Thursday, March 22, 2012


ಅದೊಂದು ದಿನ ನನ್ನ ಹಳೆ ಪುಸ್ತಕಗಳನ್ನು 
ಜಾಲಾಡಿದಾಗ ನನಗೆ ನೀ ಕೊಟ್ಟ ನವಿಲುಗರಿ 
ಸಿಕ್ಕಿತ್ತು .. 
ಅಲ್ಲೆಲ್ಲೋ ಪಾಪದ ನವಿಲು ಗರಿಬಿಚ್ಚಿ ಕುಣಿವಾಗ 
ಬಿದ್ದ  ಗರಿಯದು ..ನಿನಗದು ನಮ್ಮಿಬ್ಬರ ಪ್ರೀತಿಯ 
ಸಂಕೇತವಾಗಿತ್ತದು ..
ಆ ಬೆಳದಿಂಗಳ ನಡುವೆ ಮರದ ಕೆಳಗೆ 
ಬುಜದ ಮೇಲೆ ತಲೆಯಾನಿಸಿ ಪಿಸುನುಡಿದಿದ್ದೆ
ನನ್ನಾಣೆ .. ಈ ನವಿಲುಗರಿಯಲ್ಲಿದೆ ನನ್ನ ಹೃದಯ 
ಕಳೆಯಬೇಡ.. ಹೇಗೆ ಬಚ್ಚಿಡುತ್ತೀಯ ಕೇಳಿದ್ದಳವಳು..
ಸುಮ್ಮಗೆ  ಮುಂಗುರುಳ ಸರಿಸಿ , ನಕ್ಕು ಹೇಳಿದ್ದೆ .....
ಎಂದೂ ನಾ ನೋಡದ ಪುಸ್ತಕದಲ್ಲಿಡುತ್ತೇನೆ.. 
ಕಣ್ಣಂಚಿನ ಕಂಬನಿಯೊಂದು ಜಾರಿ ನನ್ನ ಎದೆಯ ಮೇಲೆ 
ಬಿದ್ದಿತ್ತು ...ನಾ ರಾಧೆ ,, ನೀ ಕೃಷ್ಣ .. ಹೀಗೆ ಇರಲಿ ನಮ್ಮಿಬ್ಬರ 
ಪ್ರೀತಿ ಎಂದು ಬಿಗಿದಪ್ಪಿದ್ದಳು ... 
ಅಲ್ಲೆಲ್ಲೋ ಮಿಂಚಿನ ಬೆಳಕು ಭುವಿಯ ಸೇರಿತ್ತು ..
ಅಲ್ಲೇ ಕೀಟಲೆ ಮಾಡಿದ್ದೆ ... ನೀ ರಾಧೆಯಾದರೆ .....
ರುಕ್ಮಿಣಿ ಯಾರು ಅಂದು ... 
ನೀ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೆ ... ರುಕ್ಮಿಣಿಯ ಮಾತು ಮರೆತು ಹೋಗಿತ್ತು ..
ಹಾಗೆ ಹೇಳಿದವಳೇ ಮೌನವಾಗಿದ್ದೆ ..
ನವಿಲುಗರಿಯೂ ಕನಸ ಕಂಡಿತ್ತು ..
ಎಂದೂ ನೋಡದ ಪುಸ್ತಕದಲ್ಲಿ ಶಾಶ್ವತವಾಗಿ ಇರುತ್ತೇನೆ ಎಂದು ..
ಪಾಪದ ನವಿಲುಗರಿ ... ಇನ್ನೂ ಹಾಗೆ ಇದೆ ..
ಇಂದೇಕೋ ನವಿಲು ಗರಿ ಮತ್ತೆ ನೆನಪಾಗುತ್ತಿದೆ ..
ಬಚ್ಚಿಟ್ಟುಕೊ ಎಂದ  ರಾಧೆಯೂ ಮೌನ ತಳೆದಿದ್ದಾಳೆ ... 







