ ... ಮೌನ ಮುರಿಯುವುದನ್ನೇ ... 

Monday, February 27, 2012

ಹೊಟ್ಟೆ ಪುರಾಣ



ಇತ್ತಿತ್ತಲಾಗಿ ನನಗೂ ಚಿಕ್ಕದಾಗಿ ಹೊಟ್ಟೆ ಬರುತ್ತಿದೆ 
ಸುಖಾ ಸುಮ್ಮನೆ ಸ್ಲಿಮ್ ಆಗಿ ಇದ್ದ ನಾನು 
ಸ್ವಲ್ಪ ದಪ್ಪನಾಗುತ್ತಿದ್ದೇನೆ ... ಎಲ್ಲ ಕಡೆಯೂ ಅಲ್ಲ 
ಹೊಟ್ಟೆ ಮಾತ್ರ ... 
ಓಡಾಟವಿಲ್ಲ , ಬಸ್ ಹಿಡಿದು ಒಡಬೇಕಾಗಿಲ್ಲ..
ಸುಮ್ಮನೆ ಕುಳಿತಲ್ಲಿಯೇ ಕೆಲಸ ..   ಹೊಟ್ಟೆ ಮಾತ್ರ ತನ್ನ ಇರುವನ್ನ 
ತೋರಿಸುತ್ತಿದೆ .. 
ಅದೊಂದು  ಕಾಲವಿತ್ತು ಎಲ್ಲ ಗಾಳಿಯನ್ನೂ ಹೊಟ್ಟೆಯೊಳಗೆ 
ತುಂಬಿ ನನಗೂ ಹೊಟ್ಟೆ ಇದೆ ಎಂದು ತೋರಿಸಬೇಕಾಗಿತ್ತು 
ಈಗ ಉಸಿರ ಒಳಗೆ ಎಳೆದು ಕೊಂಡರೂ ಹೊಟ್ಟೆ ಮಾತ್ರ ಹೊರಗೆ ಇಣುಕುತ್ತದೆ 
ಪಾಪದ  ಪ್ಯಾಂಟು ಗಳೋ ಹೊಟ್ಟೆಯ ಮುಚ್ಚಿಡಲು ಹರಸಾಹಸ ಮಾಡುತ್ತವೆ  
ಮೊದಮೊದಲು ಹೊಟ್ಟೆ ಇರುವವರನ್ನು ಕಂಡರೆ 
ಒಂಥರ ...ಥೋ  ಹೇಗಪ್ಪ ಇವರ ಹೊಟ್ಟೆಗೆ ಜಾಗ ಬಿಡುವುದು ??
ಅವರೋ ತಮ್ಮ ಹೊಟ್ಟೆಯ ಜೊತೆ ನನ್ನನ್ನೂ ತಳ್ಳಿಕೊಂಡು  ಹೋಗುತ್ತಿದ್ದರು 
ಈಗ ಚಿಂತೆ ಶುರುವಾಗಿದೆ ನನ್ನ ಹೊಟ್ಟೆಯೂ  ಇವರ ಸಾಲಿಗೆ  ಸೇರುವದ ??
ಬೆಳಗ್ಗೆದ್ದು ಓಡಲು ಹೊಟ್ಟೆಗೂ ಬೇಸರ ...ಚಳಿಗೆ ಸುಮ್ಮನೆ 
ಮಗ್ಗಲ ಬದಲಿಸುತ್ತದೆ ...
ಜಿಮ್ಮು ಸ್ವಿಮ್ಮು ಅಂತ ಹೋದರೆ ಹೊಟ್ಟೆಯ ಜೊತೆ 
 ಉಳಿದವಕ್ಕೆಲ್ಲ ಉಪವಾಸ ... 
ಹೊಟ್ಟೆಗೂ ನಾಲಿಗೆಗೂ ಅದಾವ ಜನುಮದ ದ್ವೇಷವೋ ..
ಮನಸ್ಸು ಯಾವಾಗಲು ನಾಲಿಗೆಯ ಪರ ..
ಆಗಾಗ ಕೇಳುತ್ತಿರುತ್ತದೆ ಏನು ನಿನಗೊಬ್ಬನಿಗಾ ಹೊಟ್ಟೆ ಇರುವುದು ?
ಏನೋ ಇನ್ನು ಚಿಕ್ಕದು .ಸ್ವಲ್ಪ ಓಡಾಡಿದರೆ .ಕಡಿಮೆಯಾಗುತ್ತದೆ ಬಿಡು ಅನ್ನುತ್ತದೆ..
ಆದರೂ ಉಳಿದ ಹೊಟ್ಟೆಗಳು ಕೆಂಗಣ್ಣು ಬೀರುತ್ತಿವೆ ..
ನಮಗೆ ಜಾಗವಿಲ್ಲ ನೀ ಮತ್ತೆ ಬರಬೇಡ ಎಂದು ...




