ಮನದ ತುಂಬಾ ಕನಸುಗಳಿಗೆನು ಬರವಿಲ್ಲ... ನನಸಾಗದ ಕನಸುಗಳೂ ಇಲ್ಲಿ ಜೀವ ತಳೆಯುತ್ತದೆ .. ಸುಮ್ಮಗೆ ಹಾಗೊಂದಿಷ್ಟು ಕನಸುಗಳ ತವರು ... ಈ ನನ್ನೊಳಗಿನ ಕನಸು ...
Thursday, March 13, 2014
Thursday, October 3, 2013
ಕೊನೆಗೂ ಹೆತ್ತ ನೆಲದಿಂದ ದೂರಾದದ್ದು
ಗೊತ್ತಾಗಲೇ ಇಲ್ಲ ..
ಅಜ್ಜ ಮುತ್ತಜ್ಜ ಮಾಡಿ ಕೂಡಿಟ್ಟದ್ದು ..
ಉತ್ತಿ, ಬಿತ್ತಿ ಕಾಪಿಟ್ಟ ನೆಲವೀಗ
ಯಾರೂ ಓಡಾಡದೆ ಹಸಿರಾಗಿದೆ ...
ಅಜ್ಜನಿಗೊಂದು ಚಟವಿತ್ತು ..ಹೋದ ದಾರಿಯಲ್ಲೇ
ಕೂತು ಕಳೆ ಕಿತ್ತು ಚೊಕ್ಕವಾಗಿಡುವುದು
ತೋಟದಲ್ಲಿ ಕಳೆ ಇದ್ದರೆ ಸತ್ವ ಇರುವುದಿಲ್ಲ ..
ಕಾಲ ನಿಲ್ಲಬೇಕಲ್ಲ ..ಹೊಸ ಹೊಸ ಕ್ರಾಂತಿಗಳು
ಮೊದಲೆಲ್ಲ ಕೃಷಿ ಆಗಿದ್ದು ಮಾಡುವವರಿಲ್ಲದೆ
ಸಹಜ ಕೃಷಿ ಆಗಿದ್ದು ..
ಕೃಷಿ ಬಿಟ್ಟವ ಸಹಜ ಕೃಷಿಕ ..
ಬಿಟ್ಟು ಬಿಡಿ ಅವಷ್ಟಕ್ಕೆ ..ಸಹಜವಾಗಿ ಬೆಳೆಯಲಿ ..
ತೋಟವೆಂದರೆ ಕಳೆಯಿರಬೇಕು ,ಹಸಿರಿರಬೇಕು ..
ಕೃಷಿಯೇ ಗೊತ್ತಿರದ ಗಮಾರನಿಗೆ ನೋಡಿದ್ದೆಲ್ಲ ಚಂದ
ಅರೆ ಅದೆಷ್ಟು ಹಸಿರಾಗಿದೆ ಎಂದು ಕಟ್ಟಿದ
ಬಿಂಜಲು ಗಳನ್ನೆಲ್ಲ ಸರಿಸಿ ಓಡಾಡಿದ
ಮೇಲೆ ಕುಳಿತ ಆಜ್ಜ ಮುತ್ತಜ್ಜರ ಕೂಗು ಅಲ್ಲಿಂದಲೇ ..
ಮಗನೆ ಬಿನ್ಜಲು ಕಟ್ಟುವುದು ಪಾಳು ಬಿದ್ದ ಜಾಗದಲ್ಲಿ ..
ಸಹಜ ಕೃಷಿ ಯಲಲ್ಲ ..
Friday, July 19, 2013
ಕವಿತೆ ಬರೆಯಲಾಗುತ್ತಿಲ್ಲ .. ನನಗೆ
ನನ್ನಲ್ಲಿ ಕವಿತೆಯಾಗಿ ಬಂದವಳೀಗ ಕವಿತೆ ಬರೆಯಲು ಬಿಡುತ್ತಿಲ್ಲ
ಎಷ್ಟೆಲ್ಲ ಕನಸುಗಳಿದ್ದವು ..ಕನಸಾಗೆ ಉಳಿಯಬೇಕಿತ್ತು
ನನ್ನೊಳಗಿನ ಕನಸಿನ ಲೋಕದಲ್ಲಿ ನೀನೊಬ್ಬಳೇ ..
ನಿನಗಾಗೆ ಎಷ್ಟೆಲ್ಲ ಸಿಂಗರಿಸುತ್ತಿದ್ದೆ ..
ಅಷ್ಟೆಲ್ಲ ಬಾವನೆಗಳ ..
ಪ್ರತಿ ಕ್ಷಣವೂ ನೀ ಜೊತೆಗಿರುವಾಗ
ನನಗಾಗೆ ಕಾದಿರುವ ನಿನ್ನ ವಿರಹ ಈಗಲ್ಲಿ ಒಂಟಿ ...
ಸುಮ್ಮಗೊಂದು ಮುತ್ತ ಕೊಟ್ಟು ತುಂಟತನ
ಮಾಡಿದವಳೀಗ ... ನಾ ಮರಳಿ ಕೊಡುವವರೆಗೂ ಬಿಡುವುದಿಲ್ಲ ..
ಬೆಚ್ಚಗೆ ತಬ್ಬಿ ಉಸಿರು ಕಟ್ಟಿಸುವ ಆ ಕನಸಿನ ಲೋಕದ
ಕಲ್ಪನೆಯೀಗ ಉಸಿರು ಬಿಡಲು ಕೊಡುತ್ತಿಲ್ಲ ..
ಕವಿತೆ ಬರೆಯಲಾಗುತ್ತಿಲ್ಲ .. ನನಗೆ
ಆಗೆಲ್ಲ ಕಲ್ಪನೆಗಳಿದ್ದವು ನನ್ನವಳ ಬಗೆಗೆ ..
ಮನಸಲ್ಲಿ ತುಂಬಿಕೊಂಡ ನೂರಾರು ಕನಸುಗಳಿದ್ದವು
ಎಲ್ಲ ನನಸಾದರೆ ಮತ್ತೆಲ್ಲಿ ಕಲ್ಪನೆ ..??
Friday, March 29, 2013
ನಿಶ್ಚಯವಾಗಿದೆ ... ನನ್ನೊಳಗಿನ ಕನಸಿನ ಲೋಕಕ್ಕೆ ಕಾಲಿಡಲು
ಸುಮ್ಮನೆ ಒಳಗೆ ಬಂದು ಬಿಡು
ನನ್ನೆದೆಯ ಚಿತ್ತಾರಗಳನೆಲ್ಲ ಹರವಿದ್ದೇನೆ
ಬರೆದುಬಿಡು ನಿನಗಿಷ್ಟವಾದ ಚಿತ್ರವನ್ನ ..
