Tuesday, December 27, 2011

ಮೆರವಣಿಗೆ



ಒಮ್ಮೆ ನಿನ್ನೆರಡೂ  ಕೈಗಳ ನೀಡು ...
ಹಾಗೆ ನವಿರಾಗಿ ಮದರಂಗಿಯ ಬಿಡಿಸಿಬಿಡುತ್ತೇನೆ 
ಚಿತ್ತಾರವಾಗಿಬಿಡಲಿ ಕೈಗಳರಡೂ ...
ಮೆಲ್ಲಗೆ ಕಾಡಿಗೆಯನ್ನೂ ಬಳಿದು ಬಿಡುತ್ತೇನೆ ಆ ಕಣ್ಣ ರೆಪ್ಪೆಗಳಿಗೆ  ..
ಅಲಂಕಾರವಾಗಿಬಿಡಲಿ ....ನಿನಗೆ 
ನನ್ನ ಕನಸಿನೂರಿಗೆ ಕರೆದೊಯ್ಯುವ ಮೊದಲು ..
ಸಿಂಗರಿಸಿ ನಿಂತಿದೆ ಪ್ರಕೃತಿ ..
ನೀ ಬರುವ ಸುದ್ದಿ ಕೇಳಿ ...ತನ್ನೆಲ್ಲ ಚೆಲುವ ಹರಡಿ ..
ನಿನಗೇ ಸಾಟಿಯಾಗಲು ...
ಒಮ್ಮೆ ನಕ್ಕಿಬಿಡು ಸಾಕು ಪ್ರಕೃತಿಯ ಪೆದ್ದತನಕ್ಕೆ ...
ಕಾಲಿಟ್ಟ ಕ್ಷಣವೇ ಸಾಕು ..ಭುವಿ  ಬಿಸಿಯಾಗಿ ..ಆವಿಯಾಗಿ 
ಮೋಡ ಕಟ್ಟಿ ಹನಿಯೊಡೆದು ಪ್ರಕೃತಿ  ಒದ್ದೆಯಾಗಲು...
ಅಲ್ಲಾಗಲೇ ಮಾವಿನ ತಳಿರ ತೋರಣಗಳು ಸಿಂಗರಿಸಿವೆ..
ನಿನ್ನ ಕಾಯುತ್ತ ... ಮನೆಯೆಲ್ಲ ರಂಗೊಲಿಯಾಗಿವೆ ..
ನಿನ್ನ ಪಾದ ಸೋಕಲು ...
ಮನೆಯವರೆಲ್ಲ ಸಿಂಗರಿಸಿ ನಿಂತಿದ್ದಾರೆ ವಾದ್ಯ ಮೇಳಗಳೊಡನೆ ..
 ನಿನ್ನ ಎದುರುಗೊಳ್ಳಲು ..
ನಾಚಬೇಡ ... ನೋವಾಗಲೂಬಹುದು ನನಗೆ ನೀ ನನ್ನ ಕೈ ಹಿಸುಕಿದ ರೀತಿಗೆ ..
ಎಲ್ಲ ನಿನ್ನವರೇ ... 
ಈಗಷ್ಟೇ ಗೋಡೆಯ ಸಿಂಗರಿಸಿದ್ದಾರೆ ...ನಿನ್ನ ಹಸ್ತಾಕ್ಷರ ಮೂಡಿಸಲು ..
ಹಾಗೆ ಬಳಿದುಬಿಡು ಗೋಡೆಯ ತುಂಬೆಲ್ಲ ...ಏಳೂ ಬಣ್ಣಗಳ ..
ನಮ್ಮಿಬ್ಬರ ಜೀವನದ ತುಂಬೆಲ್ಲ ...
ಪ್ರವೇಶ ವಾಗಿಬಿಡಲಿ ನನ್ನ ಕನಸಿನ ಲೋಕಕ್ಕೆ ...
ನೀ  ಕಾಲಿಟ್ಟ ಗಳಿಗೆಯಿಂದ ...
ಸಿಂಗಾರಗೊಳ್ಳಲಿ ಅದೂ  ಕೊಂಚ ...

Saturday, December 17, 2011




ಕನಸ ಕಾಣಲು ಬಿಡು  ಹಾಗೆ ನನ್ನ , ...
ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಕೊನೆಯವರೆಗೂ ..
ಕಾಣುವುದಿದೆ ಎಷ್ಟೋ ಕನಸುಗಳ ...ನಿನ್ನ ಜೊತೆ ..
ನನಸಾಗುವುದೋ ....ಕನಸಾಗುವುದೋ ... 
ನನಸು ಹೃದಯದೊಳಗಿನ ಮರೀಚಿಕೆ ..
ನೋಡ ನೋಡುತ್ತಲೇ ಕನಸಾಗಿಬಿಡುವುದು..
ಸಾಕಿನ್ನು ಕಣ್ಣ ಅಂಚುಗಳ ಒಂಟಿತನ ..  
ಹಾಗೆ ಮುಚ್ಚಿಬಿಡು ಒಮ್ಮೆ ನನ್ನ ಕಣ್ಣುಗಳ ...
ನಿನ್ನ ಮುಖವೇ ಶಾಶ್ವತವಾಗಿ ಬಿಡಲಿ ಈ ಕಣ್ಣುಗಳಿಗೆ ..
ಈ ಜೀವ ಹೋಗುವ ಮುನ್ನ ...



Thursday, December 15, 2011



ಕನಸ ಕಟ್ಟುವ ಮುನ್ನ ...ಹೂವ ಅಲಂಕರಿಸುವ ಮುನ್ನ ...
ಒಮ್ಮೆ ಬಂದುನೋಡು ನನ್ನ ಮನದಂಗಳಕೆ ...
ನಿನ್ನ ಹೆಸರ ಕೆತ್ತುವ ಮುನ್ನ ...




ಕನಸುಗಳೀಗ  ಕಾಲೀ ಹಾಳೆಗಳ ಗಾಳೀಪಟ ...
ನಿನ್ನಲ್ಲಿ ಹಾರಿ ಬಿಡುವ ಮುನ್ನ ...
ಬರೆಯಬೇಕಿದೆ ಮನದನ್ನೆ  ..ನಿನ್ನ ಚಿತ್ತಾರವನ್ನ ..