Saturday, March 17, 2012


 ಒಂದಷ್ಟು ಕನಸುಗಳ ಚಿತ್ತಾರ ಬಿಡಿಸಿ 
ಅದಕ್ಕೊಂದಿಷ್ಟು ಬಣ್ಣಗಳ ಹರವಿಬಿಡು..
ಮನದ ಗೂಡ ತುಂಬಾ ಅಲಂಕರಿಸಿಬಿಡುತ್ತೇನೆ..
ಸಿಂಗಾರಗೊಳ್ಳಲಿ ನನ್ನ ಮನಸೂ ಕೊಂಚ 
ನೀ ಕಾಲಿಡುವ ಮುನ್ನ ..
ಹೇಳಿದ್ದೇನೆ ಬಾನ ಚಂದಿರಗೆ ... ಸ್ವಲ್ಪ ಬೆಳಕ 
ಕೂಡಿಟ್ಟುಕೋ ..ಎಲ್ಲವ ಕಾಲಿ ಮಾಡಬೇಡ ...
ನನ್ನವಳು ಬಂದಾಗ ಬೆಳಗುವಿಯಂತೆ ..
ಬಾನ ಚುಕ್ಕಿ ಗಳೂ ಸಿದ್ದವಾಗಿಯೇ ಇವೆ ..
ನೀ ಬಂದಾಗ ಮನದ ಬಾಗಿಲ ಮುಂದೆ ರಂಗೋಲಿ ಬಿಡಿಸಲು ..
ಅಲ್ಲೆಲ್ಲೋ ನೋಡಬೇಡ ...ದಾರಿ ತೋರಿಸಲು 
ತಂಗಾಳಿ ಸಿದ್ದವಾಗಿಯೇ ಇದೆ ..
ನೀ ಬಂದೊಡನೆ ನನ್ನ ಮನದ ಕಡೆಗೆ 
ಅದು ನಿನ್ನ ಜೊತೆಗಿರುತ್ತದೆ ...
 ಸಿಂಗರಿಸಿಕೊಂಡಿವೆ ನೀ ಬರುವ ದಾರಿ ತುಂಬಾ ..
ಎಲ್ಲ ಹೂಗಳು ...ತಾವೇನು ಕಡಿಮೆ ಎಂದು ..
ದುಂಬಿಗಳಿಗೂ ರಜಾ ... ಎಲ್ಲ ಕೂಡಿ ಹಾಡಲು ಸಿದ್ದವಾಗಿವೆ ..
ಮಿಂಚು ಹುಳಗಳೂ ಮಿನುಗುತ್ತಿವೆ ನೀ ಬರುವ ಸುದ್ದಿ ಕೇಳಿ ..
ಮತ್ತೇಕೆ ತಡ ... ನಾ ಕಳಿಸಿದ ಬಾಳ ದೋಣಿ  ಬಂದಿದೆ 
ಹತ್ತಿ ಬಂದುಬಿಡು ... ನನ್ನ ಮನದ ಕಡೆಗೆ ...
ದಾರಿಯಂತೂ ತಪ್ಪುವುದಿಲ್ಲ ...ತಂಗಾಳಿ ನಿನ್ನ ಜೊತೆಗಿದೆ ... 

Friday, March 9, 2012



ನನ್ನವಳ ಮೈ ಗಂಧ ..ಎಷ್ಟು ಸುಗಂಧ ...
ನನ್ನವಳ ಮೈ ಗಂಧ ..ಎಷ್ಟು ಸುಗಂಧ ...
ಒಂದು ಸಲ ಪಾರಿಜಾತ .. ಮತ್ತೊಮ್ಮೆ ಶ್ರೀಘಂಧ 
ಮಗದೊಮ್ಮೆ ಗುಲಾಬಿ .. ಕೆಂಡಸಂಪಿಗೆ ...ಮಲ್ಲಿಗೆ 
ದಿನದಿನವೂ ತರಾ ತರಹದ ಸುವಾಸನೆ .. 
ನೋಡಬೇಕವಳ ಬಿಂಕ ಬಿನ್ನಾಣವ ..
ಒಮ್ಮೆ ಹಾದು ಹೋದರೆ ಸಾಕು ಸುತ್ತಮುತ್ತೆಲ್ಲ 
ಪಸರಿಸುವುದು ಅವಳ ಸುಘಂದ ...  
ಕೇಳಿದೆ ಅವಳ ಕಣ್ಣಲ್ಲಿ ಕಣ್ಣಿಟ್ಟು ..
ಕೇಳಿದೆ ಅವಳ ಕಣ್ಣಲ್ಲಿ ಕಣ್ಣಿಟ್ಟು .. 
ಪ್ರಿಯೆ ಇನ್ನಾದರೂ ಹೇಳಬಾರದ 
ಯಾವ ಅಗರ ಬತ್ತಿ ಫ್ಯಾಕ್ಟರಿ ಎಂದು ...