ಒಂದಾಗಿಬಿಡಲಿ ನಮ್ಮಿಬ್ಬರ ಕನಸುಗಳು ..
ಹೂಗಳ ಇಟ್ಟಿದ್ದೇನೆ .. ಅಲಂಕರಿಸಿಬಿಡು ..
ನಿನಗಿಷ್ಟವಾದ ಬಣ್ಣಗಳ ಜೊತೆ ..
ಏಳು ಬಣ್ಣಗಳೂ ಒಂದುಗೂಡಲಿ
ನಮ್ಮಿಬ್ಬರ ಕನಸುಗಳಿಗೆ ...
ನಿನಗಾಗೆ ಕಾದಿರುವ ಕನಸಿನ ಲೋಕವಿದು
ಪ್ರವೇಶವಾಗಿಬಿಡಲಿ ನಿನ್ನ ಬಲಗಾಲಿಟ್ಟು ..
ನನ್ನ ಕನಸಿನ ಲೋಕದೊಳಗೆ ..
ಪುಳಕಗೊಂಡುಬಿಡಲಿ .. ನಿನ್ನ ಕಾಲ್ಗೆಜ್ಜೆ ಸದ್ದಿಗೆ
ನನ್ನೆಲ್ಲ ಕನಸುಗಳು ...
ನಿನಗಾಗೆ ಕಾದಿರುವ ಕನಸುಗಳಿವು ..
Tuesday, March 5, 2013
ಬೆಚ್ಚಗೆ ತಬ್ಬಿ ತಲೆಯಿಟ್ಟು ಮಲಗಿದವಳು ಒಮ್ಮೆಲೇ ಕಣ್ಣ ನೋಡುತ್ತಾ ಕೇಳಿದ್ದೆ ..
ಮುತ್ತು ಕೊಡು ...
ಒಂದು ಕ್ಷಣ .... ಹಾಗೆ ಬಿಗಿದಪ್ಪಿ ತುಟಿಗೆ ತುಟಿಯೊತ್ತಿದ್ದೆ ..
ಅಲ್ಲೆಲ್ಲೋ ಕುಳಿತ ದುಂಬಿಗೂ ಎಚ್ಚರವಾಗಿತ್ತು ..
ಏನಕ್ಕೋ ನೆನಪಾಗಿತ್ತು ನೀ ಕೊಟ್ಟ ನವಿಲುಗರಿ ..
ಇನ್ನೂ ನನ್ನಲ್ಲೇ ಇತ್ತು ..
ಆಗಲೂ ಹೀಗೆ ...ಬಿಗಿದಪ್ಪಿ ತುಟಿ ಕಚ್ಚಿದ್ದೆ
ಈ ನವಿಲುಗರಿ ನಿನ್ನಲ್ಲೇ ಇರಲಿ ..ನನ್ನ ಉಸಿರಿರುವವರೆಗೂ ..
ಎಂದು ಕಣ್ಣಲ್ಲಿ ನೀರು ತುಂಬಿಸಿಕೊಂಡಿದ್ದೆ ..
ಅವೆಲ್ಲ ಕನಸಾಗಲಿ ... ಮೆಲ್ಲಗೆ ಪಿಸುನುಡಿದಿದ್ದೆ
ಇಂದೇಕೋ ಮತ್ತೆ ರಾಧೆ ನೆನಪಾಗುತ್ತಿದ್ದಾಳೆ ..
ನಮ್ಮಿಬ್ಬರಲ್ಲೂ ಅದೇ ಭಾವವಿದೆಯಾ ...
ಕೃಷ್ಣ ...... ರಾಧೆ ....
ಅವರೂ ನಮ್ಮಿಬ್ಬರ ಹಾಗೆ ಅಲ್ಲೆಲ್ಲೋ ಕುಳಿತು ಕನಸು ಕಾಣುತ್ತಿದ್ದರಾ ??
ಸುಮ್ಮನೆ ಮುಂಗುರುಳ ಜೊತೆ ಆಟವಾಡುತ್ತಿದ್ದೆ ..
ಏನಕ್ಕೋ ಕೆನ್ನೆ ಮೇಲಿನ ಮಚ್ಚೆ ಮುದ್ದಾಗಿ ಕಂಡಿತ್ತು ..
ಮೆಲ್ಲಗೆ ಕಚ್ಚಿ ಪಿಸುನುಡಿದಿದ್ದೆ ..
ಕೃಷ್ಣ ರಾಧೆಯರ ನೆನಪೇಕೆ ...??
ಸುಮ್ಮಗೆ ತಲೆಯಿಟ್ಟು ನನ್ನದೆ ಬಡಿತವ ಕೇಳು....
ಅದೂ ಪಿಸುಗುಡುತ್ತಿದೆ ... ನಾವಿಬ್ಬರೇ ಅವರೆಂದು ...
Saturday, February 23, 2013
ಸಮಾಧಿ ಕಟ್ಟಿದ್ದೇನೆ ನನ್ನೊಳಗಿನ ಕನಸುಗಳಿಗೆಲ್ಲ
ಮತ್ತೆಂದೂ ಜೀವ ಬಾರದಂತೆ
ಸಮಾಧಿಯೋಳಗಿನ ಕನಸುಗಳೆಲ್ಲ ಅಸ್ತವ್ಯಸ್ತ ..
ಕೊಂದವರ್ಯಾರೋ ಗೊತ್ತಿಲ್ಲ ..
ಚೂರು ಜೀವ ಇರುವ ಕನಸುಗಳಿಗೂ ಉಸಿರು ಕಟ್ಟುವ ಶಿಕ್ಷೆ
ಮತ್ತೆಂದೂ ಉಸಿರಾಡಬಾರದು ..
ಸುತ್ತ ಗಾಳಿಯೂ ನುಸುಳದಂತೆ
ಅಮೃತಶಿಲೆಯ ಸಮಾಧಿ ಕಟ್ಟಿ ಬಿಟ್ಟಿದ್ದೇನೆ ..
ಆದರೂ ನನ್ನೊಳಗಿನ ಕನಸುಗಳೆಲ್ಲ ಸುಂದರವಲ್ಲವೆ ??..
ಸಮಾದಿಯ ಮೇಲೆ ಮೂರು ಗುಲಾಬಿಯಿರಲಿ ..
ಕೊಂದವರ್ಯಾರೋ ಗೊತ್ತಿಲ್ಲ ..
