Friday, March 29, 2013


ನಿಶ್ಚಯವಾಗಿದೆ ... ನನ್ನೊಳಗಿನ ಕನಸಿನ ಲೋಕಕ್ಕೆ ಕಾಲಿಡಲು
ಸುಮ್ಮನೆ ಒಳಗೆ ಬಂದು ಬಿಡು
ನನ್ನೆದೆಯ ಚಿತ್ತಾರಗಳನೆಲ್ಲ ಹರವಿದ್ದೇನೆ 
ಬರೆದುಬಿಡು ನಿನಗಿಷ್ಟವಾದ ಚಿತ್ರವನ್ನ .. 
ಒಂದಾಗಿಬಿಡಲಿ ನಮ್ಮಿಬ್ಬರ ಕನಸುಗಳು .. 
ಹೂಗಳ ಇಟ್ಟಿದ್ದೇನೆ .. ಅಲಂಕರಿಸಿಬಿಡು .. 
ನಿನಗಿಷ್ಟವಾದ ಬಣ್ಣಗಳ ಜೊತೆ .. 
ಏಳು ಬಣ್ಣಗಳೂ ಒಂದುಗೂಡಲಿ 
ನಮ್ಮಿಬ್ಬರ ಕನಸುಗಳಿಗೆ ... 
ನಿನಗಾಗೆ ಕಾದಿರುವ ಕನಸಿನ ಲೋಕವಿದು 
ಪ್ರವೇಶವಾಗಿಬಿಡಲಿ ನಿನ್ನ ಬಲಗಾಲಿಟ್ಟು .. 
ನನ್ನ ಕನಸಿನ ಲೋಕದೊಳಗೆ .. 
 ಪುಳಕಗೊಂಡುಬಿಡಲಿ  .. ನಿನ್ನ ಕಾಲ್ಗೆಜ್ಜೆ ಸದ್ದಿಗೆ
ನನ್ನೆಲ್ಲ ಕನಸುಗಳು ... 
ನಿನಗಾಗೆ ಕಾದಿರುವ ಕನಸುಗಳಿವು ..

Tuesday, March 5, 2013



ಬೆಚ್ಚಗೆ ತಬ್ಬಿ ತಲೆಯಿಟ್ಟು ಮಲಗಿದವಳು ಒಮ್ಮೆಲೇ ಕಣ್ಣ ನೋಡುತ್ತಾ ಕೇಳಿದ್ದೆ .. 
ಮುತ್ತು ಕೊಡು ... 
ಒಂದು ಕ್ಷಣ .... ಹಾಗೆ ಬಿಗಿದಪ್ಪಿ  ತುಟಿಗೆ ತುಟಿಯೊತ್ತಿದ್ದೆ .. 
ಅಲ್ಲೆಲ್ಲೋ ಕುಳಿತ ದುಂಬಿಗೂ ಎಚ್ಚರವಾಗಿತ್ತು .. 
ಏನಕ್ಕೋ ನೆನಪಾಗಿತ್ತು ನೀ ಕೊಟ್ಟ ನವಿಲುಗರಿ ..
 ಇನ್ನೂ ನನ್ನಲ್ಲೇ ಇತ್ತು .. 
ಆಗಲೂ ಹೀಗೆ ...ಬಿಗಿದಪ್ಪಿ ತುಟಿ ಕಚ್ಚಿದ್ದೆ 
ಈ ನವಿಲುಗರಿ ನಿನ್ನಲ್ಲೇ  ಇರಲಿ ..ನನ್ನ ಉಸಿರಿರುವವರೆಗೂ .. 
ಎಂದು ಕಣ್ಣಲ್ಲಿ ನೀರು ತುಂಬಿಸಿಕೊಂಡಿದ್ದೆ .. 
ಅವೆಲ್ಲ ಕನಸಾಗಲಿ ... ಮೆಲ್ಲಗೆ ಪಿಸುನುಡಿದಿದ್ದೆ 
ಇಂದೇಕೋ ಮತ್ತೆ ರಾಧೆ ನೆನಪಾಗುತ್ತಿದ್ದಾಳೆ ..
 ನಮ್ಮಿಬ್ಬರಲ್ಲೂ ಅದೇ ಭಾವವಿದೆಯಾ ... 
ಕೃಷ್ಣ ......   ರಾಧೆ .... 
ಅವರೂ ನಮ್ಮಿಬ್ಬರ ಹಾಗೆ ಅಲ್ಲೆಲ್ಲೋ ಕುಳಿತು ಕನಸು ಕಾಣುತ್ತಿದ್ದರಾ ??
ಸುಮ್ಮನೆ ಮುಂಗುರುಳ ಜೊತೆ ಆಟವಾಡುತ್ತಿದ್ದೆ .. 
ಏನಕ್ಕೋ ಕೆನ್ನೆ ಮೇಲಿನ ಮಚ್ಚೆ ಮುದ್ದಾಗಿ ಕಂಡಿತ್ತು .. 
ಮೆಲ್ಲಗೆ ಕಚ್ಚಿ ಪಿಸುನುಡಿದಿದ್ದೆ .. 
ಕೃಷ್ಣ ರಾಧೆಯರ ನೆನಪೇಕೆ ...??
ಸುಮ್ಮಗೆ ತಲೆಯಿಟ್ಟು ನನ್ನದೆ ಬಡಿತವ  ಕೇಳು.... 
ಅದೂ ಪಿಸುಗುಡುತ್ತಿದೆ ...  ನಾವಿಬ್ಬರೇ ಅವರೆಂದು ... 