ನೀನಿಲ್ಲದ  ಬಾವನೆಗಳ ತೂಗುಯ್ಯಾಲೆ ..
ಕಣ್ಣ ರೆಪ್ಪೆಗಳಿಗೂ   ಒಂಟಿತನದ ಛಾಯೆ ..
ಆಗಸಕೆ ಕಟ್ಟಿದ ಉಯ್ಯಾಲೆಯೀಗ ...
ಸುಮ್ಮನೆ ಸಿಂಗರಿಸಿ ನಿಂತಿದೆ ... ನಮ್ಮಿಬ್ಬರ ಬರುವಿಕೆಯನ್ನ ..














Tuesday, December 6, 2011



ಮಳೆಗೂ ಅವಳಿಗೂ ಅದೆಲ್ಲಿನ ಸಂಬಂಧವೋ ... 
ಪ್ರತೀ ಸಲ ಮಳೆ ಬೀಳುವಾಗಲೂ ಅವಳು ನೆನಪಾಗುತ್ತಾಳೆ ..
ಬೀಳುವ ಪ್ರತಿ ಹನಿಯ ಜೊತೆ ಅವಳೂ ಮನಸ ತಂಪನೆರೆಯುತ್ತಾಳೆ...
ಇದೆ ಮಳೆಯೇ ತಾನೇ ನಮ್ಮಿಬ್ಬರ ಒಂದು ಮಾಡಿದ್ದು ...
ಪಕ್ಕದ ಮರದ ರೆಂಬೆ ಮುರಿದು ಬೀಳುವಾಗ ಚೀರಿ ತಬ್ಬಿ ಹಿಡಿದದ್ದು ...
ಒಂದೊಂದು ಹನಿಯೂ ಕೂಡ ಅವಳ ನೆನಪ ಕಾಡುತ್ತಿವೆ ..
ಅದೇ ಹನಿಗಳನಲ್ಲವೇ ಇಬ್ಬರೂ ನಾಲಿಗೆ ಚಾಚಿ ಹೀರಿದ್ದು ...
ಪ್ರತೀ ಸಲ ಸುರಿಯೋ ಮಳೆಗೆ ಅಂಗಾತ  ಮೈಚಾಚಿ...
 ಮಳೆಗೆ ಕಣ್ಣು ಕೊಟ್ಟು ನೋವಾದಾಗ ತಬ್ಬಿ ಮೆಲ್ಲಗೊಂದು 
ಮುತ್ತನೀದಿದ್ದು ...
....................................................
ಇಂದೂ ಮಳೆ ಬೀಳುತ್ತಿದೆ ... ಅವಳ ನೆನಪೂ ಕೂಡ ...
ಆದರೆ ಆ ಮಳೆಯ ಜೊತೆ ಅವಳೂ ಭೂಮಿ ಸೇರಿದ್ದಾಳೆ ...
ನನ್ನ ಕಣ್ಣೀರೂ ಸಹ ..... 

Friday, December 2, 2011

ಕವನವೆಂದರೆ ...



ಕವನ ಬರೆಯುವುದು ಸುಲಭವಲ್ಲ ಬರೆದದ್ದೆಲ್ಲವೂ ಕವನವಾಗುವುದಿಲ್ಲ ..
ಶಬ್ದಗಳ ಪೋಣಿಸಬೇಕು ಮನಸ ಮೂಲೆಯಿಂದ ಆರಿಸಿ 
ಪದಪುಂಜಗಳ ಜೋಡಿಸಬೇಕು ...
ಕನಸ ಲೋಕದೊಳಗೆ ಲಗ್ಗೆಯಿಡಬೇಕು...
ಒಂದೊಂದೇ ಕನಸುಗಳ ಹೆಕ್ಕಿ ಸ್ವಲ್ಪ ಬಣ್ಣ ಬಳಿದು 
ಜುಳು ಜುಳು ಹರಿವ ತೊರೆಯ ನೀರಲ್ಲಿ ದೋಣಿಯಂತೆ 
ಹರಿಯ ಬಿಡಬೇಕು ....
ಒಮ್ಮೆ ಹರಿಯಬಿಟ್ಟರೆ ಅದು ಗಮ್ಯದವರೆಗೆ ಸಾಗಬೇಕು ...
ಅಲ್ಲಿಯವರೆಗೂ ಮರೆನಿಂತು ನೋಡಬೇಕು ....
ಕವನವೆಂದರೆ ...
ಅತೀತ ವರ್ಣನೆಗಳ ಮಾಯಾಲೋಕ ...
ಬಾವನೆಗಳ ವರ್ಣಿಸಬೇಕು....ಅತಿಶಯೋಕ್ತಿಗಳ ತಬ್ಬಿ ಕೂರಬೇಕು 
 ಮಾಯಾನಗರಿಯ ಮೂಲೆ ಮೂಲೆ ಗಳ ತಡಕಾಡಬೇಕು... 
ಬಚ್ಚಿಟ್ಟ ನಿಧಿಯ ಹುಡುಕಿ ತೆಗೆದು ...
ಮನಸ ಮೂಲೆಯೊಳಗೆ ಕಾಪಿಡಬೇಕು ....
ಕವನವೆಂದರೆ ಮತ್ತೇನಿಲ್ಲ.... ಎನ್ನುತ್ತಲೇ ಮನಸ ಬಾವನೆಗಳ 
ಹರಿಬಿಡಬೇಕು...  

 