ಕನಸು ಹುಟ್ಟಿದ ದಿನವಂತೂ ತಿಳಿದಿಲ್ಲ ..
ಅಳೆದುಳಿದ ಕನಸುಗಳ ಕೊಂದಿದ್ದಕ್ಕೆ ಶಿಕ್ಷೆಯೇನೋ ??
ಸಮಾದಿ ಮೇಲೆ ಬರೆವ ಹೆಸರಿಗೊಂದು ಕಾಲಿ ಜಾಗವಿರಲಷ್ಟೇ
ಸದ್ಯ ಕನಸುಗಳ ಆತ್ಮಕ್ಕೊಂದು ಶಾಂತಿಯಿರಲಿ
Friday, October 19, 2012
ಅಂದೇಕೋ ಕಡಲ ತೀರದಲ್ಲೊಂದು
ಮರಳ ಗೂಡು ಕಟ್ಟುವ ಮನಸಾಗಿತ್ತು ..
ಸುಮ್ಮಗೆ ಹೊರಟಿದ್ದ ನನಗೆ ನೀ ಕಂಡಿದ್ದೆ ..
ಕಡಲು ಭೋರ್ಗರೆಯುತ್ತಿತ್ತು ..
ಪ್ರತೀ ಸಲ ಕಟ್ಟಿದ ನಿನ್ನ ಮರಳ ಗೂಡನ್ನು
ಚುಂಬಿಸಿ ಹೋಗುತ್ತಿತ್ತು
ನನ್ನ ಮನವೂ ಭೋರ್ಗರೆದಿತ್ತಾ ??
ಸುಮ್ಮನೆ ಬಂದು ನಿನ್ನೆದುರು ಕೂತು
ನಿನ್ನ ಜೊತೆ ಕೈ ಸೇರಿಸಿದ್ದೆ ..
ಅಕ್ಕ ಪಕ್ಕ ಮತ್ತೆರಡು ದಿಬ್ಬ ಮಾಡಿ
ಮರಳ ಗೂಡ ಮೇಲೆ ನಿನ್ನ ಹೆಸರ ಕೆತ್ತಿದ್ದೆ ..
ನಿನ್ನ ಬಾವನೆಗಳೂ ಭೋರ್ಗರೆದಿತ್ತಾ ?? ..
ಸುಮ್ಮಗೆ ಮುಂಗುರುಳ ಸರಿಸಿ ನನ್ನ ಕಣ್ಣ ನೋಡಿದ್ದೇ
ಪಕ್ಕ ನನ್ನ ಹೆಸರೂ ಬರೆದಿದ್ದೆ ...ತುಟಿಯಂಚಿನಲಿ
ತುಂಟ ನಗುವಿತ್ತು ...
ಎಲ್ಲಿಂದಲೋ ಹೆಕ್ಕಿ ತಂದ ಹೂಗಳನೂ ಸಿಂಗರಿಸಿದ್ದೆ ..
ನನಗರ್ಥವಾಗಿರಲಿಲ್ಲ ಕಡಲು ಭೋರ್ಗರೆದಿದ್ದು ..
ಇಂದೇಕೋ ಕಡಲು ಕೂಡ ಪ್ರಶಾಂತವಾಗಿದೆ
ಗೊತ್ತಾಗಿರಬಹುದೇನೋ ಅದಕ್ಕೂ ..
ನೀ ದೂರವಾದದ್ದು ..
ಅದಕ್ಕೆ ನೀ ಕಟ್ಟಿದ ಮರಳ ಗೂಡನೂ ಸೋಕದೆ
ಸುಮ್ಮನಾಗಿದೆ ...
Friday, October 12, 2012
ನನ್ನದೊಂದಿಷ್ಟು ಪಕೀರನ ಕನಸುಗಳು .
ಹೊಟ್ಟೆಗೊಂದಿಷ್ಟು ಪರಮಾತ್ಮ ಸೇರಿದಾಗ
ನಿಶೆ ಏರಿದ ಹಾಗೆ ಅವುಗಳದೇ ಲೋಕದಲ್ಲಿ
ತೇಲಾಡುವ ಪಕೀರನಂತೆ ... ನನ್ನ ಕನಸುಗಳು ..
ಬೇಕಿಲ್ಲ ಯಾವ ದೊಣ್ಣೆ ನಾಯಕನ ಕಟ್ಟಪ್ಪಣೆ
ಮನಸಲ್ಲಿ ಹಾಡುವ ಹಾಡು ಕುಣಿತಗಳಿಗೆ
ಚಂದ್ರ ನಕ್ಷತ್ರಗಳೇ ಸಂಯೋಜಕರು
ಕೇಳಿ ಕಿವಿಗೊಟ್ಟು ... ಕನಸುಗಳ ಲೊಕದಲ್ಲೊಂದು
ನನ್ನದೇ ಕಥಾಮಂಜರಿ ..
ರಸವತ್ತಾದ ಕನಸುಗಳಿಗೊಂದು ಮರೀಚಿಕೆ ಕಥಾನಾಯಕಿ..
ನಾಚಬೇಕು ಕಥಾನಾಯಕಿ .. ಪಕೀರನ ವರ್ಣನೆಗಳಿಗೆ ..
ಬಿಟ್ಟು ಕೊಡುವುದಿಲ್ಲ ಒಂಟಿಯಾಗಿ ..
ತಂಗಾಳಿ ಬೀಸಿ ಮುಸ್ಸಂಜೆ ಕೆಂಪೆರುತ್ತದೆ.. ಜೊತೆಗೊಂದಿಷ್ಟು
ಚುಕ್ಕಿ ತಾರೆಗಳೂ ಮುದಗೊಳ್ಳುತ್ತವೆ ..
ಪ್ರಕೃತಿಯೂ ಸಿಂಗಾರಗೊಳ್ಳುತ್ತವೆ..
ನವ ವಧುವಿನಂತೆ ..
ಪಕೀರನ ಕನಸುಗಳಿವು ... ಮನಸು ಪೂರ್ಣ ಬೆತ್ತಲೆ ..
ಬಾವನೆಗಳ ಅಡಗಿಸಿ ಮೇಲಿನ ಅಲಂಕಾರಗಳಿಲ್ಲ..
ಒಪ್ಪ ಓರಣಗಳಿಲ್ಲ ..
ಕನಸಿನ ಲೋಕಕ್ಕೆ ಕಾಲಿಡಬೇಕು ಒಮ್ಮೆ ..
ಪಕೀರನ ಲೋಕವಿದು .