Thursday, March 8, 2012



ಸುಮ್ಮನೆ ಹಾಗೆ ಮೌನಿಯಾಗಿ ನೋಡುತ್ತಿರಬೇಡ 
ಮುಸ್ಸಂಜೆ ಕವಿದು ,ಕತ್ತಲು ಹರಿದು  ..
ಆಗಸದಲಿ ನಕ್ಷತ್ರಗಳ ಚಿತ್ತಾರ ಮೂಡುವ ಹಾಗೆ 
ನಿನ್ನ ಮನದ ಬಾವನೆಗಳ ತೆರೆದಿಡು 
ನನ್ನ ಮನದನ್ನೆ ...
ಸುಮ್ಮನಿರಬೇಡ ... ಕಾಲವೇನೂ ನಿಲ್ಲುವುದಿಲ್ಲ 
ಕಣ್ಣಲ್ಲಿ ಕಣ್ಣಿಟ್ಟು ನೋಡಿದರೇನು ಬಂತು ..
ಮನಸುಗಳು ಹತ್ತಿರ ಸರಿದರೆಷ್ಟು ಬಂತು ..
ಬಾವನೆಗಳೇ ಮೂಕವಾದರೆ ...ಸಮಯವೇನೂ ನಿಲ್ಲುವುದಿಲ್ಲ .
ಸುಮ್ಮನೆ ನೀ ನನ್ನ ನೋಡುತ್ತಿರಬೇಡ ..
ಎಷ್ಟು ಕಾಡಿದರೇನು ಮನುಸುಗಳೆರಡು ಕೂಡುವ 
ಕಾಲ ಬಂದಾಗ ಒಂದಾಗಲೇ ಬೇಕು ...
ಸುಮ್ಮನೆ ಅತ್ತಿತ್ತ ನೋಡಬೇಡ ..
ಆಗಸದ ಚಂದಿರನ ಆಣೆ ..
ಸುಮ್ಮನೆ ಅವನನ್ನೂ ಕಾಯಿಸಬೇಡ ..
ಮತ್ತೂ ಕಾಯಿಸಬೇಡ ನೀ ಮೌನವಾಗಿ ..
ಕಾಲ  ಸರಿಯುತ್ತಿದೆ .. ಋತುಗಳೂ ಬದಲಾಗುತ್ತವೆ ..
ವಸಂತ ಕಳೆದು ಮಾಮರ ಚಿಗುರೊಡೆಯುತ್ತಿದೆ ..
ಕಾಯುತ್ತಿವೆ ಇನ್ನೂ ನಕ್ಷತ್ರಗಳು ದಿನವೂ 
ಚಿತ್ತಾರ ಮೂಡಿಸಿ ... ಚಂದಿರ ಬೆಳಕ ಸೂಸಿ ...
ನೀ ... ಮೌನ ಮುರಿಯುವುದನ್ನೇ ... 