Saturday, February 23, 2013

ಸಮಾಧಿ ಕಟ್ಟಿದ್ದೇನೆ ನನ್ನೊಳಗಿನ ಕನಸುಗಳಿಗೆಲ್ಲ 
ಮತ್ತೆಂದೂ ಜೀವ ಬಾರದಂತೆ 
ಸಮಾಧಿಯೋಳಗಿನ ಕನಸುಗಳೆಲ್ಲ ಅಸ್ತವ್ಯಸ್ತ ..
ಕೊಂದವರ್ಯಾರೋ ಗೊತ್ತಿಲ್ಲ ..
ಚೂರು ಜೀವ ಇರುವ ಕನಸುಗಳಿಗೂ ಉಸಿರು ಕಟ್ಟುವ ಶಿಕ್ಷೆ 
ಮತ್ತೆಂದೂ ಉಸಿರಾಡಬಾರದು ..
ಸುತ್ತ ಗಾಳಿಯೂ ನುಸುಳದಂತೆ 
ಅಮೃತಶಿಲೆಯ ಸಮಾಧಿ ಕಟ್ಟಿ ಬಿಟ್ಟಿದ್ದೇನೆ ..
ಆದರೂ ನನ್ನೊಳಗಿನ ಕನಸುಗಳೆಲ್ಲ ಸುಂದರವಲ್ಲವೆ ??..
ಸಮಾದಿಯ ಮೇಲೆ ಮೂರು ಗುಲಾಬಿಯಿರಲಿ ..
ಕೊಂದವರ್ಯಾರೋ  ಗೊತ್ತಿಲ್ಲ ..
ಕನಸು ಹುಟ್ಟಿದ ದಿನವಂತೂ ತಿಳಿದಿಲ್ಲ ..
ಅಳೆದುಳಿದ ಕನಸುಗಳ ಕೊಂದಿದ್ದಕ್ಕೆ  ಶಿಕ್ಷೆಯೇನೋ ??
ಸಮಾದಿ ಮೇಲೆ ಬರೆವ ಹೆಸರಿಗೊಂದು ಕಾಲಿ ಜಾಗವಿರಲಷ್ಟೇ 
ಸದ್ಯ ಕನಸುಗಳ ಆತ್ಮಕ್ಕೊಂದು ಶಾಂತಿಯಿರಲಿ 

Friday, October 19, 2012



ಅಂದೇಕೋ ಕಡಲ ತೀರದಲ್ಲೊಂದು 
ಮರಳ ಗೂಡು ಕಟ್ಟುವ ಮನಸಾಗಿತ್ತು ..
ಸುಮ್ಮಗೆ ಹೊರಟಿದ್ದ ನನಗೆ ನೀ ಕಂಡಿದ್ದೆ ..
ಕಡಲು ಭೋರ್ಗರೆಯುತ್ತಿತ್ತು .. 

ಪ್ರತೀ ಸಲ ಕಟ್ಟಿದ ನಿನ್ನ ಮರಳ ಗೂಡನ್ನು 
ಚುಂಬಿಸಿ ಹೋಗುತ್ತಿತ್ತು 
ನನ್ನ ಮನವೂ ಭೋರ್ಗರೆದಿತ್ತಾ ?? 
ಸುಮ್ಮನೆ ಬಂದು ನಿನ್ನೆದುರು ಕೂತು 
ನಿನ್ನ ಜೊತೆ ಕೈ ಸೇರಿಸಿದ್ದೆ ..
ಅಕ್ಕ ಪಕ್ಕ ಮತ್ತೆರಡು ದಿಬ್ಬ ಮಾಡಿ 
ಮರಳ ಗೂಡ ಮೇಲೆ ನಿನ್ನ ಹೆಸರ ಕೆತ್ತಿದ್ದೆ ..