ಏನಿಲ್ಲ !!!... ಏನಿಲ್ಲದಿರಲಿ...
ಜುಟ್ಟಿಗೆ ಮಲ್ಲಿಗೆಯಂತೂ ಇದೆ .. ಒಳಬಂದವಳಿಗೆ
ಗೊತ್ತು ... ಪಕೀರನ ಕನಸುಗಳು ...
ಇವನಿಗೆ ಮಾತ್ರ ಬಚ್ಚಿಟ್ಟು ಕೊಂಡಿದ್ದೆ ಬಂತು ..
ಹೊರಬರಲು ಗೊತ್ತಿಲ್ಲ ... ತನ್ನದೇ ಕನಸುಗಳ ಲೋಕದಿಂದ ...
Thursday, October 4, 2012
ಇನ್ನೂ ಹೇಳಲಾಗದೆ ಉಳಿದುಹೋಗಿದೆ ನನ್ನಲ್ಲಿ
ನಿನ್ನನರಸಿ ಬಂದ ಮಾತುಗಳ ತಡಕಾಡಿದ ಮನಸೀಗ
ಒಂಟಿತನದ ನಿತ್ಯ ಸಂಗಾತಿ...
ಪಿಸುಗುಡುತ್ತಿವೆ ಇನ್ನೂ ಮನಸಿನೊಳಗೆ ..
ನಿನ್ನ ಕಂಡ ಕ್ಷಣದಲ್ಲಿ ಆಡುವ ಮಾತುಗಳಿಗಾಗಿ ..
ನಿನ್ನ ನೆನಪಾಗುವ ರಾತ್ರಿಗಳೀಗ ಕಡುಗತ್ತಲು..
ಬೆಳದಿಂಗಳಿಲ್ಲ ...ಮಿನುಗೋ ನಕ್ಷತ್ರಗಳಿಲ್ಲ..
ಎಲ್ಲವೂ ನೀನಿರದೆ ಮಿನುಗುವುದನ್ನೇ ಮರೆತಿವೆ ..
ಸಿಂಗರಿಸಬೆಕಿತ್ತು ನನ್ನೆಲ್ಲ ಕನಸುಗಳ
ಚುಕ್ಕಿ ಚಿತ್ತಾರಗಳಂತೆ..ನಿನ್ನ ಜೊತೆಗೂಡಿ
ಆಸೆಯಿತ್ತು ನನ್ನ ಮನಕೂ ನೀ ಬಂದ ಆ ಕ್ಷಣ
ನನ್ನ ಮನಸಿನೊಳಗೆ ..
ತಡಬಡಾಯಿಸಿದ ಮಾತುಗಳು ...ಹೇಳಲು ನೂರಿದ್ದವು ಮನಸಿನಾಳದ ಬಾವನೆಗಳು
ಹೇಳಬೇಕಾದ ಮಾತುಗಳೆಲ್ಲ ನಾಚಿ ..
ಬರೀ ಮೌನಗಳೇ ಮಾತಾಗಿದ್ದವು ..
ಕಾತರವಿದೆ ಮನಸಿಗೀಗ ..ನೀ ಬರುವ ಕ್ಷಣಗಳ ..
ಮತ್ತೆ ಸಿಂಗರಿಸಬೇಕಿದೆ ..ನನ್ನೊಳಗಿನ ಕನಸುಗಳ
ನಿನ್ನ ಜೊತೆ.... ಚುಕ್ಕಿ ಚಿತ್ತಾರವಿಟ್ಟು
Thursday, September 27, 2012
ಮೊನ್ನೆ ಚೂರು ಹರಿದಿತ್ತು ..
ಎಷ್ಟೋ ವರ್ಷಗಳಿಂದ ನನ್ನ ಅಪ್ಪಿದ್ದ ಆ ಹಳೆಯ ಚಾದರ
ಅದೆಂತದೋ ಆಪ್ತತೆ ..ನನಗೂ ಅದಕೂ ..
ನನ್ನ ರಾತ್ರಿಗಳ ನಿತ್ಯ ಸಂಗಾತಿ ..
ಎಷ್ಟೋ ಕನಸುಗಳ ಬೆಚ್ಚಗಿರಿಸಿ ...ಕಣ್ಣೀರುಗಳ ಒರೆಸಿ ..
ನನ್ನ ಜತೆಗಿತ್ತದು ..
ಬಣ್ಣ ಮಾಸಿ ಹಳೆಯದಾಗಿದ್ದರೂ ಹೊಸದರ ಮೇಲೆ ಮನಸಾಗುತ್ತಿಲ್ಲ
ಒಂದು ದಿನ ತೆಗೆದಿರಿಸಿ ಮತ್ತೆ ಅದನ್ನಪ್ಪಿದ್ದೆ
ಅದಾದರೂ ಎಷ್ಟು ದಿನ ತಡೆದೀತು ??
ದಿನ ದಿನವೂ ನನ್ನ ಕಾಲಡಿಗೆ ಸಿಗುವ
ಆ ಚಾದರ ...ಎರಡಾಗುವ ಮೊದಲು ಬಿಡಬೇಕು ...
ಏನಾಗಲಿ ಇವತ್ತೊಂದಿನ ....
ನಾಳೆ ಬದಲಿಸಿದರಾಯಿತು ....
Saturday, September 1, 2012
ಮುಸ್ಸಂಜೆ
ಪ್ರತೀ ಮುಸ್ಸಂಜೆ ನಿನ್ನನಗಲುವ ವಿರಹದ ಸಮಯ
ದಿನವೆಲ್ಲ ಕಣ್ಣಲ್ಲಿ ಕಣ್ಣಿಟ್ಟು ನಿನ್ನ ನೋಡಿ
ಮುಸ್ಸಂಜೆಯಾಗಲು ವಿರಹ ವೇದನೆ
ಹೋಗುವ ಮೊದಲೊಮ್ಮೆ ನೋಡೋಣವೆಂದರೆ
ತುಂಟ ಮೋಡಗಳ ಕೀಟಲೆ ..ನಿನ್ನ ಮರೆಮಾಚಿ
ಹಕ್ಕಿ ಪಿಕ್ಕಿಗಳ ಕಲರವ ನೀ ಹೋಗುವ ಸಮಯ
ಗಾಳಿಗೂ ವಿರಹದ ನಿಟ್ಟುಸಿರು ...ಮೆಲ್ಲನೆ ಮೇಲೇರಿದೆ
ತುಂಡು ಮೋಡಗಳ ಚದುರಿಸಲು..
