Thursday, October 7, 2010

ಹೀಗೊಂದು ಕುಡುಕರ ಲೆಕ್ಕ .....

..
ಮೊನ್ನೆ ಏಕೋ ಈ ಫೋಟೋ ನೋಡಿ ಕಾಲೇಜ್ ನ ದಿನಗಳು ನೆನಪಿಗೆ ಬಂದವು .ನಾವು ಆರು ಜನ ಪಿಯುಸಿ   ಯಿಂದಲೂ ಒಳ್ಳೆ ಸ್ನೇಹಿತರು ಆಗ್ಗಾಗ್ಗೆ ಎಲ್ಲರೂ ಸೇರಿ ಟ್ರಿಪ್ ಗೆ ಹೋಗುವ ಪರಿಪಾಠವಿತ್ತು . ಪ್ರತಿ ಸಲ ರಾತ್ರಿ ಉಳಿಯುವ ಹಾಗೆ ಟ್ರಿಪ್ ಗೆ ಹೋಗುತ್ತಿದ್ದೆವು . ಏನೇ ಹೇಳಿ ಆ ತರಹದ ಟ್ರಿಪ್ ನ ಮಜವೇ ಬೇರೆ. ನಮ್ಮ ಆರು ಜನರಲ್ಲಿ ಮೂರೂ ಜನ ಪಕ್ಕಾ ಕುಡುಕರು ( ತಪ್ಪು ತಿಳಿಯಬೇಡಿ, ಅವರೂ ಈ ತರಾ ಟ್ರಿಪ್ ಗೆ ಹೋದಾಗ ಮಾತ್ರ ಕುಡಿಯುತ್ತಾರೆ  )  ಎಲ್ಲರೂ ಸೇರಿ ಅಡಿಗೆ ಗೆ ಬೇಕಾದ ಸಾಮನುಗಳನ್ನ ತೆಗೆದುಕೊಂದು ಹೋಗುತ್ತಿದ್ದೆವು .ಅಲ್ಲಿ ಎಲ್ಲವನ್ನು ತಯಾರಿ ಮಾಡಿಕೊಂಡು ರಾತ್ರಿ ಬೆಂಕಿಯನ್ನು ಹಾಕಿಕೊಂಡು ಊಟ ಮಾಡುವುದು (ಜೊತೆಗೆ ಲೈಟುಗಳು ಇರುತ್ತಿದ್ದವು) ರೂಢಿ . ಒಮ್ಮೆ ಎಲ್ಲ ಹೀಗೆ ಸೇರಿ  ಸಾತೊಡ್ಡಿ ಗೆ ಹೋಗಿದ್ದೆವು .ಎಲ್ಲ ಸೇರಿ ಆರು ಕಿಲೋಮೀಟರು ನಡೆಯುತ್ತಾ ಸಂಜೆ 5 ಘಂಟೆ ಸುಮಾರಿಗೆ ಸಾತೊಡ್ಡಿ ತಲುಪಿದ್ದೆವು . ಮದ್ಯಾಹ್ನ ವೆ ಯಲ್ಲಾಪುರಕ್ಕೆ ಬಂದು ಬೇಕಾದ ಸಾಮಾನುಗಳನ್ನೂ ತೆಗೆದುಕೊಂಡಿದ್ದೆವು . ಅದರಲ್ಲೂ ಎರಡು ರೀತಿಯಲ್ಲಿ ಸಾಮಾನು ತೆಗೆದುಕೊಳ್ಳುವುದಿತ್ತು. ನಮಗೆ ಊಟ ಮಾಡಲು ಹಾಗೂ ಅವರಿಗೆ ಗುಂಡು ಪಾರ್ಟಿ ಮಾಡಲು. ಅದರಲ್ಲೂ ತಮಗೆ ಬೇಕಾದ ಬ್ರಾಂಡುಗಳನ್ನೇ ಹೇಳುತ್ತಿದ್ದರು .ಅದನ್ನು ಅವರವರೆ ಹೋಗಿ ತಂದುಕೊಳ್ಳುತ್ತಿದ್ದದು ನನ್ನ ಪುಣ್ಯ .ಆದರೆ ಅಡಿಗೆಯ ಲೆಕ್ಕ ಮಾತ್ರ ನನಗೆ ಬರುತ್ತಿತ್ತು . (ದುಡ್ಡು ಮಾತ್ರ ಬರುತ್ತಿರಲಿಲ್ಲ). ಸಂಜೆ ಅಂತು ಇಂತೂ ಎಲ್ಲರೂ ಸಾತೊಡ್ಡಿ ಬಸ್ ಸ್ಟ್ಯಾಂಡ್ ಗೆ ಬಂದು ಇಳಿಯುವಾಗ ಎಲ್ಲ ಸರಿನೆ ಇತ್ತು .