Monday, November 7, 2011



ಅದಾರೋ ಪವಾಡ ಪುರುಷ ತನ್ನ ಭಕ್ತಿಯ ಪರಾಕಾಷ್ಟೆ ಮೆರೆದ ನಾಲ್ಕು ಸಾವಿರ 
ವರ್ಷದ ಹಿಂದೆ , ಭಗವಂತನಿಗೆ ಪ್ರೀತಿಯ ಧಾರೆಯೆರೆಯಲು ಹೋಗಿ ತನ್ನ 
ಮಗನನ್ನು ಬಲಿಕೊಟ್ಟ ...  ಭಗವಂತನೂ ದಯಾಮಯಿಯೇ ... ಭಕ್ತನ ಪರೀಕ್ಷಿಸಬೇಕಲ್ಲ ..
ಅಗ್ಗಾಗ್ಗೆ ಅವನಿಗೂ ಪರೀಕ್ಷೆ ಮಾಡುವ ಮನಸ್ಸಾಗುತ್ತದೆ ...  
ಅಂದೇ ತನ್ನ ಭಕ್ತನ ಭಕ್ತಿಗೆ ಮೆಚ್ಚಿಅವನ ಮಗನ ಬದಲು  ಮೂಕ ಪ್ರಾಣಿಯ ಬಲಿ ತೆಗೆದ ...
ಅದೇ ಧರ್ಮ ,ಶಾಂತಿ ,ತ್ಯಾಗ ಬಲಿದಾನ , ಎಂದು ಹೆಸರೂ ಕೊಟ್ಟ ...
ಅಲ್ಲಿಂದ ಶುರುವಾಯಿತು ,,.. ಭಕ್ತಿಯ ಪರಾಕಾಷ್ಟೆ ... ಅವನಿಗೆ ದೇವರ ಪಟ್ಟ ಕಟ್ಟಿ...
ಅವನೋ ಏನೋ ತೋರಿಸಿಕೊಳ್ಳಲು ಹೋಗಿ ..ಮತ್ತೇನನ್ನೋ ತೋರಿಸಿ ಸತ್ತ ...
ಇವರಿಗೋ ಕಾರಣಗಳು ಬೇಕು ... ಅವರಲ್ಲೊಬ್ಬ ನಾವೇ ಶ್ರೇಷ್ಠ ,..ನಮ್ಮ ದೇವರೇ ಸತ್ಯ ಎಂದು ಯುದ್ದ ಮಾಡಿದ ..
 ಸೇರದವರನ್ನ ಕಾಫೀರರುಗಳು ಎಂದು ಕೊಂದ... ಆ ಪ್ರಾಣಿಯ ?? ಅವರು ಪೂಜಿಸುವರ ?? ಹಾಗಿದ್ದರೆ 
ಅದು ನಮ್ಮ ದೇವರಿಗೆ ಶ್ರೇಷ್ಠ ಎಂದ ,,.ಅದನ್ನೇ ಶತಮಾನಗಳಿಂದ ಮುಂದುವರೆಸಿಕೊಂಡು ಬಂದ...
ಪಾಪ ಮೂಕ ಪ್ರಾಣಿಗೆನು ಗೊತ್ತಿತ್ತು ,ತಾನೇ ಬಲಿ ಎಂದು ... ಅದಾರೋ ವರ್ಷಕೊಮ್ಮೆ ಸಿಂಗರಿಸಿ  ಪೂಜಿಸುತ್ತರಲ್ಲ 
ಕಾಯಿ ಕಡುಬು , ಕಜ್ಜಾಯಗಳ ಮಾಡಿ ತಿನ್ನಿಸುತ್ತಾರಲ್ಲ... ಅವರಂತೆ  ಇವರು ಎಂದು ತಿಳಿದಿತ್ತೋ ಏನೋ ..
ನಾನೂ ಸುಮಾರು ದಿನಗಳಿಂದ ನೋಡುತ್ತಿದ್ದೆ  ನಾ ಬರುವ ದಾರಿಯಲ್ಲಿ ಸಿಂಗರಿಸಿ ನಿಂತ ಆ ಮೂಕ ಪ್ರಾಣಿಗಳ ...
ನನಗಂತೂ ಗೊತ್ತಿತ್ತು .. ಕುರಿ ಕೊಬ್ಬಿದಷ್ಟೂ ಕಟುಕನ ಹೊಟ್ಟೆ ತುಂಬುತ್ತೆ ಅಂತ ... 
ಆದರೆ ಆ ಮೂಕ ಪ್ರಾಣಿಯ ಹೊಟ್ಟೆಗೆ ಮಾತ್ರ ಹಿಡಿ ಹುಲ್ಲು , ಮಳೆ ಬಂದರೆ ಮೇಲೊಂದು ಶೀಟು ಅಷ್ಟೇ ...
ಇವರೆಲ್ಲ ಒಂದು ವಾರದ ಮೊದಲೇ ಸಿದ್ದವಾಗುತ್ತಿದ್ದರು ತಮ್ಮ ಭಕ್ತಿಯ ಪರಾಕಾಷ್ಟೆ ಮೆರೆಯಲು ...
ಬಲಿ ದಾನ ಮಾಡಲು ...ಹೇಗೂ ಅವನು ಮೊದಲೇ  ತೋರಿಸಿದ್ದ ದೇವರಿಗೂ ಮೂಕ ಪ್ರಾಣಿಗಳ ಮೇಲೆ ಪ್ರೀತಿ ಎಂದು ..
ನನಗೂ ನೋಡಬೇಕಿತ್ತು ಅವರ ಮೂಕ ಪ್ರಾಣಿಗಳ ಮೇಲಿನ ಪ್ರೀತಿಯ ... ತ್ಯಾಗ ಬಲಿದಾನಗಳ ...
ಇಂದೂ ಅದೇ ರಸ್ತೆಯಲ್ಲಿ ಹೊರಟಿದ್ದೆ .. ತ್ಯಾಗ ಬಲಿದಾನಗಳ ಗುರುತನ್ನು ಮೆಟ್ಟಿ ಕೊಳ್ಳುತ್ತಾ ...
ಮೂಕ ಪ್ರಾಣಿಗಳ ತ್ಯಾಗ ಬಲಿದಾನವನ್ನು ಹತ್ತಿರದಿಂದ  ನೋಡಬೇಕು .. ನೋಡಿ ಮೊದಲೇ ಸಿದ್ದಗೊಳ್ಳಬೇಕು..
ಆ ಕಾಲವೂ ಬರುತ್ತದೆ ... ಇಲ್ಲದಿದ್ದರೆ ನಮ್ಮ ಸಾವು ಕಣ್ಣೆದುರು ಬಂದಾಗ ಅರ್ಥವಾಗುತ್ತದೆ ... ಸಾವು ಏನೆಂದು ...
ಪಾಪ ಮೂಕ ಪ್ರಾಣಿ ಗಳಿಗೇನು ಗೊತ್ತು ತಾವೇ ಶಾಂತಿ ತ್ಯಾಗ ಬಲಿದಾನದ ಪ್ರತೀಕ ಎಂದು ...  
ಯಾವದೋ ಮಹಾತ್ಮನ ಹೆಸರಲ್ಲಿ  ಭೂರಮೆಯೂ ತನ್ನ ಕನ್ನೆತನವನ್ನು ಕಳೆದುಕೊಂಡು ಕೆಂಪಾಗಿತ್ತು... 