ಅಲ್ಲಲ್ಲಿ ಅಡಗಿ ಕುಳಿತ ನಕ್ಷತ್ರಗಳ ಸಾಲು ..
ಇದನ್ನೆಲ್ಲಾ ನೊಡುತ್ತ ಉಳಿದೆ ನಾನು ಅಲ್ಲೇ ...
ಮುಂದೆನಾಗುವುದೂ ಎಂದು ...
ಚಂದಿರನ ಮುಖ ರಂಗು ಚೆಲ್ಲಿ ..
ಖುಷಿಯಿಂದ ಮುಗುಳ್ನಗುತ್ತಿದ್ದ ......
Thursday, July 26, 2012
ಕತ್ತಲೆ ಬೆಳಕಿನ ಆಟ
ಅದೊಂದು ಹಾಗೆ ಸುಮ್ಮನೆ ಬಾವಗಳ ಮಿಲನ
ಬೆಳಕು ಕತ್ತಲೆ ನಡುವಿನ ಬದುಕಿನ ಆಟ..
ಅನಿವಾರ್ಯವದು ಬೆಳಕ ನಡುವೆ ಬದುಕಲು
ಅವಶ್ಯಕತೆಯದು ಕತ್ತಲೆಯ ನೀರವ ಮೌನವ ತೊಡೆಯಲು ..
ಬೆತ್ತಲೆಯಾಗುವ ಅಪರಿಚಿತ ಬಾವನೆಗಳಿಗೊಂದು ಕಾಲಮಿತಿ
ಬರಿದೇ ಬಾವನೆಗಳ ಸಮ್ಮಿಲನ ...
ಬರಿಯ ನಿಟ್ಟಿಸುರುಗಳಷ್ಟೇ ... ಬೇಕಿಲ್ಲ ಸಂಬಂದಗಳ ಬೇರು
ಬರಿಯ ಅವಶ್ಯಕತೆಯದು .. ಬದುಕ ಅನಿವಾರ್ಯವದು ..
ಕತ್ತಲೆಯ ಬದುಕಿಗೆ ಹೊಂದಿಕೊಂದವರೆಷ್ಟೋ .. ಕತ್ತಲೆಯಾಗುವುದೇ
ಕಾಯುವರೆಷ್ಟೋ ...
ಕತ್ತಲೆಯಾದರೆ ಕಾದು ನಿಲ್ಲಬೇಕು ಅವಶ್ಯಕತೆಯವರ ಹುಡುಕಿ ..
ಜಾಣ ವ್ಯವಹಾರವದು .. ಎಲ್ಲೆಂದರಲ್ಲಿ ಹುಡುಕುವ ಹಾಗಿಲ್ಲ
ಚೌಕಾಸಿ ವ್ಯಾಪಾರ ... ಲಾಭವೂ ಇಲ್ಲ ನಷ್ಟವೂ ಇಲ್ಲ ..
ಬೆಳಕು ಹರಿಯುವ ಮುನ್ನ ವ್ಯಾಪಾರ ಮುಗಿಸಬೇಕು ..
ಬೇಕಿಲ್ಲ ಯಾರ ಕಟ್ಟಪ್ಪಣೆ ಇಲ್ಲಿ ... ಮಾಡಿಲ್ಲ ಯಾವ ಚೌಕಟ್ಟು ಇಲ್ಲಿ ..
ಒಬ್ಬರಿಗದು ಅನಿವಾರ್ಯತೆ ...ಹುಡುಕಿ ಬರುವವರ ಅವಶ್ಯಕತೆ ..
ಒಂದೊಂದು ಅವಶ್ಯಕತೆಗೂ ಹೊಂದಿಕೊಳ್ಳುವ ಅನಿವಾರ್ಯತೆ ,,
ದಣಿದ ಮನಕೆ ಸಿಗುವ ಕಾಂಚಾಣ ಅವಡುಗಟ್ಟಿದ ನಿಟ್ಟಿಸುರೊಂದೆ ....
Wednesday, June 20, 2012
ಇಂದೇಕೋ ಮನದಲ್ಲಿ ನಿನ್ನದೇ ಸೋನೆ ಮಳೆ ..
ನೆಲವೆಲ್ಲ ಹಸಿಯಾಗಿದೆ ..ಗೊತ್ತಿಲ್ಲ ಎಂದು ಪ್ರೀತಿ
ಮೊಳಕೆಯೋಡೆಯುವುದೋ...
ಆಗಸದ ಮೋಡಕ್ಕೂ ನಿನ್ನಾಕರ್ಷಣೆಯ
ತಡೆಯಲಾರದೆ ನಿನ್ನ ತಲುಪಲು
ಮಳೆಯಾಗಿ ಸುರಿದು ಬಂದಿದೆ ...
ಗೊತ್ತಿಲ್ಲ ಮಳೆ ಸುರಿದ ರಭಸಕ್ಕೆ
ನಿನ್ನೊಡಲ ತಲುಪುವುದೋ..
ನನ್ನ ಪ್ರೀತಿ ನಿನ್ನಲ್ಲಿ ಚಿಗುರಲು ನೀ
ಹಸಿಯಾಗಬೇಕು ..ಮಳೆ ಸುರಿಯಬೇಕು
ಬಿತ್ತಿದ ಪ್ರೀತಿಯೆಲ್ಲ ಹಸಿರಾಗಿ
ಮೊಳೆಯಬೇಕು ..
ಮಳೆ ಸುರಿದು ಮನವೆಲ್ಲ ತಂಪಾಗಿ
ಹಸಿರಾದ ಮೇಲೆ ಕಾಮನಬಿಲ್ಲಿನ
ಚಿತ್ತಾರ ಮೂಡಬೇಕು .. ನಿನ್ನೊಲವ ಸೇರಲು ..
Thursday, May 17, 2012
ಹಾಗೆ ಬಂದು ಸುಮ್ಮನೆ ಹೋಗಿ ಬಿಡಿ ಮೋಡಗಳೇ
ಈಗಷ್ಟೇ ಸಿಂಗರಿಸಿದ್ದೇನೆ ಕನಸುಗಳ ನನ್ನ ಸಂಗಾತಿಗೆಂದು
ಮಳೆಸುರಿಸಬೇಡಿ...
ಒಂದಷ್ಟು ಹಣತೆಗಳ ಹಚ್ಚಿಟ್ಟು , ಬೆಳದಿಂಗಳಿಗಾಗಿ ಕಾಯುತ್ತಿದ್ದೇನೆ
ಈ ಮುಸ್ಸಂಜೆ ಬೆಳದಿಂಗಳಿಗೆ ಮಾತ್ರ ಆಮಂತ್ರಣ ..