ಆದರೆ ಎಲ್ಲ ಬ್ಯಾಗ್ ಗಳನ್ನೂ ಹೊತ್ತುಕೊಂಡು 6 ಕಿ ,ಮೀ ನಡೆಯಬೇಕಿತ್ತು . ಸರಿ ಎಲ್ಲ ಒಂದೊಂದು ಬ್ಯಾಗ್ ಗಳನ್ನೂ ಹೊತ್ತುಕೊಂಡು ಹೆಜ್ಜೆ ಹಾಕಲು ಶುರುಮಾಡಿದೆವು . ನಾನು ಮೊದಲೇ ನಿಮ್ಮ ಬಾಟಲುಗಳಿಗೆ ನೀವೇ ಜವಾಬ್ದಾರರು, ನಾನಂತು ಹೊರುವುದಿಲ್ಲ ಎಂದು ಹೇಳಿಬಿಟ್ಟಿದ್ದೆ . ಎಲ್ಲದಕ್ಕಿಂತ ಅದರ ಭಾರವೇ ಜಾಸ್ತಿ ಇತ್ತು .ಅಂತು ಅವತ್ತಿನ ಸ್ಪೆಷಲ್ , ರೋಟಿ, egg  rice, ಮಿರ್ಚಿ , ಜೊತೆಗೆ ಒಂದಷ್ಟು ಖಾರಾ ಪ್ಯಾಕ್ ,ಜೊತೆಗೊಂದಿಷ್ಟು ತರಕಾರಿ ಎಲ್ಲ ಇತ್ತು . ಇದನ್ನೆಲ್ಲಾ ತಗೆದುಕೊಳ್ಳುವಾಗಲೇ, ಒಬ್ಬ ಗೆಳೆಯನ ಸಂಭಂದಿಕ ಸಿಕ್ಕಿ , ನಮ್ಮನೆಗೆ ಬರಲೇ ಬೇಕೆಂದು ಹಠ ಹಿಡಿದಿದ್ದ . ಅಂಗಡಿಯವನೂ ಸಹ ಮನೆಯಲ್ಲಿ  ಏನು ವಿಶೇಷ ನಾ?  ಅಂತ ಕೇಳಿದ್ದ. ಅಂತೂ ಇಂತೂ ಇದನ್ನೆಲ್ಲಾ ತೆಗೆದುಕೊಂಡಾಗ ಅಂಗಡಿಯವನಿಗೂ ಲೆಕ್ಕ ತಪ್ಪಿ 3  ಖಾರ ಪ್ಯಾಕ್  ನ ಲೆಕ್ಕವೇ ತಪ್ಪಿ ಹೋಗಿತ್ತು.  ದಾರಿಯಲ್ಲಿ ಇದನ್ನೆಲ್ಲಾ ಹೇಳಿಕೊಂಡು ನಗುತ್ತ ಹೋಗುತ್ತಿರುವಾಗಲೇ ,ಒಬ್ಬ ಗೆಳೆಯನಿಗೆ  ಜ್ಞಾನೋದಯವಾಗಿತ್ತು . ಅಷ್ಟೂ ಬಾಟಲುಗಳನ್ನ ಅಲ್ಲಿ  ಹೊತ್ತುಕೊಂಡು ಹೋಗಿ ಕುಡಿಯುವ ಬದಲು ಸ್ವಲ್ಪ ಇಲ್ಲೇ ಕುಡಿದು ಬಿಟ್ಟರೆ , ಭಾರವು ಕಡಿಮೆಯಾಗುತ್ತದಲ್ಲ ಎನ್ನಬೇಕೆ ?. ಹೇಳಿದ್ದೇ ಬಾಟಲು ತೆಗೆದು ಕುಡಿಯಲೂ ಶುರು ಮಾಡಿಬಿಟ್ಟ . ಅದನ್ನು ನೋಡಿ ಉಳಿದವರೂ ಸಹ ತಮ್ಮ ಪಾಲು ಎಲ್ಲಿ ಕಡಿಮೆಯಾಗುವುದೋ ಎಂದು ಅವರೂ ಶುರು ಮಾಡಿಬಿಟ್ಟರು . ಕುಡಿಯುವುದೂ ಒಂದು ಕಲೆಯಂತೆ ಒಬ್ಬ ಶುರು ಮಾಡಿಬಿಟ್ಟ . ನಾನು ಹೇಳಪ್ಪ ಅಂತಂದೆ . ಆಗ ಶುರು ಮಾಡಿದ , ಕುಡಿದರೆ ಅರಗಿಸಿ ಕೊಳ್ಳಬೇಕಂತೆ , ಆಕಡೆ ,ಈಕಡೆ ತೂರಾಡಬಾರದಂತೆ, ಇಂಪಾರ್ಟೆಂಟು ಏನೆಂದರೆ ಕುಡಿದು ಹೆಚ್ಚಾದರೂ ಸಹ ವಾಂತಿ ಮಾಡಿಕೊಳ್ಳಬಾರದಂತೆ.