Thursday, February 23, 2012



ಅದಾವ ಆಕರ್ಷಣೆಯೋ ನಾ ಕಾಣೆ ..
ನೀ ಮಾತನಾಡುವಾಗ ನಿನ್ನ ಕಣ್ಣನ್ನೇ ನೋಡುತ್ತಾ 
ಕುಳಿತಿರುವ ಮೌನಿ ನಾನು ..
ಯಾವ ಬಂಧವೋ ನಿನ್ನಲ್ಲಿ , ನೋಡುತ್ತಲೇ  ಕನಸುಗಳೆಲ್ಲ
ಬಿಕರಿಯಾಗಿವೆ ... 


ನೂರು ಸಾರಿ ನಿನ್ನ ನೋಡಿ , ತಿರು ತಿರುಗಿ ನೋಡುವಾಸೆ 
ಮತ್ತೆ  ಕಾಡಿದೆ  ... 
ಪ್ರೀತಿ  ಹೃದಯದೊಳಗೆ ಬಚ್ಚಿಟ್ಟ  ನಿಧಿ ..
ಒಮ್ಮೆ ನನ್ನ ಹೃದಯದ ಬಾಗಿಲ ಕಡೆ ಇಣುಕಿ ನೋಡು 
 ನಿನಗಷ್ಟೆ ಇರುವ ಪ್ರೀತಿ .. ನನಗಲ್ಲಿ ಖಾಸಗಿ ಸಂಬ್ರಮ ..


ಸುಮ್ಮನೆ ಕೈ ಹಿಡಿದು ಬಿಡು ....ನಾವಲ್ಲಿ ನಡೆವ ಹಾದಿ 
ಎಂದೂ ಕೊನೆಯಾಗದು ..
ಕಣ್ಣನು ಮುಚ್ಚಿ ನೋಡಿದರೂ ಅಲ್ಲಿ  ಕಾಣುವ ಲೋಕ ಉನ್ಮಾದಕ 


ನನ್ನ ಹೃದಯದ ಹಾದಿ ಹಿಡಿಯಲೇ ಬೇಕು ನೀ ಸುಮ್ಮನೆ 
ಸೆಳೆದುಬಿಡು ನಿನ್ನ ಒಲುಮೆಯೂರಿಗೆ ....
ಅಲ್ಲಿ ನನ್ನ ನಾನು ಮರೆವಂತೆ ಮಾಡು..












Thursday, February 9, 2012



ಇನ್ನಷ್ಟು ದಿನ ಹೇಳುವುದಿಲ್ಲ ಹುಡುಗೀ , 
ನಿನ್ನೊಲವಿನ ಬಿಸಿ ತಟ್ಟಿದ್ದರೂ,ನಾ ಮಾತ್ರ ಹೀಗೇ,
 ಏನೂ ಗೊತ್ತಿಲ್ಲದ ಹಾಗೆ ಒಳಗೊಳಗೇ ಮನಸಿನಂಗಳದಲ್ಲಿ,
 ಎದೆಬಿಚ್ಚಿ ಮಾತನಾಡುತ್ತಿರುತ್ತೇನೆ, 
ಹೇಳಲೋ ಬೇಡವೋ ಎಂಬ ವಕಾಲತ್ತುಗಳ, 
ನಡುವೆ ಕಾದಾಡುತ್ತಿರುತ್ತೇನೆ., 
ಇನ್ನಷ್ಟು ದಿನ ಹೇಳುವುದಿಲ್ಲ ಹುಡುಗೀ , 
ಅದೆಸ್ಟು ಆಮಿಷಗಳ ಮೆಟ್ಟಿ ನನ್ನೊಟ್ಟಿಗಿರುತ್ತದೋ,
 ನಿನ್ನ ಮನ ? ಕಾದು ನೋಡುತ್ತೇನೆ ,
 ಕಾಯಬೇಕು ಹುಡುಗೀ ,,
 ಕಾದಷ್ಟೂ ನಮ್ಮೊಳಗಿನ ಹುಸಿ ಬಯಲಾಗಬೇಕು , 
ಭ್ರಮೆ ಬೆತ್ತಲಾಗಬೇಕು ,ಪೊರೆ ಹರಿಯಬೇಕು ..., 
ಇಲ್ಲ ಹುಡುಗೀ ,,,ಇನ್ನಷ್ಟು ದಿನ ಹೇಳುವುದಿಲ್ಲ,
 ನಾ ನಿನ್ನ ಪ್ರೀತಿಸುವುದ,
 ನಿನ್ನೊಲವಿನ ಬಳ್ಳಿ ಚಿಗುರಲಿ ನನ್ನೊಳಗೂ ಟಿಸಿಲೋಡೆಯುತ್ತದೆ, 
ಹಾದಿಗುಂಟ ಮುಳ್ಳು ಕಂಟಿಗಳ ದಾಟಿ ,
 ಮುಂದೊಂದು ದಿನ ನನ್ನ ಬೆಸೆಯುತ್ತದೆ ., 
ಅಲ್ಲಿಯವರಗೂ ನಾ ಮಾತ್ರ ಹೀಗೇ, ಏನೂ ಗೊತ್ತಿಲ್ಲದ ಹಾಗೆ ...,
 ನಿನ್ನ ಮನಸಿನಂಗಳದಲ್ಲಿ ಎದೆ ಬಿಚ್ಚಿ, ಮಾತನಾಡುತ್ತಿರುತ್ತೇನೆ

Wednesday, January 25, 2012

ದಾರಿ


ಗಮ್ಯವೆಂಬುದಿಲ್ಲ ದಾರಿಗೆ ..
ಒಂದರ ಜೊತೆ ಮತ್ತೊಂದು ,ಹೀಗೆ ಕೂಡುತ್ತ ಸಾಗುತ್ತದೆ
ನಡೆವ ದಾರಿಯಲ್ಲಿವೆ ಕಲ್ಲು ಮುಳ್ಳುಗಳು ..
ಪಯಣ ಸುಲಭವಲ್ಲ , 
ದಾರಿ ಸವೆದಿದೆ .. ಬಹುಶ ಸರಿಯಾದ ದಾರಿಯಿರಬೇಕು 
ಅಂದುಕೊಂಡು ನಡೆದರೂ ಕೆಲವೊಮ್ಮೆ ತಪ್ಪಿಸಿಬಿಡುತ್ತದೆ..
ಹೊಸ ಹೊಸ ಕವಲುಗಳು ಎಲ್ಲ ದಾರಿಗಳಿಗೂ ..
ಸಂಬಂದಗಳ ಹಾಗೆ .. .. ಬಿಟ್ಟು ತನ್ನದೇ ದಾರಿ ಎಂದು 
ಹೋಗಿರಬೇಕು ...
ಹೊಸ ದಾರಿ ಹಿಡಿದು ಹೋಗುವುದೇನು ಸುಲಭವಲ್ಲ ..
ಅಲ್ಲಿ ಮತ್ತೂ ದೊಡ್ಡ  ಹಳ್ಳ ಕೊಳ್ಳ ಕಂದರಗಳಿರುತ್ತದೆ..
ಸರಿ  ದಾರಿಯ ಬಿಟ್ಟು ಹೊಸ ಹಾದಿಯ ಹಿಡಿದು ಹೋದವರಿಗೆನು ಗೊತ್ತು ..
ಅಲ್ಲಿ ದಾರಿಯೇ ಇಲ್ಲ ಹೋದದ್ದೇ ದಾರಿ ಎಂದು ..
ದಾರಿಯೂ ಹಾಗೆ ಹೊಸ ಹೊಸ ಸಂಬಂದಗಳ ಜೋಡಿಸುತ್ತದೆ ..
 ಸಂಬಂದಗಳ ಕೊಂಡಿಯನ್ನೂ ಕಳಚುತ್ತದೆ ..
ದಾರಿಗೆ ಗಮ್ಯವೆಂಬುದಿಲ್ಲ ..ಅದು ಯಾವಾಗಲೂ ಹಾಗೆ .. 
ಹೊಸ ಹಾದಿಯ ಹಿಡಿದು ಹೊರಟವರ ದಿಕ್ಕು ತಪ್ಪಿಸುತ್ತದೆ 
ಹಾಗೆ ಹಳೆ ಹಾದಿಯಲ್ಲೇ ಹೋಗುವವರಿಗೆ 
ಹೊಸ ದಾರಿಯ ಕೊಂಡಿ ಕೂಡಿಸುತ್ತದೆ ...