ತಂಗಾಳಿಗೂ ಹೇಳಿಬಿಟ್ಟಿದ್ದೇನೆ .. ಕದ್ದು ಕದ್ದು ನೋಡ ಬೇಡವೆಂದು ,..
ನನ್ನವಳ ಜೊತೆಗೊಂದು ಸುಂದರ ಮುಸ್ಸಂಜೆಯ ನನಗೆ ಬಿಡು ..
ನಮ್ಮಿಬ್ಬರ ಆತುರಕ್ಕೆ ಸೂರ್ಯನೂ ನಾಚಿ ಮೊದಲೇ ಮರೆಯಾಗಿ
ಮುಸ್ಸಂಜೆಯ ಕಳಿಸಿ ಕೊಟ್ಟಿದ್ದಾನೆ ..
ಹಂಚಿ ಕೊಳ್ಳುವುದಿದೆ ಎಷ್ಟೋ ಕನಸುಗಳ ಮುಸ್ಸಂಜೆ ಸಾಕ್ಷಿಯಾಗಿ ..
ಇಡೀ ರಾತ್ರಿ ಕೈ ಕೈ ಹಿಡಿದು ಆಗಸದ ನಕ್ಷತ್ರಗಳ ಪಾಲು ಮಾಡ ಬೇಕಿದೆ ..
ಕಾಲುಗಳ ನೀರಲ್ಲಿ ಬಿಟ್ಟು ಹಾಗೆ ಆಗಸವ ನೊಡುತ್ತ ಅಷ್ಟೂ ಬೆಳದಿಂಗಳ
ಬೆಳಕನ್ನು ನನ್ನವಳ ಕಣ್ಣ ತುಂಬಬೇಕಿದೆ ..
ನಮಗಾಗೆ ಇರುವ ಮುಸ್ಸಂಜೆಯಿದು ಸುಮ್ಮನೆ ದೂರದಿಂದ
ನಾಲ್ಕೇ ನಾಲ್ಕು ಹನಿಯ ನಯವಾಗಿ ನನ್ನವಳ ತುಟಿಯ ಮೇಲೆ ಸುರಿಸಿಬಿಡು ..
ಬೆಳದಿಂಗಳ ಬೆಳಕಿಗೆ ನೀರ ಹನಿಗಳೆಲ್ಲ ಮುತ್ತಾಗಲಿ..
ಆ ಮುತ್ತುಗಳನೆಲ್ಲ ಬಚ್ಚಿಡಬೇಕಿದೆ ನನ್ನೊಳಗಿನ ಕನಸುಗಳಲ್ಲಿ ...
Monday, April 23, 2012
ಕನಸುಗಳೂ ಹಠ ಹಿಡಿದಿವೆ ..
ನೀನಿಲ್ಲದ ಕಣ್ಣುಗಳ ಜೊತೆ ನಿದ್ದೆ ಹೋಗಲು..
ನೀ ನಂಬಿಸಿ ಹೋದ ಮೇಲೆ ..
ಕಣ್ಣ ರೆಪ್ಪೆಗಳಿಗೂ ನಿನ್ನದೇ ಚಿಂತೆ ..
ಸುಮ್ಮಗೆ ಒಂದಕ್ಕೊಂದು ಪಿಸುಗುಡುತ್ತಾ
ಯೋಚಿಸುತ್ತಿರುತ್ತವೆ ..
ಅಷ್ಟೆಲ್ಲ ದಿನಗಳು ನಿನ್ನ ಜೊತೆಗಿದ್ದ
ಮನಸೀಗ ಒಂಟಿತನದ ನಿತ್ಯ ಸಂಗಾತಿ
ಸುಮ್ಮಗೆ ಮೂಲೆಯ ಹಿಡಿದು ನಿನ್ನ ಹೆಸರ ಗೀಚುತ್ತಿದೆ ..
ಬಣ್ಣದಲ್ಲಿ ಗೀಚಿದ ಹೆಸರಿಗ ಅಸ್ಪಷ್ಟ ...
ಮನಸಿಗೂ ತಿಳಿಯುತ್ತಿಲ್ಲ ....ಒಂಟಿತನ ಬಿಡುತ್ತಿಲ್ಲ ..
ಜೊತೆ ಜೊತೆಗೆ ಇರುವ ಒಂಟಿತನವೀಗ
ಕಣ್ಣ ರೆಪ್ಪೆಗಳಿಗೂ ಇಷ್ಟ ...
ಒಂದಷ್ಟು ಹೊತ್ತು ಪಿಸು ನುಡಿದು
ಕನಸಿನೊಳಗೆ ನೀನಿದ್ದಿಯೋ ಇಲ್ಲವೋ ಎಂದು ನೋಡಿ
ಸುಮ್ಮಗೆ ನಿದ್ದೆ ಹೋಗುತ್ತಿವೆ ..
ಕನಸುಗಳು ... ಈಗೀಗ ಮೌನಿಯಾಗಿವೆ ...
ಕೊನೆಯ ಉಸಿರಿನ ಮೌನ ...
Thursday, April 12, 2012
ದಾರಿಗಳ ಗುರುತಿಸಲು ..
ಆಗ ಸ್ಪಷ್ಟವಿರಲಿಲ್ಲ ದಾರಿ ಯಾವುದೆಂದು
ಕಂಡ ದಾರಿಯೆಲ್ಲ ಚೆನ್ನ ... ನಡೆಯುವ ಉತ್ಶಾಹ
ನಡೆದದ್ದಷ್ಟೇ ಗೊತ್ತು ..
ಹಲವಾರು ಏಳು ಬೀಳುಗಳು ... ಕೈ ಹಿಡಿದು ನಡೆಸುವ ಕೈಗಳಿತ್ತು..
ಭದ್ರವಾದ ಕೈಗಳು .. ಕುಶಿಯಿತ್ತು ಎಂದೂ ಬೀಳುವುದಿಲ್ಲ ಎಂದು ...
ವರ್ಷ ಕಳೆದಂತೆ ನಡಿಗೆ ಸ್ಪಷ್ಟ ವಿತ್ತು ..
ಉತ್ಸಾಹ ದಲ್ಲಿದ್ದ ನನಗೆ ಭದ್ರವಾಗಿ ಹಿಡಿದ ಕೈಗಳು ಬಿಟ್ಟು ಹೋದದ್ದು ಗಮನವಿರಲಿಲ್ಲ ..
ಕಣ್ಣ ಮುಂದೆ ಹಲವಾರು ದಾರಿಗಳು ..