Monday, February 27, 2012

ಹೊಟ್ಟೆ ಪುರಾಣ



ಇತ್ತಿತ್ತಲಾಗಿ ನನಗೂ ಚಿಕ್ಕದಾಗಿ ಹೊಟ್ಟೆ ಬರುತ್ತಿದೆ 
ಸುಖಾ ಸುಮ್ಮನೆ ಸ್ಲಿಮ್ ಆಗಿ ಇದ್ದ ನಾನು 
ಸ್ವಲ್ಪ ದಪ್ಪನಾಗುತ್ತಿದ್ದೇನೆ ... ಎಲ್ಲ ಕಡೆಯೂ ಅಲ್ಲ 
ಹೊಟ್ಟೆ ಮಾತ್ರ ... 
ಓಡಾಟವಿಲ್ಲ , ಬಸ್ ಹಿಡಿದು ಒಡಬೇಕಾಗಿಲ್ಲ..
ಸುಮ್ಮನೆ ಕುಳಿತಲ್ಲಿಯೇ ಕೆಲಸ ..   ಹೊಟ್ಟೆ ಮಾತ್ರ ತನ್ನ ಇರುವನ್ನ 
ತೋರಿಸುತ್ತಿದೆ .. 
ಅದೊಂದು  ಕಾಲವಿತ್ತು ಎಲ್ಲ ಗಾಳಿಯನ್ನೂ ಹೊಟ್ಟೆಯೊಳಗೆ 
ತುಂಬಿ ನನಗೂ ಹೊಟ್ಟೆ ಇದೆ ಎಂದು ತೋರಿಸಬೇಕಾಗಿತ್ತು 
ಈಗ ಉಸಿರ ಒಳಗೆ ಎಳೆದು ಕೊಂಡರೂ ಹೊಟ್ಟೆ ಮಾತ್ರ ಹೊರಗೆ ಇಣುಕುತ್ತದೆ 
ಪಾಪದ  ಪ್ಯಾಂಟು ಗಳೋ ಹೊಟ್ಟೆಯ ಮುಚ್ಚಿಡಲು ಹರಸಾಹಸ ಮಾಡುತ್ತವೆ  
ಮೊದಮೊದಲು ಹೊಟ್ಟೆ ಇರುವವರನ್ನು ಕಂಡರೆ 
ಒಂಥರ ...ಥೋ  ಹೇಗಪ್ಪ ಇವರ ಹೊಟ್ಟೆಗೆ ಜಾಗ ಬಿಡುವುದು ??
ಅವರೋ ತಮ್ಮ ಹೊಟ್ಟೆಯ ಜೊತೆ ನನ್ನನ್ನೂ ತಳ್ಳಿಕೊಂಡು  ಹೋಗುತ್ತಿದ್ದರು 
ಈಗ ಚಿಂತೆ ಶುರುವಾಗಿದೆ ನನ್ನ ಹೊಟ್ಟೆಯೂ  ಇವರ ಸಾಲಿಗೆ  ಸೇರುವದ ??
ಬೆಳಗ್ಗೆದ್ದು ಓಡಲು ಹೊಟ್ಟೆಗೂ ಬೇಸರ ...ಚಳಿಗೆ ಸುಮ್ಮನೆ 
ಮಗ್ಗಲ ಬದಲಿಸುತ್ತದೆ ...
ಜಿಮ್ಮು ಸ್ವಿಮ್ಮು ಅಂತ ಹೋದರೆ ಹೊಟ್ಟೆಯ ಜೊತೆ 
 ಉಳಿದವಕ್ಕೆಲ್ಲ ಉಪವಾಸ ... 
ಹೊಟ್ಟೆಗೂ ನಾಲಿಗೆಗೂ ಅದಾವ ಜನುಮದ ದ್ವೇಷವೋ ..
ಮನಸ್ಸು ಯಾವಾಗಲು ನಾಲಿಗೆಯ ಪರ ..
ಆಗಾಗ ಕೇಳುತ್ತಿರುತ್ತದೆ ಏನು ನಿನಗೊಬ್ಬನಿಗಾ ಹೊಟ್ಟೆ ಇರುವುದು ?
ಏನೋ ಇನ್ನು ಚಿಕ್ಕದು .ಸ್ವಲ್ಪ ಓಡಾಡಿದರೆ .ಕಡಿಮೆಯಾಗುತ್ತದೆ ಬಿಡು ಅನ್ನುತ್ತದೆ..
ಆದರೂ ಉಳಿದ ಹೊಟ್ಟೆಗಳು ಕೆಂಗಣ್ಣು ಬೀರುತ್ತಿವೆ ..
ನಮಗೆ ಜಾಗವಿಲ್ಲ ನೀ ಮತ್ತೆ ಬರಬೇಡ ಎಂದು ...




Thursday, February 23, 2012



ಅದಾವ ಆಕರ್ಷಣೆಯೋ ನಾ ಕಾಣೆ ..
ನೀ ಮಾತನಾಡುವಾಗ ನಿನ್ನ ಕಣ್ಣನ್ನೇ ನೋಡುತ್ತಾ 
ಕುಳಿತಿರುವ ಮೌನಿ ನಾನು ..
ಯಾವ ಬಂಧವೋ ನಿನ್ನಲ್ಲಿ , ನೋಡುತ್ತಲೇ  ಕನಸುಗಳೆಲ್ಲ
ಬಿಕರಿಯಾಗಿವೆ ... 


ನೂರು ಸಾರಿ ನಿನ್ನ ನೋಡಿ , ತಿರು ತಿರುಗಿ ನೋಡುವಾಸೆ 
ಮತ್ತೆ  ಕಾಡಿದೆ  ... 
ಪ್ರೀತಿ  ಹೃದಯದೊಳಗೆ ಬಚ್ಚಿಟ್ಟ  ನಿಧಿ ..
ಒಮ್ಮೆ ನನ್ನ ಹೃದಯದ ಬಾಗಿಲ ಕಡೆ ಇಣುಕಿ ನೋಡು 
 ನಿನಗಷ್ಟೆ ಇರುವ ಪ್ರೀತಿ .. ನನಗಲ್ಲಿ ಖಾಸಗಿ ಸಂಬ್ರಮ ..