Monday, January 16, 2012


 ಒಮ್ಮೆ ಇಣುಕಿ ನೋಡು ನನ್ನೊಳಗಿನ ಕನಸಿಗೆ ..
 ಸುಮ್ಮಗೆ ಬಲಗಾಲಿಟ್ಟು ಒಳಗೆ ಬಂದು
ಒಂದಷ್ಟು  ದಿನ ಹಾಗೆ ಸುಮ್ಮನೆ ಅತಿಥಿಯಾಗಿದ್ದುಬಿಡು ,
ನಿನಗಾಗಿಯೇ ತೂಗುತ್ತಿದೆ ಕನಸಿನ ಪಲ್ಲಂಗ ..
ಸುಮ್ಮನೆ ಹೆಗಲಿಗೆ ತಲೆ ಇಟ್ಟು ಕೈಯ ಬಳಸಿಬಿಡು ...
ನಮಗಾಗಿಯೇ ಮಿನುಗುತ್ತಿವೆ ಸಾವಿರ ನಕ್ಷತ್ರಗಳು ..
ಸುಮ್ಮನೆ ಬರೆದು ಬಿಡು ನನ್ನ ನಿನ್ನಯ ಹೆಸರ ..
ಶಾಶ್ವತ ವಾಗಿ ಮಿನುಗುತ್ತಿರಲಿ ಆ ಚಂದ್ರನ ಜೊತೆ .
ಸುಮ್ಮಗೆ ಕಾಪಿಟ್ಟುಕೋ...ಒಂದಷ್ಟು ಹಾಗೆ 
ಬೇಕಾಗಬಹುದು  ಮುಂದೊಂದು ದಿನ,
ನಮ್ಮ ಕನಸಿನ ದಿಬ್ಬಣವ ಅಲಂಕರಿಸಲು ..
ನಮ್ಮಿಬ್ಬರ ಕನಸಿಗೆ ಸಿದ್ದವಾಗಿಯೇ ಇದೆ 
ಒಡ್ಡೋಲಗ ,,,ಹಾಗೆ ಸಾಗಿಬಿಡಲಿ ಒಂದು ಸುಮುಹೂರ್ತ 
ಸಮಯದಲಿ ..ಕನಸಿನೂರಿನ ಕಡೆಗೆ ..








Tuesday, January 10, 2012



ಮನಸೇಕೆ ಹೀಗೆ .. ಬರೀ ಗೊಂದಲಗಳು 
ಅರ್ಥವಿರುವ ಅರ್ಥವಿಲ್ಲದ ಗೊಂದಲಗಲೊಳಗೆ 
ಹುದುಗಿಕೊಂಡಿರುವ ನೂರಾರು ಯೋಚನೆಗಳು ..
ಎಲ್ಲಿಂದಲೋ ಬಂದು ಎಲ್ಲಿಗೋ ಹಾರುವ ಹಕ್ಕಿಗಳ ಹಾಗೆ ..
ಸಾಗುತ್ತಲೇ ಇರುವ ಯೋಚನೆಗಳು ..
ಎಲ್ಲಿ ಹೋದರು ಬೆಂಬಿಡದ ನೆರಳಿನ ಹಾಗೆ ..
ಸದಾ ಹಿಂಬಾಲಿಸುವ ನೆನಪುಗಳು ... 
ಆ ನೆನಪುಗಳಿಗೆ ಜೋತುಬೀಳುವ ಸಾವಿರ ಕನಸುಗಳು ...
ಮಾಡುವ ಹರಸಾಹಸಗಳು ...
ಪ್ರತಿ ಬಾರಿಯೂ ಸೋತಾಗ ಇರುವುದು 
ಬರೀ ಗೊಂದಲಗಳು ...