Friday, August 12, 2011



ಅವಳನ್ನೆಲ್ಲೋ ನೋಡಿದ ಹಾಗೆ ಕಾಣುತ್ತದಲ್ಲ ..
ನಮ್ಮ ಜಾತಿಯವಳ ?ಇರಬೇಕು
.ಅದೇ ಮುಖ , ಮೂಗು,ಅವಳಾರೋ ಬರುತ್ತಿದ್ದಳಲ್ಲ
ಅವಳ ತಂಗಿಯಾ??? ..ಪರವಾಗಿಲ್ಲ ಚೆನ್ನಾಗಿದ್ದಾಳೆ ..
ಆ ತುಟಿ ಎಷ್ಟು ಎಳಸಾಗಿದೆ .. ಮೂಗೂ ಅಷ್ಟೇ ..
ನಮಗೆ ಹುಟ್ಟುವ ಮಗು ಹೇಗಿರಬಹುದು ? ..
ತುಟಿ ಮತ್ತು ಮೂಗು ಅವಳ ಹಾಗಿರಬಹುದ?
ಮುಖ ನನ್ನ ಹಾಗಿರಬಹುದ?...
ಛೆ... ಈ ಹಾಳು ಮನಸಿಗೆನಾಗಿದೆ ಇನ್ನು ಮದುವೆಯೇ ಆಗಿಲ್ಲ
ಮಕ್ಕಳ ಬಗ್ಗೆ ಯೋಚಿಸುತ್ತಿದೆಯಲ್ಲ...ಅದೂ ಅವಳು ಯಾರೋ ...
ಹಾಳು ಮಾಗಡಿ ರಸ್ತೆಯ ನೋಡು ,,,ಎಷ್ಟೊಂದು ಹೊಂಡ, ತಗ್ಗುಗಳು ..
ಈ ಮೆಟ್ರೋ ಆದರೂ ಯಾವಾಗ ಮುಗಿಯುತ್ತದೋ ...
ಕಂಡ ಕಂಡಲ್ಲಿ ಅಂಟಿಸಿರುವ ಸಿನಿಮಾ ಪೋಸ್ಟರು ಗಳು ...
ಹರೇ ರಾಮ ಹರೇ ಕೃಷ್ಣ ...ಛೆ ಇವ ಯಾರು ... ಪಕ್ಕ ಬಂದು ಕುಳಿತವ ..
ಅದೂ ಅವಳು ಕಾಣದಂತೆ ಅಡ್ಡ ಕೈಯನಿಟ್ಟು.. ಆ ಕೈಯ ಕಿತ್ತು ಬಿಸಾಕಲ ??
ಅದೆನಿದು ಆ ತರಾ ತಿರುಗಿ ನೋಡುತ್ತಿದ್ದಾಳೆ ..ನನ್ನನ್ನ ..ಅಲ್ಲಲ್ಲ ..
ಛೆ ,,, ಇನ್ನು ಎಷ್ಟು ಹೊತ್ತೋ ... ಸುಮ್ಮನೆ ಸುತ್ತು ಹಾಕುತ್ತಿದ್ದಾನೆ ..
ಪರವಾಗಿಲ್ಲ ತೆಳ್ಳಗೆ ,ಬೆಳ್ಳಗೆ ಇದ್ದಾಳೆ .. ನನಗೆ ಚೆನ್ನಾದ ಜೋಡಿ ..
ಕೇಳಿ ಬಿಡಲಾ .. ನಿನ್ನ ಊರು ಯಾವುದೆಂದು ..ಬೇಡ ...ಯಾವುದಾದರೇನು ?
ಅದೇನದು ಕಿಡ್ಸ್ ಕೇರ್ ..ದೊಡ್ಡ ಬೋರ್ಡನ್ನು ನೇತುಹಾಕಿದ್ದರಲ್ಲ..
ಥೂ ಇವತ್ತೇನಾಗಿದೆ ಈ ಹಾಳು ಮನಸ್ಸಿಗೆ ...ಬರೀ ಏನೇನೋ ಯೋಚಿಸುತ್ತದಲ್ಲ ..
ಅರೆ ಅವಳದು ನನ್ನ ಹಾಗೆ ಟಚ್ ಸ್ಕ್ರೀನ್ ಮೊಬೈಲ್ ... ಅರೆ ನನ್ನ ತರವೇ
ಸೀಟು ಸಿಕ್ಕಿದಾಗಲೇ ಎಫ್ ಎಮ್ ಕಿವಿಗೆ ಹಾಕಿ ಕೊಳ್ಳುವುದು..ಕಿಟಕಿ ಪಕ್ಕದ ಸೀಟಲ್ಲಿ ಕುಳಿತು ಏನೋ ಯೋಚನೆ ..
ಒಳ್ಳೆ ಜೋಡಿಯಾಗಬಹುದ ?? ..
ಈ ಬಸ್ಸಿನವನು ಎಲ್ಲೆಲ್ಲಿ ಹೋಗುತ್ತಿದ್ದಾನೆ ಇಂದು ... ಈ ದಾರಿಯಲ್ಲಿ ಹೇಗೆ ಭಾಷ್ಯಂ ಸರ್ಕಲ್ ಗೆ ಬಂದ ??
ಅವಳು ಎಲ್ಲಿ ಇಳಿಯಬಹುದು ?? ನನ್ನ ನೋಡಿದಳಾ ? ಇರಬಹುದು ...
ಅರೆ ಅವಳು ಇಳಿಯುವುದೂ ನವರಂಗಿನಲ್ಲ... ಇಷ್ಟು ದಿನ ನೋಡಲೇ ಇಲ್ಲವಲ್ಲ ..
ಛೆ ಇವಳೇಕೆ ಇಷ್ಟು ಜೋರಾಗಿ ನಡೆಯುತ್ತಿದ್ದಾಳೆ ...ಇಲ್ಲೆ ಎಲ್ಲಾದರೂ ಪಿಜಿ ಯಲ್ಲಿ ಇರಬಹುದಾ?
ಅರೆ ಇವಳೂ ಇಲ್ಲೆ ನಿಂತಳಲ್ಲ ... ನಾನು ಹೋಗುವಲ್ಲೇ ಇವಳೂ ಹೋಗುವಳಾ..
ಎಲ್ಲವಳು ... ಬಸ್ಸಿನಲ್ಲೆಲ್ಲು ಕಾಣುತ್ತಿಲ್ಲವಲ್ಲ ...ಅಲ್ಲೇ ಉಳಿದಳಾ..ಹಾಗಿದ್ದರೆ ಎಲ್ಲಿ ???
ಮತ್ತೂ ಮುಂದೆ ಹೋಗುವಳಾ...
ಛೆ ನನಗೇನಾಗಿದೆ ಇಂದು ...ಸುಮ್ಮನೆ ಏನೇನೋ ಯೋಚಿಸುತ್ತಿದ್ದೆನಲ್ಲ ...
ಅರೆ ಅವಳಾರು ನನ್ನ ಹಾಗೆ ಸ್ಪೆಕ್ಟ್ ಹಾಕಿದ್ದಳಲ್ಲ ... ಪರವಾಗಿಲ್ಲ ಚೆನ್ನಾಗೂ ಇದ್ದಾಳೆ ..
ಜೋಡಿಯಾಗಬಹುದಾ..................​...........
..............................​..................
........................................................