ಹಲವಾರು ಮುಖಗಳು ... ಎಲ್ಲ ಒಳ್ಳೆಯವೇ ..ಪರಿಚಿತರೆ ..
ನಡೆಯುವ ಛಲ ... ತಪ್ಪಿಹೋಗಿತ್ತು ದಾರಿ ...
ಹಿಂದೆ ನೋಡಿದರೆ ಹಿಡಿದು ನಡೆಸುವ ಕೈಗಳಿಲ್ಲ ..
ಮುಂದೆ ಏನಿದೆ ಅಂದು ನೋಡುವ ಆತುರ..
ತಪ್ಪಿದ ದಾರಿಯಾದರೇನು ಸರಿ ದಾರಿ ಸಿಗಬಹುದಲ್ಲ ..
ಎನ್ನುತ್ತಲೇ ಸಾಗಿದ ದಾರಿ ...
ಕೊನೆಗೂ ಸಿಗಲಿಲ್ಲ ... ಕೈ ಹಿಡಿದು ನಡೆಸುವ ಕೈಗಳು
ವಯಸ್ಸು ಮೀರಿತ್ತು ಸರಿ ದಾರಿ ಹುಡುಕುವ ಆಸೆ ಯಿತ್ತು
ಕಾಲ ಮೀರಿದಂತೆ ದಾರಿ ಗೋಚರವಾಗಿತ್ತು ...
ಎಲ್ಲ ದಾರಿಗಳೂ ಅಲ್ಲಿ ಬಂದು ಸೇರಿತ್ತು ...
ಅಲ್ಲಿಂದ ಮುಂದೆ ಅದೊಂದೇ ದಾರಿ ...
{ ಚಿತ್ರಕೃಪೆ : - ದಿಗ್ವಾಸ್ ಹೆಗಡೆ}
Thursday, April 5, 2012
ನನ್ನ ಹುಡುಗಿ ಕೇಳಿದಳೊಮ್ಮೆ ನನ್ನ , ನನ್ನನ್ನೇಕೆ ಇಷ್ಟೊಂದು ಪ್ರೀತಿಸುವೆಯೆಂದು? ನಾ ಹೇಳಿದೆ ಹುಡುಗೀ ,ಪ್ರೀತಿಗೆ ಕಾರಣ ಬೇಕೇ ? ಆದರೂ ಹಠ ಹಿಡಿದಳವಳು ಪ್ರೀತಿಗೆ ಕಾರಣವೇನೆಂದು ? ಏನು ಹೇಳಲಿ ಹುಡುಗೀ ,ನನ್ನ ಪ್ರೀತಿಗೆ ಕಾರಣವ ನೀನೆಲ್ಲಿ ಸುಂದರವಾಗಿರುವೆಯೆಂದು ಹೇಳಿದರೆ , ರಂಬೆ ಊರ್ವಶಿ,ಮೆನಕೆಯರು ಕೋಪಗೊಂಡು ಆಮೇಲೆ ಶಾಪ ಕೊಟ್ಟಾರು. ನಿನಗೀಗಿರುವ ಸೌಂದರ್ಯವೇ ಸಾಕಲ್ಲವೇ? ನೀನೆ ಆಕರ್ಷಣೆಯ ಕೇಂದ್ರಬಿಂದು ,ನಿನ್ನ ಬಿಟ್ಟರೆ ಬೇರಿಲ್ಲ ಎಂದೆಲ್ಲ ಹೇಳಲು ವಯಸ್ಸು ನನ್ನ ಬಿಡಬೇಕಲ್ಲ , ನಿನಗಿಂತ ಸುಂದರ ಹುಡುಗಿ ಎದುರಿಗೆ ಬಂದರೆ ಕಣ್ಣು ಮುಚ್ಚಿಕೊಳ್ಳಲೇ ? ಕೇಳಿಲ್ಲಿ ಹುಡುಗಿ ಪ್ರೀತಿ ಹುಟ್ಟುವುದು ,ಸೌಂದರ್ಯದಿಂದಲ್ಲ, ಹೃದಯದಾಳದ ಮನಸಿನಿಂದ , ಅದಕ್ಕೆ ಕಾರಣ ಬೇಕಿಲ್ಲಾ, ಅದು ವಿನಾಕಾರಣ |
Thursday, March 22, 2012
ಅದೊಂದು ದಿನ ನನ್ನ ಹಳೆ ಪುಸ್ತಕಗಳನ್ನು
ಜಾಲಾಡಿದಾಗ ನನಗೆ ನೀ ಕೊಟ್ಟ ನವಿಲುಗರಿ
ಸಿಕ್ಕಿತ್ತು ..
ಅಲ್ಲೆಲ್ಲೋ ಪಾಪದ ನವಿಲು ಗರಿಬಿಚ್ಚಿ ಕುಣಿವಾಗ
ಬಿದ್ದ ಗರಿಯದು ..ನಿನಗದು ನಮ್ಮಿಬ್ಬರ ಪ್ರೀತಿಯ
ಸಂಕೇತವಾಗಿತ್ತದು ..
ಆ ಬೆಳದಿಂಗಳ ನಡುವೆ ಮರದ ಕೆಳಗೆ
ಬುಜದ ಮೇಲೆ ತಲೆಯಾನಿಸಿ ಪಿಸುನುಡಿದಿದ್ದೆ
ನನ್ನಾಣೆ .. ಈ ನವಿಲುಗರಿಯಲ್ಲಿದೆ ನನ್ನ ಹೃದಯ
ಕಳೆಯಬೇಡ.. ಹೇಗೆ ಬಚ್ಚಿಡುತ್ತೀಯ ಕೇಳಿದ್ದಳವಳು..
ಸುಮ್ಮಗೆ ಮುಂಗುರುಳ ಸರಿಸಿ , ನಕ್ಕು ಹೇಳಿದ್ದೆ .....
ಎಂದೂ ನಾ ನೋಡದ ಪುಸ್ತಕದಲ್ಲಿಡುತ್ತೇನೆ..
ಕಣ್ಣಂಚಿನ ಕಂಬನಿಯೊಂದು ಜಾರಿ ನನ್ನ ಎದೆಯ ಮೇಲೆ
ಬಿದ್ದಿತ್ತು ...ನಾ ರಾಧೆ ,, ನೀ ಕೃಷ್ಣ .. ಹೀಗೆ ಇರಲಿ ನಮ್ಮಿಬ್ಬರ
ಪ್ರೀತಿ ಎಂದು ಬಿಗಿದಪ್ಪಿದ್ದಳು ...