ಸುಮ್ಮನೆ ಕೈ ಹಿಡಿದು ಬಿಡು ....ನಾವಲ್ಲಿ ನಡೆವ ಹಾದಿ 
ಎಂದೂ ಕೊನೆಯಾಗದು ..
ಕಣ್ಣನು ಮುಚ್ಚಿ ನೋಡಿದರೂ ಅಲ್ಲಿ  ಕಾಣುವ ಲೋಕ ಉನ್ಮಾದಕ 


ನನ್ನ ಹೃದಯದ ಹಾದಿ ಹಿಡಿಯಲೇ ಬೇಕು ನೀ ಸುಮ್ಮನೆ 
ಸೆಳೆದುಬಿಡು ನಿನ್ನ ಒಲುಮೆಯೂರಿಗೆ ....
ಅಲ್ಲಿ ನನ್ನ ನಾನು ಮರೆವಂತೆ ಮಾಡು..












Thursday, February 9, 2012



ಇನ್ನಷ್ಟು ದಿನ ಹೇಳುವುದಿಲ್ಲ ಹುಡುಗೀ , 
ನಿನ್ನೊಲವಿನ ಬಿಸಿ ತಟ್ಟಿದ್ದರೂ,ನಾ ಮಾತ್ರ ಹೀಗೇ,
 ಏನೂ ಗೊತ್ತಿಲ್ಲದ ಹಾಗೆ ಒಳಗೊಳಗೇ ಮನಸಿನಂಗಳದಲ್ಲಿ,
 ಎದೆಬಿಚ್ಚಿ ಮಾತನಾಡುತ್ತಿರುತ್ತೇನೆ, 
ಹೇಳಲೋ ಬೇಡವೋ ಎಂಬ ವಕಾಲತ್ತುಗಳ, 
ನಡುವೆ ಕಾದಾಡುತ್ತಿರುತ್ತೇನೆ., 
ಇನ್ನಷ್ಟು ದಿನ ಹೇಳುವುದಿಲ್ಲ ಹುಡುಗೀ , 
ಅದೆಸ್ಟು ಆಮಿಷಗಳ ಮೆಟ್ಟಿ ನನ್ನೊಟ್ಟಿಗಿರುತ್ತದೋ,
 ನಿನ್ನ ಮನ ? ಕಾದು ನೋಡುತ್ತೇನೆ ,
 ಕಾಯಬೇಕು ಹುಡುಗೀ ,,
 ಕಾದಷ್ಟೂ ನಮ್ಮೊಳಗಿನ ಹುಸಿ ಬಯಲಾಗಬೇಕು , 
ಭ್ರಮೆ ಬೆತ್ತಲಾಗಬೇಕು ,ಪೊರೆ ಹರಿಯಬೇಕು ..., 
ಇಲ್ಲ ಹುಡುಗೀ ,,,ಇನ್ನಷ್ಟು ದಿನ ಹೇಳುವುದಿಲ್ಲ,
 ನಾ ನಿನ್ನ ಪ್ರೀತಿಸುವುದ,
 ನಿನ್ನೊಲವಿನ ಬಳ್ಳಿ ಚಿಗುರಲಿ ನನ್ನೊಳಗೂ ಟಿಸಿಲೋಡೆಯುತ್ತದೆ, 
ಹಾದಿಗುಂಟ ಮುಳ್ಳು ಕಂಟಿಗಳ ದಾಟಿ ,
 ಮುಂದೊಂದು ದಿನ ನನ್ನ ಬೆಸೆಯುತ್ತದೆ ., 
ಅಲ್ಲಿಯವರಗೂ ನಾ ಮಾತ್ರ ಹೀಗೇ, ಏನೂ ಗೊತ್ತಿಲ್ಲದ ಹಾಗೆ ...,
 ನಿನ್ನ ಮನಸಿನಂಗಳದಲ್ಲಿ ಎದೆ ಬಿಚ್ಚಿ, ಮಾತನಾಡುತ್ತಿರುತ್ತೇನೆ