Tuesday, August 2, 2011



ಜುಳು ಜುಳು ಹರಿವ ನೀರ ಮೇಲೆ ತೇಲಿ ಹೋದ 
ಬಂಗಾರದೆಲೆಯ ಬಣ್ಣ ನನ್ನ ಚೆಲುವೆಯ ಮೈಬಣ್ಣ  ..
ಹುಣ್ಣಿಮೆ ಚಂದ್ರನ ಬೆಳಕನ್ನೂ ಹೀರಿ ಕಣ್ಣಲ್ಲೇ ಕೊಲ್ಲೋ ಚೆಲುವೆ ..
ನೋಡಬೇಕವಳ ತುಟಿಯ ಕೊಂಕುತನವನ್ನ ..
ಸದ್ದಾಗದಂತೆ ಚಿಟ್ಟೆಯೂ ಕಾಲು ಕಿತ್ತಿವೆ  ... 
ಅವಳ ಸ್ಪರ್ಶಕೆ ಬಂದ ಹೂಗಳೂ ...ಮೆಲ್ಲಗೆ ನಿದ್ದೆ ಹೋಗಿವೆ ...
ಬೀಸಿ ಬಂದ ಗಾಳಿ ..ಅವಳ ನೋಡುತ್ತಲೇ ಮೆಲ್ಲಗೆ 
ಪಕ್ಕ ಸರಿದು ಮುಂಗುರುಳ ನೀವಿ  ಹೋಗಿದೆ ..
ಹಸಿರ ಮರಗಳೆಲ್ಲ ಇಬ್ಬನಿಯ ಹಾಗೆ ತಬ್ಬಿ ಹಿಡಿದಿವೆ ..
ಎಲ್ಲಿ ಜಾರುವುದೋ ಎಂದು ...
ನೋಡಬೇಕವಳ ಚೆಲುವ ... 
ಮುಂಜಾವಿನ ಬಿನ್ನಾಣ ಗಳನೆಲ್ಲ  ..
ಹರವಿ  ಕುಳಿತಿದೆ ಪ್ರಕೃತಿ ... ನನ್ನವಳ ಚೆಲುವಿಗೆ ಸಾಟಿಯಾಗಲು..
ನಾನೋ .. ಎಲ್ಲ ನೋಡುತ್ತಲೇ ಬಂದಿಯಾಗಿದ್ದೆ...
ಅವಳ ಬಿಸಿ ಅಪ್ಪುಗೆಯಲ್ಲಿ ... 

 
     

Tuesday, July 26, 2011


ಮನದ ಮಾತಿಗೆ ಮೌನದ ಬೇಲಿಯೇಕೆ? 
ಹೇಳಿಬಿಡು ಒಮ್ಮೆ ...ಬಚ್ಚಿಟ್ಟುಕೊಂಡಿರುವ ಎಲ್ಲ 
ಬಾವನೆಗಳ....
ಕೊಲ್ಲಬೇಡ ನನ್ನ ಎಲ್ಲವನೂ ಮುಚ್ಚಿಟ್ಟು...
ಹೇಳಿಬಿಡು ಒಮ್ಮೆ ಮುಚ್ಚಿಟ್ಟು ಕೊಂಡಿರುವ ಕನಸುಗಳ ...
ಕಳೆಯಬೇಕಿದೆ ..ನಿನ್ನ ಜೊತೆ ಎಷ್ಟೋ ಮುಸ್ಸಂಜೆಗಳನು 
ನಿನ್ನ ಸಂಗಾತಿಯಾಗಿ ..
ಹೇಳಿಬಿಡು ಒಮ್ಮೆ ನೀ ಪ್ರೀತಿಸುವುದ ...
ಹಂಚಿಕೊಳ್ಳುವುದಿದೆ ..ನಿನ್ನ ಆ ಚೂರು ಪ್ರೀತಿಯ ..
ಬಾವನೆಗಳ ...ಕನಸುಗಳ ....ಜೀವನ ಪರ್ಯಂತ ...
ನನ್ನ  ಮೌನವ  ಆಲಿಸು..
ಅದು ಒಲವ ಹಾಡುತ್ತದೆ ...
ಮುಗಿಲಿನಾಚೆಯ ಮಾತುಗಳ ಪಿಸುಗುಡುತ್ತದೆ..
ನಿನ್ನ ಹಾಡಿಗೆ ದನಿಗೂಡುತ್ತದೆ...
ಹಾಡತೊಡಗಿದರೋಮ್ಮೆ... ವರ್ಷಧಾರೆಯಾಗಿ ತಂಪೆರೆಯುತ್ತದೆ ..
ಹೇಳಿಬಿಡು ಒಮ್ಮೆ ..ಎಲ್ಲವನೂ ಮುಚ್ಚಿಡಬೇಡ 
ಮನದ ಮಾತಿಗೆ ಮೌನದ ಬೇಲಿ ಹಾಕಿ ...