ಅಲ್ಲೆಲ್ಲೋ ಮಿಂಚಿನ ಬೆಳಕು ಭುವಿಯ ಸೇರಿತ್ತು ..
ಅಲ್ಲೇ ಕೀಟಲೆ ಮಾಡಿದ್ದೆ ... ನೀ ರಾಧೆಯಾದರೆ .....
ರುಕ್ಮಿಣಿ ಯಾರು ಅಂದು ...
ನೀ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೆ ... ರುಕ್ಮಿಣಿಯ ಮಾತು ಮರೆತು ಹೋಗಿತ್ತು ..
ಹಾಗೆ ಹೇಳಿದವಳೇ ಮೌನವಾಗಿದ್ದೆ ..
ನವಿಲುಗರಿಯೂ ಕನಸ ಕಂಡಿತ್ತು ..
ಎಂದೂ ನೋಡದ ಪುಸ್ತಕದಲ್ಲಿ ಶಾಶ್ವತವಾಗಿ ಇರುತ್ತೇನೆ ಎಂದು ..
ಪಾಪದ ನವಿಲುಗರಿ ... ಇನ್ನೂ ಹಾಗೆ ಇದೆ ..
ಇಂದೇಕೋ ನವಿಲು ಗರಿ ಮತ್ತೆ ನೆನಪಾಗುತ್ತಿದೆ ..
ಬಚ್ಚಿಟ್ಟುಕೊ ಎಂದ ರಾಧೆಯೂ ಮೌನ ತಳೆದಿದ್ದಾಳೆ ...
Saturday, March 17, 2012
ಒಂದಷ್ಟು ಕನಸುಗಳ ಚಿತ್ತಾರ ಬಿಡಿಸಿ
ಅದಕ್ಕೊಂದಿಷ್ಟು ಬಣ್ಣಗಳ ಹರವಿಬಿಡು..
ಮನದ ಗೂಡ ತುಂಬಾ ಅಲಂಕರಿಸಿಬಿಡುತ್ತೇನೆ..
ಸಿಂಗಾರಗೊಳ್ಳಲಿ ನನ್ನ ಮನಸೂ ಕೊಂಚ
ನೀ ಕಾಲಿಡುವ ಮುನ್ನ ..
ಹೇಳಿದ್ದೇನೆ ಬಾನ ಚಂದಿರಗೆ ... ಸ್ವಲ್ಪ ಬೆಳಕ
ಕೂಡಿಟ್ಟುಕೋ ..ಎಲ್ಲವ ಕಾಲಿ ಮಾಡಬೇಡ ...
ನನ್ನವಳು ಬಂದಾಗ ಬೆಳಗುವಿಯಂತೆ ..
ಬಾನ ಚುಕ್ಕಿ ಗಳೂ ಸಿದ್ದವಾಗಿಯೇ ಇವೆ ..
ನೀ ಬಂದಾಗ ಮನದ ಬಾಗಿಲ ಮುಂದೆ ರಂಗೋಲಿ ಬಿಡಿಸಲು ..
ಅಲ್ಲೆಲ್ಲೋ ನೋಡಬೇಡ ...ದಾರಿ ತೋರಿಸಲು
ತಂಗಾಳಿ ಸಿದ್ದವಾಗಿಯೇ ಇದೆ ..
ನೀ ಬಂದೊಡನೆ ನನ್ನ ಮನದ ಕಡೆಗೆ
ಅದು ನಿನ್ನ ಜೊತೆಗಿರುತ್ತದೆ ...
ಸಿಂಗರಿಸಿಕೊಂಡಿವೆ ನೀ ಬರುವ ದಾರಿ ತುಂಬಾ ..
ಎಲ್ಲ ಹೂಗಳು ...ತಾವೇನು ಕಡಿಮೆ ಎಂದು ..
ದುಂಬಿಗಳಿಗೂ ರಜಾ ... ಎಲ್ಲ ಕೂಡಿ ಹಾಡಲು ಸಿದ್ದವಾಗಿವೆ ..
ಮಿಂಚು ಹುಳಗಳೂ ಮಿನುಗುತ್ತಿವೆ ನೀ ಬರುವ ಸುದ್ದಿ ಕೇಳಿ ..
ಮತ್ತೇಕೆ ತಡ ... ನಾ ಕಳಿಸಿದ ಬಾಳ ದೋಣಿ ಬಂದಿದೆ
ಹತ್ತಿ ಬಂದುಬಿಡು ... ನನ್ನ ಮನದ ಕಡೆಗೆ ...
ದಾರಿಯಂತೂ ತಪ್ಪುವುದಿಲ್ಲ ...ತಂಗಾಳಿ ನಿನ್ನ ಜೊತೆಗಿದೆ ...
Friday, March 9, 2012
ನನ್ನವಳ ಮೈ ಗಂಧ ..ಎಷ್ಟು ಸುಗಂಧ ...
ನನ್ನವಳ ಮೈ ಗಂಧ ..ಎಷ್ಟು ಸುಗಂಧ ...
ಒಂದು ಸಲ ಪಾರಿಜಾತ .. ಮತ್ತೊಮ್ಮೆ ಶ್ರೀಘಂಧ
ಮಗದೊಮ್ಮೆ ಗುಲಾಬಿ .. ಕೆಂಡಸಂಪಿಗೆ ...ಮಲ್ಲಿಗೆ
ದಿನದಿನವೂ ತರಾ ತರಹದ ಸುವಾಸನೆ ..
ನೋಡಬೇಕವಳ ಬಿಂಕ ಬಿನ್ನಾಣವ ..
ಒಮ್ಮೆ ಹಾದು ಹೋದರೆ ಸಾಕು ಸುತ್ತಮುತ್ತೆಲ್ಲ
ಪಸರಿಸುವುದು ಅವಳ ಸುಘಂದ ...
ಕೇಳಿದೆ ಅವಳ ಕಣ್ಣಲ್ಲಿ ಕಣ್ಣಿಟ್ಟು ..
ಕೇಳಿದೆ ಅವಳ ಕಣ್ಣಲ್ಲಿ ಕಣ್ಣಿಟ್ಟು ..
ಪ್ರಿಯೆ ಇನ್ನಾದರೂ ಹೇಳಬಾರದ
ಯಾವ ಅಗರ ಬತ್ತಿ ಫ್ಯಾಕ್ಟರಿ ಎಂದು ...
Subscribe to:
Posts (Atom)


.jpg)
.jpg)
.jpg)
.jpg)

.jpg)

.jpg)






.jpg)