ನಿನ್ನ ಬಾವನೆಗಳೂ ಭೋರ್ಗರೆದಿತ್ತಾ ?? ..
ಸುಮ್ಮಗೆ ಮುಂಗುರುಳ ಸರಿಸಿ ನನ್ನ ಕಣ್ಣ ನೋಡಿದ್ದೇ 
ಪಕ್ಕ ನನ್ನ ಹೆಸರೂ ಬರೆದಿದ್ದೆ ...ತುಟಿಯಂಚಿನಲಿ 
ತುಂಟ ನಗುವಿತ್ತು ...
ಎಲ್ಲಿಂದಲೋ ಹೆಕ್ಕಿ ತಂದ ಹೂಗಳನೂ ಸಿಂಗರಿಸಿದ್ದೆ ..
ನನಗರ್ಥವಾಗಿರಲಿಲ್ಲ  ಕಡಲು ಭೋರ್ಗರೆದಿದ್ದು ..

ಇಂದೇಕೋ  ಕಡಲು ಕೂಡ ಪ್ರಶಾಂತವಾಗಿದೆ 
ಗೊತ್ತಾಗಿರಬಹುದೇನೋ ಅದಕ್ಕೂ ..
ನೀ ದೂರವಾದದ್ದು ..
ಅದಕ್ಕೆ ನೀ ಕಟ್ಟಿದ ಮರಳ ಗೂಡನೂ ಸೋಕದೆ 
ಸುಮ್ಮನಾಗಿದೆ ...

Friday, October 12, 2012


ನನ್ನದೊಂದಿಷ್ಟು ಪಕೀರನ ಕನಸುಗಳು . 
ಹೊಟ್ಟೆಗೊಂದಿಷ್ಟು ಪರಮಾತ್ಮ ಸೇರಿದಾಗ 
ನಿಶೆ ಏರಿದ ಹಾಗೆ ಅವುಗಳದೇ ಲೋಕದಲ್ಲಿ 
ತೇಲಾಡುವ ಪಕೀರನಂತೆ ... ನನ್ನ  ಕನಸುಗಳು ..

ಬೇಕಿಲ್ಲ ಯಾವ ದೊಣ್ಣೆ ನಾಯಕನ ಕಟ್ಟಪ್ಪಣೆ
ಮನಸಲ್ಲಿ  ಹಾಡುವ ಹಾಡು ಕುಣಿತಗಳಿಗೆ 
ಚಂದ್ರ ನಕ್ಷತ್ರಗಳೇ ಸಂಯೋಜಕರು 
ಕೇಳಿ ಕಿವಿಗೊಟ್ಟು ... ಕನಸುಗಳ ಲೊಕದಲ್ಲೊಂದು 
ನನ್ನದೇ ಕಥಾಮಂಜರಿ ..
ರಸವತ್ತಾದ ಕನಸುಗಳಿಗೊಂದು  ಮರೀಚಿಕೆ ಕಥಾನಾಯಕಿ..

ನಾಚಬೇಕು ಕಥಾನಾಯಕಿ .. ಪಕೀರನ ವರ್ಣನೆಗಳಿಗೆ ..
ಬಿಟ್ಟು ಕೊಡುವುದಿಲ್ಲ ಒಂಟಿಯಾಗಿ ..
ತಂಗಾಳಿ ಬೀಸಿ ಮುಸ್ಸಂಜೆ ಕೆಂಪೆರುತ್ತದೆ.. ಜೊತೆಗೊಂದಿಷ್ಟು 
ಚುಕ್ಕಿ ತಾರೆಗಳೂ ಮುದಗೊಳ್ಳುತ್ತವೆ ..
ಪ್ರಕೃತಿಯೂ ಸಿಂಗಾರಗೊಳ್ಳುತ್ತವೆ..
ನವ ವಧುವಿನಂತೆ .. 

ಪಕೀರನ ಕನಸುಗಳಿವು ... ಮನಸು ಪೂರ್ಣ ಬೆತ್ತಲೆ ..
ಬಾವನೆಗಳ ಅಡಗಿಸಿ ಮೇಲಿನ ಅಲಂಕಾರಗಳಿಲ್ಲ..
ಒಪ್ಪ ಓರಣಗಳಿಲ್ಲ ..
ಕನಸಿನ ಲೋಕಕ್ಕೆ ಕಾಲಿಡಬೇಕು ಒಮ್ಮೆ ..
ಪಕೀರನ ಲೋಕವಿದು .
ಏನಿಲ್ಲ !!!... ಏನಿಲ್ಲದಿರಲಿ... 
ಜುಟ್ಟಿಗೆ ಮಲ್ಲಿಗೆಯಂತೂ ಇದೆ .. ಒಳಬಂದವಳಿಗೆ 
ಗೊತ್ತು ... ಪಕೀರನ ಕನಸುಗಳು ...
ಇವನಿಗೆ ಮಾತ್ರ ಬಚ್ಚಿಟ್ಟು ಕೊಂಡಿದ್ದೆ ಬಂತು ..
ಹೊರಬರಲು ಗೊತ್ತಿಲ್ಲ ... ತನ್ನದೇ ಕನಸುಗಳ ಲೋಕದಿಂದ ... 