Saturday, July 23, 2011



ಹಾಗೆ ಸುಮ್ಮನೆ  ನಿನ್ನ ಜತೆಯಲ್ಲಿ ಕೈ ಕೈ ಬೆಸೆದು ನಡೆದ 
ಆ ರಾತ್ರಿ , 
ನದಿ ದಂಡೆಯ ಬಂಡೆಗಳ ಸಂದು ಗೊಂದುಗಳ ನಡುವೆ 
ಸುಮ್ಮನೆ ತಲೆಯಿಟ್ಟು.....
 ತೀಡಿದ ನಿನ್ನ ಮುಂಗುರುಳ ತುದಿಯಲ್ಲಿ ,ಕಣ್ಣ ರೆಪ್ಪೆಗಳ ನವಿರಾಗಿ ಮುಚ್ಚಿ 
ಹಾಗೆ ಸುಮ್ಮನೆ ಒತ್ತಿದ ತುಟಿಗಳ ಗುರುತು .....
ಹರಿವೆ ನೀರ ಜುಳು ಜುಳು ಸದ್ದನು ಸುಮ್ಮಗೆ ಆಲಿಸಿ ,
ನೀರ ಅಲೆಯಲ್ಲಿ ತಲೆಯಿಟ್ಟು ...
ಹಾಗೆ ಸುಮ್ಮನೆ ಬಿಗಿದಪ್ಪಿದ ಮನಸಿಗೆ ....
ನೀಲಾಕಾಶವ ನೊಡುತ್ತ ....ಮಿನುಗೋ ನಕ್ಷತ್ರಗಳ ಪೋಣಿಸಿ 
ಹಾಗೆ ಸುಮ್ಮನೆ ಜೋಡಿಸಿಟ್ಟ ನನ್ನ ನಿನ್ನಯ ಹೆಸರು ....
ಚದುರಿದ ನಕ್ಷತ್ರಗಳನೆಲ್ಲ ಕೂಡಿಸಿ ,ಹಾಗೆ ಸುಮ್ಮನೆ 
ಕಟ್ಟಿಕೊಂಡ ಪುಟ್ಟ ನನ್ನ ನಿನ್ನಯ ಗೂಡು ...
ಎಲ್ಲ ಬಂದು ನಿನ್ನ ನೆನಪನ್ನು  ಇರ ಹೇಳುತ್ತಿವೆ ...
ಹಾಗೇ ಸುಮ್ಮನೆ ....


Saturday, July 2, 2011

ನಿನ್ನ ಕಣ್ಣುಗಳು ....


ನಿನ್ನ ಸುಂದರ ಕಣ್ಣುಗಳು ...
ಆಗಸದಲಿ ತುಂಬಿದ ದಟ್ಟನೆಯ ಮೇಘಗಳ ಸಾಲು ..
ಕಣ್ಣೋಟಗಳ ಮಿಲನವಾದಾಗ ..
ನನ್ನೆದಲ್ಲಿ ಮಿಂಚುಗಳ ಸಾಲು ....

ನಿನ್ನ ಆ ಕಣ್ಣುಗಳು ....
ನನ್ನೆದೆಯ ಕನಸ ಕಲ್ಪನೆಯ ಕೂಸುಗಳು ...
ಎಷ್ಟೋ ಬಾವನೆಗಳ , ಅಷ್ಟೇ ಆಸೆಗಳ 
ಅಡಗಿಸಿಟ್ಟ ತಿಳಿನೀರ ಸರೋವರ ...

ನಿನ್ನ ಕಣ್ಣುಗಳು ....
ಸ್ವಚ್ಛ , ನಿರ್ಮಲ, ನಿಷ್ಕಲ್ಮಶ ...
ಮನದ ಬಾವನೆಗಳೆಲ್ಲ ತೆರೆದಿಟ್ಟ ....
ಕನ್ನಡಿ ಹಾಗೆ ....
ಮನದ ಪ್ರತಿಬಿಂಬ ನಿನ್ನ ಈ ಕಣ್ಣುಗಳು ...

Sunday, May 1, 2011



ಇದೀಗ ತಾನೇ ಚದುರುತ್ತಿವೆ  .. ತುಂಡು ಮೋಡಗಳ ಜೊತೆ ,
ನೀಲಾಕಾಶದಲ್ಲಿ ಹಾಗೆ ಸುಮ್ಮನೆ 
ಒಂದಷ್ಟು ಅಕ್ಷರಗಳನು ಪೋಣಿಸಿಟ್ಟು ಗೀಚಿದ ನಿನ್ನಯ ಹೆಸರು ..
ಒಂದಷ್ಟು ಮಳೆ  ಹೊಯ್ದಂತೆ, ತೊಯ್ದ ಮರಳಿನ ಮೇಲೆ 
ಉಗುರ ತುದಿಯಲ್ಲಿ ತೀಡಿದ ,ನನ್ನನಿನ್ನಹೆಸರು....
ಬೇಕಂತಲೆಂದೇ ಬಿತ್ತಿದ ಒಂದಷ್ಟು ಬೀಜಗಳು 
ಮೊಳಕೆಯಡದಿವೆ ಅಚ್ಚಾದ ಹಸುರ ನೆಲದ ಮೇಲೆ ...
ಕೈ ಕೈ ಹಿಡಿದು ತಬ್ಬಿದ ಮನದ ಹಸಿರು ಇನ್ನೂ ಹಸಿಯಾಗಿಯೇ 
ಕನಸ ಕಾಡಿವೆ..
ಇನ್ನು ಹಾಗೇ ಬಾಕಿಯಾಗಿಯೇ  ಉಳಿದಿದೆ ಜೊತೆಯಲ್ಲಿ ಕಂಡ ಎಷ್ಟೋ 
ಕನಸುಗಳು ...
ಮುಂಗುರುಳ ತಿರುವಿ ತುಟಿಯ ಮೀಟಿದ  ಕೈಯ ಬೆರಳು ಗಳು...
ಕಚ್ಚಿದ ಗಾಯವಿನ್ನೂ ಮರೆತಿಲ್ಲ ...
ಎಲ್ಲವೂ ಹಾಗೆ ಇದೆ ಇನ್ನೂ ಹಸಿಯಾದ ಸವಿಗನಸು 
ನನಸಾಗದೆ ಹಳೆಯದನ್ನೇ ಮೆಲುಕ ಹಾಕಿವೆ ..
ಬಾಕಿಯಾಗಿಯೇ  ಉಳಿದಿದೆ ಇನ್ನೂ 
ಕನಸುಗಳೆಂಬ ಅಸಲು ಬಡ್ಡಿಗಳ ಲೆಕ್ಕಾಚಾರ ...




Saturday, March 26, 2011


ಏಕೆ ಕಾಡುವೆ ಹೀಗೆ ಮನದ ಸುತ್ತ ..
ಬಚ್ಚಿಟ್ಟು ಸಮಾಧಿ ಮಾಡಿದ ಬಾವನೆಗಳೆಲ್ಲ 
ಮತ್ತೇಕೆ ಕೆದಕುವೆ ?
ಎಲ್ಲ ನೆನಪುಗಳ ಮುಚ್ಚಿಟ್ಟು...
ನಾ ಒಂಟಿಯಾಗಿರಲು ಬಯಸುವಾಗ ..
ಮತ್ತೇಕೆ ನೆನಪಿಸುವೆ ಕಳೆದ ಆ ಕ್ಷಣಗಳೆಲ್ಲ ...
ಹೌದು ... ನಿನ್ನ ನಗುವಿಗೆ ಅರ್ಥ ಕೊಡಲು ಹೋದೆನಲ್ಲ 
ಅದು ನನ್ನ ತಪ್ಪೇ ....???
ಆದರೆ ನಿನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವಾಗ 
ನಾ ಏನ ಹೇಳಲಿ 
ಕಳೆದ ಮುಸ್ಸಂಜೆ ... ಕಳೆದ ಸಮಯ .. ಆಡಿದ ಪಿಸುಮಾತುಗಳಿಗೆಲ್ಲ
ಅರ್ಥ ಕೊಡಲಿಲ್ಲವೇಕೆ...?
ಮನದ  ದುಗುಡಗಳೆಲ್ಲ ಮುಚ್ಚಿಟ್ಟು...ಮನದ ಭಾವನೆಗಳೆಲ್ಲ 
ತೆರೆದಿಟ್ಟ ಆ ಕ್ಷಣಗಳಿಗೆ ... ಅರ್ಥ ಕೊಡಲಿಲ್ಲವೇಕೆ ...
ಪ್ರೀತಿ ಬರೀ ನಿರರ್ಥಕವೆಂದೆ ...????

Tuesday, March 15, 2011

ಈ ಪ್ರೀತಿ ಎನ್ನುವುದು .. ಕೆಂಪು ತುಟಿ ಬಿರಿದು 
ಹೂ ನಗೆ ಎಸೆದು ,ಕಣ್ಣು ಮಿಟುಕಿಸಿ ಕೆಣಕುವಾಗ
ಎದೆಯಲ್ಲೇನೋ  ಕಂಪನದ ಅಲೆ ..
ಈ ಪ್ರೀತಿ ಎನ್ನುವುದು ಕಂಡ ಕೂಡಲೇ ಪುಳಕಿಸಿ
  ಮಾತನಾಡಲು ತವಕಿಸಿ , ಎದುರಿಗೆ ಹೋದಾಗ 
ಸಣ್ಣಗೆ ನಡುಗಿಸಿ ಸಾಧ್ಯವಾಗದೆ ಮತ್ತೆ ಬರುವ ...
ಈ ಪ್ರೀತಿ ಎನ್ನುವುದು ಕಣ್ಣ ನೋಟ ಕೂಡಲು..
ಹೃದಯ ಮಾತನಾಡಲು ,ಬಾವನೆಗಳೇ ಉಕ್ಕೇರಿ ಬರುವ 
ಸಾಗರದ ಅಲೆ ...
ಈ ಪ್ರೀತಿ ಎನ್ನುವುದು ಹೃದಯದಲಿ ಬಚ್ಚಿಟ್ಟುಕೊಂಡ ಯಾತನೆ ... 
ಮೇಲೆ ಕಾಣುವುದು ಎಲ್ಲೆಡೆ ಹಸಿರ ಎಲೆ 
ಆದರೆ ಒಳಗೆ ಮಾತ್ರ ತಲ್ಲಣದಾ  ಮಳೆ ...
  

Saturday, March 12, 2011






ಪ್ರಿಯೇ ಇನ್ನೂ ಏಕೆ ಈ ನಾಟಕ ?

ಬೇಕಲ್ಲವೇ ನಿನಗೆ ನನ್ನ ಜಾತಕ ..

ಅದಕ್ಕೇಕೆ ನಾಚಿಕೆ ,

ಹೇಳಬಾರದಿತ್ತೆ ಮನದ ಆಸೆಯ ?

ಕಣ್ಣ ನೋಟದಲ್ಲಿಯೇ ತಿಳಿಸಿದೆ ನನ್ನ ಆಸೆಯ 

ಮೂರು ಗುಲಾಬಿಯ ಮೂಲಕ ಕಳುಹಿಸಿದೆ 


ನನ್ನ ಬಾವನೆಗಳ .....

ಆದರೇನು ..

ನಮ್ಮಿಬ್ಬರ ಮನಸುಗಳೆರಡು ಕೂಡಲು

ನಮಗೇಕೆ ಜಾತಕ ?

ಆದರೂ ನನಗಾಗಿ ಕಾದಿಡು ನಿನ್ನ ಜಾತಕ...  

Tuesday, March 8, 2011



ಯಾರಿಗೂ ಗೊತ್ತಾಗದೆ ಬಂದವಳು
ತಾನೆಂದು ಅಂದುಕೊಂದಿದ್ದಳವಳು !
ಅವಳು ಹೃದಯದ ಬಾಗಿಲ ಕಡೆ
ಹೆಜ್ಜೆ ಇಟ್ಟಾಗಲೇ ಬೋರ್ಗರೆದಿತ್ತು ಮನ
ಹುಣ್ಣಿಮೆಯ ರಾತ್ರಿಯ ಕಡಲಿನಂತೆ....

ಕದ್ದೊಯ್ಯಲಿ ಸರ್ವಸ್ವವನ್ನು ಎಂದು
ಸುಮ್ಮನೆ ಕುಳಿತಿದ್ದೆ.........
ಮಾರಕಾಸ್ತ್ರಗಳಿಲ್ಲದೆ, ರಕ್ತಪಾತವಿಲ್ಲದೇ
ಕೇವಲ ಕುಡಿ ನೋಟದಿಂದಲೇ ಇರಿದು
ಎಲ್ಲವನ್ನೂ ಬಾಚಿ ಕಟ್ಟಿಕೊಂಡಳವಳು
ಒಂದಿನಿತೂ ನನಗೆ ಉಳಿಸದೆ !