ಅದಾಗಲೇ ಶುರುವಾಗಿತ್ತು ಚಾಲೆಂಜುಗಳು , ನಾನು ವಾಂತಿ  ಮಾಡಿಕೊಳ್ಳುವುದಿಲ್ಲ ಎಂದು . ಒಬ್ಬನಂತೂ ಅವನಿಗೆ ಹೇಳಿದ್ದಕ್ಕೆ ಕೂಗಾಡಲೇ ಶುರು ಮಾಡಿದ್ದ .ಅಂತೂ ಇಂತೂ ಎಲ್ಲ ಸಂಬಾಳಿಸಿ , ಸಾತೊಡ್ಡಿ ತಲುಪಿಯಾಗಿತ್ತು . ಅಲ್ಲಿ ನಿಂತ ಹಿನ್ನೀರ ನೋಡಿದಾಗ ಎಲ್ಲರಿಗೂ ನೆನಪಾಗಿತ್ತು ,ಯಾರೂ ಕುಡಿಯುವ ನೀರೇ ತಂದಿಲ್ಲ ಎಂದು . ಅದಾಗಲೇ ಒಬ್ಬ ಡೈಲಾಗ್ ಬಿಟ್ಟಿದ್ದ , ಹರಿಯುವ ನೀರು ಶುದ್ದ ಕಣ್ರೋ ಎಂದು .ಸರಿ ಎಂದು ಎಲ್ಲರೂ ತಂದ ಮೂಟೆಯನ್ನೆಲ್ಲ ಬೀಸಾಕಿ ಫಾಲ್ಸ್ ಕಡೆ ನಡೆದಿದ್ದೆವು . ಸುಮಾರು ಅರ್ಧ ಗಂಟೆ ಕಳೆದಿರಬೇಕು , ಸ್ವಲ್ಪ ಹಸಿವಾಗಲು ಶುರುವಾಗಿತ್ತು. ಖಾರ ಬ್ರೆಡ್ಡುಗಳನ್ನಾದ್ರೂ ತಿನ್ನೋಣವೆಂದು ಮೊದಲಿಗೆ ಬಂದ ಒಬ್ಬ ಗೆಳೆಯ ಕೂಗಿಕೊಂಡ ,ನಾವೆಲ್ಲಾ ಏನಾಯ್ತೆಂದು ಬಂದು ನೋಡಿದಾಗ ಅವನು ನಗುತ್ತ  ಮರದ ಕಡೆ ನೋಡುತ್ತಿದ್ದ . ನಾವೆಲ್ಲಾ ಏನೆಂದು ನೋಡಿದಾಗ ಸುಮಾರು ಹತ್ತಿಪ್ಪತ್ತು ಮಂಗಗಳು ನಮ್ಮ ಪುಕ್ಕಟೆ ಬಂದ ಖಾರಾ ಪ್ಯಾಕ್ ಗಳನ್ನೂ, ಬ್ರೆಡ್ ಗಳನ್ನೂ ಅವೆಲ್ಲ ಸೇರಿ ಪಾರ್ಟಿ ಮಾಡಾಗಿತ್ತು .ತಂದ 50 ಮೊಟ್ಟೆಗಳಲ್ಲಿ ಅರ್ಧಕರ್ಧ ಒಡೆದು ಹೋಗಿತ್ತು . ಮಿರ್ಚಿ ಮಾಡಲೆಂದೇ ತಂದ  2Kg  ಮೈದ  ಹಿಟ್ಟನ್ನು  ಸುತ್ತ ಮುತ್ತೆಲ್ಲ ಹರಡಿ ಹಾಕಿದ್ದವು .ನಮ್ಮ ಎಲ್ಲ ಪ್ಲಾನು  ತಲೆಕೆಳಗಾಗಿತ್ತು . ಸರಿ ಏನು ಮಾಡುವುದೆಂದು ಯೋಚನೆ ಮಾಡಲು ಶುರು ಮಾಡಿದೆವು . ಇದ್ದಿದರಲ್ಲಿ ಮೊಟ್ಟೆಗಳು ಒಡೆದಿದ್ದರೂ ಎಲ್ಲವೂ ಕೊಟ್ಟೆಯಲ್ಲಿ ಭದ್ರವಾಗಿತ್ತು .