Thursday, October 4, 2012


ಇನ್ನೂ ಹೇಳಲಾಗದೆ ಉಳಿದುಹೋಗಿದೆ ನನ್ನಲ್ಲಿ 
ನಿನ್ನನರಸಿ ಬಂದ ಮಾತುಗಳ ತಡಕಾಡಿದ ಮನಸೀಗ 
ಒಂಟಿತನದ ನಿತ್ಯ ಸಂಗಾತಿ...
ಪಿಸುಗುಡುತ್ತಿವೆ ಇನ್ನೂ ಮನಸಿನೊಳಗೆ ..
ನಿನ್ನ ಕಂಡ ಕ್ಷಣದಲ್ಲಿ ಆಡುವ ಮಾತುಗಳಿಗಾಗಿ ..
ನಿನ್ನ ನೆನಪಾಗುವ ರಾತ್ರಿಗಳೀಗ  ಕಡುಗತ್ತಲು..
ಬೆಳದಿಂಗಳಿಲ್ಲ ...ಮಿನುಗೋ ನಕ್ಷತ್ರಗಳಿಲ್ಲ..
ಎಲ್ಲವೂ ನೀನಿರದೆ ಮಿನುಗುವುದನ್ನೇ ಮರೆತಿವೆ ..
ಸಿಂಗರಿಸಬೆಕಿತ್ತು ನನ್ನೆಲ್ಲ ಕನಸುಗಳ 
ಚುಕ್ಕಿ ಚಿತ್ತಾರಗಳಂತೆ..ನಿನ್ನ ಜೊತೆಗೂಡಿ 
ಆಸೆಯಿತ್ತು ನನ್ನ ಮನಕೂ ನೀ ಬಂದ ಆ ಕ್ಷಣ 
ನನ್ನ ಮನಸಿನೊಳಗೆ   ..
ತಡಬಡಾಯಿಸಿದ ಮಾತುಗಳು ...ಹೇಳಲು ನೂರಿದ್ದವು  ಮನಸಿನಾಳದ ಬಾವನೆಗಳು 
ಹೇಳಬೇಕಾದ ಮಾತುಗಳೆಲ್ಲ ನಾಚಿ ..
ಬರೀ ಮೌನಗಳೇ ಮಾತಾಗಿದ್ದವು ..
ಕಾತರವಿದೆ ಮನಸಿಗೀಗ ..ನೀ ಬರುವ ಕ್ಷಣಗಳ ..
ಮತ್ತೆ ಸಿಂಗರಿಸಬೇಕಿದೆ ..ನನ್ನೊಳಗಿನ ಕನಸುಗಳ 
ನಿನ್ನ ಜೊತೆ.... ಚುಕ್ಕಿ  ಚಿತ್ತಾರವಿಟ್ಟು 

Thursday, September 27, 2012


ಮೊನ್ನೆ ಚೂರು ಹರಿದಿತ್ತು ..
ಎಷ್ಟೋ ವರ್ಷಗಳಿಂದ ನನ್ನ ಅಪ್ಪಿದ್ದ ಆ ಹಳೆಯ ಚಾದರ 
ಅದೆಂತದೋ ಆಪ್ತತೆ ..ನನಗೂ ಅದಕೂ ..
ನನ್ನ ರಾತ್ರಿಗಳ ನಿತ್ಯ ಸಂಗಾತಿ ..
ಎಷ್ಟೋ ಕನಸುಗಳ ಬೆಚ್ಚಗಿರಿಸಿ ...ಕಣ್ಣೀರುಗಳ ಒರೆಸಿ ..
ನನ್ನ ಜತೆಗಿತ್ತದು ..
ಬಣ್ಣ ಮಾಸಿ ಹಳೆಯದಾಗಿದ್ದರೂ ಹೊಸದರ ಮೇಲೆ ಮನಸಾಗುತ್ತಿಲ್ಲ 
ಒಂದು ದಿನ ತೆಗೆದಿರಿಸಿ ಮತ್ತೆ ಅದನ್ನಪ್ಪಿದ್ದೆ 
ಅದಾದರೂ ಎಷ್ಟು ದಿನ ತಡೆದೀತು ??
ದಿನ ದಿನವೂ ನನ್ನ ಕಾಲಡಿಗೆ ಸಿಗುವ 
ಆ ಚಾದರ ...ಎರಡಾಗುವ ಮೊದಲು ಬಿಡಬೇಕು ...
ಏನಾಗಲಿ ಇವತ್ತೊಂದಿನ ....
ನಾಳೆ ಬದಲಿಸಿದರಾಯಿತು ....