ಅನುಕಂಪವೋ ಅನುರಾಗವೋ ಕಾಣೆ
ಬಿಟ್ಟು ಹೋಗಿದ್ದಳವಳು ತನ್ನ ಹೃದಯವನ್ನೇ
ಇಲ್ಲೇ ನನ್ನ ಒಳಗೆ ..........
ಕಳ್ಳತನವೂ ಇಷ್ಟೊಂದು ಸಿಹಿಯೇ ??

(ಸ್ನೇಹಿತ ಅಶೋಕ್ ಭಾಗಮಂಡಲ ಬರೆದದ್ದು ...)

Sunday, February 27, 2011


ನೆನಪೇ ಘಾಸಿಗೊಳಿಸದಿರು.. ಈ ಮನವನ್ನ 
ಮತ್ತೆ ಮತ್ತೆ ಬಂದು ...
ನಿನ್ನ ಮರೆಯಲೇ ಓಡುತ್ತಿರುವುದು ಬಲುದೂರ 
ಹೊಸ ಕನಸು ಹೊಸ ಆಕಾಂಕ್ಷೆ ಗಳೊಡನೆ ... 
ಆದರೂ ಮತ್ತೆ ಬಂದು ನೋಯಿಸದಿರು ,
ತಾಳಿಕೊಳ್ಳದು ಈ ಹೃದಯ ....
ಮತ್ತೆ ಮತ್ತೆ ಬರುವ ನಿನ್ನ ನೆಪುಗಳ 
ಸಾವಿರ ಹೋಳಾಗುವುದು ಖಚಿತ ..
ಏನು ಮಾಡಲಿ ಆ ಸಾವಿರ ಚೂರುಗಳು ....
ಸಾವಿರ ನೆನಪುಗಳಾಗಿ ಕಾಡಿಸಿದರೆ..???
ಎಲ್ಲಿ ಹೋಗಲಿ ನಿನ್ನಿಂದ ತಪ್ಪಿಸಿಕೊಂಡು..
ಹಕ್ಕಿಯಾಗಿ ಹಾರಿ ಹೋಗೋಣವೆಂದರೆ ,,, ಬಿರುಗಾಳಿಯಾಗಿ 
ಬಂದು ದಿಕ್ಕು ತಪ್ಪಿಸುವೆ ....
ಭೋರ್ಗರೆಯುವ ನೀರಾಗಿ ಹರಿದು ಬಿಡಲೆಂದರೆ 
ಹೆಬ್ಬಂಡೆಯಾಗಿ ತಡೆಯುವೆ ...   
ಕತ್ತಲಲಿ ಕಣ್ಣು ತಪ್ಪಿಸಿ ಹೋಗೋಣವೆಂದರೆ  
ಬೆಳದಿಂಗಳ ನೆರಳಿನಂತೆ  ಹಿಂಬಾಲಿಸುವೆ...
ಎಲ್ಲಿ ಹೋದರು ಬೆಂಬಿಡದೆ ಬರುವೆ ....ನೆರಳಾಗಿ ...
ಏಕೆಂದರೆ ನೀನು ನೆನಪಲ್ಲವೇ ?            

Saturday, February 19, 2011


ಅವಳ ಕನಸು  ಬೆತ್ತಲಾಗುವ ಮುನ್ನ ಮನಸ ಆವರಿಸಿಕೊಳ್ಳಲಿ 
ಮೋಡದಂತೆ ಮೇಲೇರಿ ಬರಲಿ ,
ಎಷ್ಟೋ ವರ್ಷಗಳಿಂದ ಕಾದು, ಕಾಯ್ದ  ಕನ್ನೆ ನೆಲ 
ಇಂದು ಉತ್ತುಬಿಡಲಿ, 
ಪ್ರವಾಹದಂತೆ ನುಗ್ಗಿ ಬರಲಿ ,ಕಡಿದು ಉರುಳಿಸಿ ,ಕೆನೆದು ಕುಪ್ಪಳಿಸಿ  
ಭೋರ್ಘರೆದು,ನನ್ನಲ್ಲಿ ಮಳೆಯಾಗಿ ಹರಿಯಲಿ ....
ಅದರಲ್ಲಿ ನಾನು ತೇಲಿ ಹೋಗಬೇಕು ..  

Saturday, January 15, 2011

ಶಾಶ್ವತ



ನೀನಂದು ನಡೆಯುತ್ತಿದ್ದೆ ಸಮುದ್ರ ತೀರದ
ಹೊನ್ನ ಮರದ ಕಣದ ಮೇಲೆ
ನನ್ನ ಹೆಜ್ಜೆಯ ಮೇಲೆನಿನ್ನ ಹೆಜ್ಜೆಯನಿಟ್ಟು
ಏಕೆಂದು ಕೇಳಿದಾಗ ನೀ ಹೇಳಿದ್ದೆ
ನಿನ್ನ ಜೊತೆ ನಾ ಶಾಶ್ವತ ವಾಗಿರಲೆಂದು ,,
ನಾ ವೆದಾಂತಿಯಾಗಿದ್ದೆ...
ಈ ಜೀವನ ನಶ್ವರ ,
ಯಾರಿಗೆ ಯಾರೂ ಶಾಶ್ವತವಲ್ಲ .
ಇಂದು ನೀ ಪಕ್ಕ ನಡೆಯುತ್ತಿದ್ದೆ ಅದೇ
ಹೊನ್ನ ಮರಳ ಕಣದ ಮೇಲೆ
ನಾ ನಿನ್ನ ಮುಖ ನೋಡಿದಾಗ
ನಕ್ಕು ನೀ ಹೇಳಿದ್ದೆ ...ವೆದಾಂತೀ,
ನೀನಲ್ಲದಿದ್ದರೆ ನಾನಾದರೂ ಶಾಶ್ವತ ವಾಗಿರಲೆಂದು
ಮರುಕ್ಷಣವೇ ದೊಡ್ಡ ತೆರೆಯೊಂದು ನಮ್ಮಿಬ್ಬರ
ಹೆಜ್ಜೆ ಗುರುತುಗಳನ್ನು ಅಳಿಸಿಬಿಟ್ಟಿತ್ತು..
ಕೊಪಗೊಂಡಿತ್ತು ಪ್ರಕೃತಿ ....
ನಾನಿದ್ದರೆ ತಾನೆ ?ನೀವೆಲ್ಲ ಶಾಶ್ವತ ....
!