ಮೆಣಸು ಮತ್ತು ತರಕಾರಿಯನ್ನು ಮುಟ್ಟಿರಲಿಲ್ಲ . ನಂತರ ಒಬ್ಬರು ಅಡಿಗೆ ಗೆ ತಯಾರಿ ಮಾಡುವುದು ,ಮತ್ತಿಬ್ಬರು ಅಲ್ಲೇ ಸನಿಹದಲ್ಲಿದ್ದ (ಸುಮಾರು 1  ಕಿ ಮೀ) ದೂರದಲ್ಲಿದ್ದ ಮನೆಗೆ ಹೋಗಿ ಮಿರ್ಚಿ ಮಾಡಲು ಬೇಕಾದ ಮೈದಾ ಹಿಟ್ಟು ಏನಾದರೂ ಸಿಗುವುದೋ ನೋಡುವುದು ಎಂದು ,ನಾನು ಮತ್ತೊಬ್ಬ ಗೆಳೆಯ ಇಬ್ಬರೂ ಬ್ಯಾಟರಿ ಹಿಡಿದು ಹೊರೆಟೆವು .ಅಂತು ಅಲ್ಲಿಗೆ ಹೋಗಿ ಕೇಳಿದಾಗ ನಮ್ಮ ಪುಣ್ಯಕ್ಕೆ ಸುಮಾರು  1 Kg ಯಷ್ಟು ಹಿಟ್ಟು ಇತ್ತು ಅದೂ ಆ ಬಡವೆ ಎಲ್ಲಾ ಪುರಾಣ ಹೇಳುವವರೆಗೂ ಬಿಟ್ಟಿರಲಿಲ್ಲ .ಕೊನೆಗೆ ಎಷ್ಟೆಂದು ಕೇಳಿದಾಗ ಕೊಡಿ ಅಂತಂದಳು . ಸರಿ ಎಂದು 50 ರೂಪಾಯಿಯನ್ನು ತೆಗೆದು ಕೊಟ್ಟೆ . ಚೇಂಜ್ ತರಲು ಮನೆ ಒಳಗೆ ಹೋದ ಆ ಬಡವೆ 15 ನಿಮಿಷ ಆದ ಮೇಲೆ ಬಂದು ಚೇಂಜ್  ಇಲ್ವಲ್ಲ ಅಂತಂದಳು . ನನ್ನ ಕರ್ಮ ಇವತ್ತೆಲ್ಲ ಹೀಗೆ ಆಗುತ್ತಿದೆ ಎಂದು , ಸರಿ ಬಿಡಿ ಪರವಾಗಿಲ್ಲ ಎಂದು ಬಂದೆವು . ನಮಗೆ ದುಡ್ಡು ಹೋದರು ಮೈದಾ ಹಿಟ್ಟು ಸಿಕ್ಕಿದ್ದಕ್ಕೆ ಸ್ವಲ್ಪ ಕುಶಿಯಾಗಿತ್ತು. ಅಂತು ಗೆಳೆಯರ ಹತ್ತಿರ ಬಂದು ಸೇರಿ ಕೊಂಡಾಗ ಅಡುಗೆ ತಯಾರಿ ಸುಮಾರಿಗೆ ಮುಗಿದಿತ್ತು .ಒಬ್ಬ ಮೈದಾ ಹಿಟ್ಟನ್ನು ತೆಗೆದು ಕೊಂಡು ಕಲಸಲು ನೋಡಿದವ , ಪ್ರಾಣಿ , ಕ್ರಿಮಿ, ಕೀಟಗಳ ಹಿಂಸೆ ಮಹಾಪಾಪ ಏನು ಮಾಡಲಿ ?ಎಂದ . ಏನಪ್ಪಾ ಈಗಲೇ ಜಾಸ್ತಿಯಾಯ್ತ ? ಎಂದು ಕೇಳಿದಾಗ ,ಬಂದು ನೋಡು ಎಂದ . ಎಲ್ಲರೂ ಹೋಗಿ ನೋಡಿದಾಗ ಅದರಲ್ಲಿ  ಸುಮಾರು ಅರ್ಧ Kg ಮೈದಾ ಹಿಟ್ಟು ಮತ್ತರ್ಧ Kg  ಸುರಭಿ (ಕೀಟ) ಇದ್ದವು .
ಎಲ್ಲಾ ಹಿಡಿ ಶಾಪ ಹಾಕುತ್ತ ಅದನ್ನೇ ಚೊಕ್ಕ ಮಾಡಲು ಶುರು ಮಾಡಿದೆವು . ಮತ್ತೊಬ್ಬನಿಗೆ ಏನು ಹೊಳೆಯಿತೋ ಏನೋ,  ಒಂದು ಪ್ಲೇಟು ಮತ್ತೊಂದು ಬ್ಯಾಟರಿ ಹಿಡಿದು ಹೊರಟೆ ಬಿಟ್ಟ . ಆಮೇಲೆ ಗೊತ್ತಾಯ್ತು ಅವನು ಮಂಗಗಳು ನೆಲದ ಮೇಲೆ ,ಬದಿಗೆ ಇದ್ದ ಕಂದಕದಲ್ಲಿ  ಚೆಲ್ಲಿದ್ದ ಮೈದಾ ಹಿಟ್ಟನ್ನು ತರಲು  ಹೋಗಿದ್ದ ಎಂದು . ಇದ್ದಿದ್ದರಲ್ಲಿ ಮಂಗಗಳು ಕೊಟ್ಟೆಯಲ್ಲಿ  ಸ್ವಲ್ಪ ಉಳಿಸಿ ಹೋಗಿದ್ದವು.ಅಂತೂ ಎಲ್ಲಾ ಚೊಕ್ಕ ಮಾಡಿ , ಒಬ್ಬ ಸ್ಪೆಷಲಿಸ್ಟ್ ಆಮ್ಲೆಟ್, ಮಿರ್ಚಿ , ಎಲ್ಲಾ ಮಾಡಲು ಬಂಡಿಯ ಎದುರು ಕುಳಿತ . ಅವನು ಎಲ್ಲಾ ಹದ ಮಾಡಿ ಕರಿಯಲು ಕುಳಿತಾಗಲೇ ಒಬ್ಬೊಬ್ಬರಾಗಿ (ಗುಂಡು ಪಾರ್ಟಿಯೂ ಸೇರಿ)  ರುಚಿ ನೋಡಲು ಶುರು ಮಾಡಿದ್ದರು.ಎಲ್ಲವೂ ತೆಗೆಯಲು ಇಟ್ಟ ಪ್ಲೇಟ್ ಬದಲಾಗಿ ಒಬ್ಬೊಬ್ಬರ ಹೊಟ್ಟೆ ಸೇರುತ್ತಿದ್ದವು. ನಮಗೆ ಆವಾಗಲೇ ಗೊತ್ತಾಗಿದ್ದು ಮಿರ್ಚಿಗೆ ಮೈದಾ ಹಿಟ್ಟಿನ ಜೊತೆ ರುಚಿಗೆ ತಕ್ಕಷ್ಟು ಉಪ್ಪಿನ ಜೊತೆ ಸುರಭಿಯನ್ನು (ಕೀಟ) ಸೇರಿಸಿದರೆ ಮತ್ತೂ ರುಚಿಯಾಗುತ್ತದೆ ಎಂದು.ಅಂತೂ ಮಾಡಿದ್ದನ್ನೆಲ್ಲ ತಿಂದು ಮುಗಿಸಿ ಹಾಸಿಗೆ ಹಾಸಿದೆವು ಅಷ್ಟರ ನಂತರ ಶುರುವಾಗಿತ್ತು ಗೆಳೆಯರ ಗುಂಡಿನ ಕರಾಮತ್ತು . ಅಲ್ಲೊಬ್ಬ ಮೊದಲ ಬಾರಿಗೆ ರುಚಿ ನೋಡಿದ್ದ , ಅದೂ ಒಂದೇ ಸಲ  ಜಾಸ್ತಿ ಕುಡಿಯಲು ಹೆದರಿ , ಸ್ಪೂನ್ ಲ್ಲಿ ಟ್ರೈ ಮಾಡಿದ . ಅವನ ಮುಖವನ್ನೊಮ್ಮೆ ನೋಡಬೇಕಾಗಿತ್ತು . ಆಮೇಲೆ ಒಂದಷ್ಟು ಸಕ್ಕರೆಯನ್ನು ಬಾಯಲ್ಲಿ ತುರುಕಿಕೊಂಡ ಎನ್ನಿ. ಸುಮಾರು ಮದ್ಯ ರಾತ್ರಿ 12 ಗಂಟೆಗೆ ಎಲ್ಲರಿಗೂ ಕುಡಿದು ಮುಗಿಸಿಯಾಗಿತ್ತು . ಇದ್ದುದರಲ್ಲಿ ನಾವೊಂದು  ಮೂರ್ನಾಲ್ಕು ಜನ ಮಹಾ ಪಾಪಿಗಳು , ಎಲ್ಲರನ್ನು ಮದ್ಯ ಸೇರಿಸಿ ಎರಡೂ ಕಡೆ ಇಬ್ಬಿಬ್ಬರು ಮಲಗುವುದು ಎಂದು ತೀರ್ಮಾನ ಮಾಡಿಯಾಗಿತ್ತು . ಕುಡಿದ ಅಮಲಿನಲ್ಲಿ ಎಲ್ಲಾದರೂ ಹೋಗಿ ಹೊಳೆ ಹಾರಿಕೊಂಡಾರು ಎಂಬ ಭಯ ನಮಗಿತ್ತು . ಒಬ್ಬನಂತೂ ಆಗಲೇ ತನ್ನ ಪ್ರತಾಪ ತೋರಿಸಿದ್ದ (2  ಸಲ ವಾಂತಿ ಮಾಡಿಕೊಂಡು ಸುಸ್ತಾಗಿ ಮಲಗಿ ಬಿಟ್ಟಿದ್ದ) . ನಾನು ಸ್ವಲ್ಪದರಲ್ಲಿ ಮೈ ಮೇಲೆ ಬೀಳಿಸಿಕೊಳ್ಳುವದರಿಂದ ಬಚಾವಾಗಿದ್ದೆ. ಮತ್ತೊಬ್ಬ ನಾನೊಂದು ಚೂರೂ ವಾಂತಿ ಮಾಡಿಕೊಳ್ಳುವುದಿಲ್ಲ ಎಂದು ಕೊಚ್ಚಿಕೊಂಡವನು ಒಂದು ಮೂಲೆಯಲ್ಲಿ ಹೋಗಿ ಬೆರಳುಗಳನ್ನು ಗಂಟಲ ವರೆಗೂ ತೂರಿಸಿಕೊಂಡು ವಾಂತಿ ಮಾಡುವ ಪ್ರಯತ್ನದಲ್ಲಿದ್ದ . ಅಂತೂ ಅವನು ಸುಮಾರು ಹೊತ್ತು ಟ್ರೈ ಮಾಡಿ ಸರಿಯಾದ ಎನ್ನಿ . ಮತ್ತೆಲ್ಲ ಗೆಳೆಯರು ಅದಾಗಲೇ ಸುಸ್ತಾಗಿ ಮಲಗಿಬಿಟ್ಟಿದ್ದರು. ಅಲ್ಲಿ ನಿದ್ದೆ ಮಾಡದಿದ್ದವನು ನಾನೊಬ್ಬನೇ . ಈಗಲೂ ಕೆಲವೊಮ್ಮೆ ಎಲ್ಲಾ ಸಿಕ್ಕಾಗ ಹೇಳಿಕೊಂಡು ನಗುವುದಿದೆ . ಕುಡುಕರ ಲೆಕ್ಕ ಎಂದು .                          

2 comments: