Wednesday, June 20, 2012



ಇಂದೇಕೋ ಮನದಲ್ಲಿ ನಿನ್ನದೇ ಸೋನೆ ಮಳೆ ..
ನೆಲವೆಲ್ಲ ಹಸಿಯಾಗಿದೆ ..ಗೊತ್ತಿಲ್ಲ ಎಂದು ಪ್ರೀತಿ 
ಮೊಳಕೆಯೋಡೆಯುವುದೋ...

ಆಗಸದ ಮೋಡಕ್ಕೂ ನಿನ್ನಾಕರ್ಷಣೆಯ 
ತಡೆಯಲಾರದೆ ನಿನ್ನ ತಲುಪಲು 
ಮಳೆಯಾಗಿ ಸುರಿದು ಬಂದಿದೆ ...
ಗೊತ್ತಿಲ್ಲ ಮಳೆ ಸುರಿದ ರಭಸಕ್ಕೆ 
ನಿನ್ನೊಡಲ ತಲುಪುವುದೋ..

ನನ್ನ ಪ್ರೀತಿ ನಿನ್ನಲ್ಲಿ ಚಿಗುರಲು ನೀ 
ಹಸಿಯಾಗಬೇಕು ..ಮಳೆ ಸುರಿಯಬೇಕು 
ಬಿತ್ತಿದ ಪ್ರೀತಿಯೆಲ್ಲ  ಹಸಿರಾಗಿ 
ಮೊಳೆಯಬೇಕು .. 
ಮಳೆ ಸುರಿದು ಮನವೆಲ್ಲ    ತಂಪಾಗಿ 
ಹಸಿರಾದ ಮೇಲೆ ಕಾಮನಬಿಲ್ಲಿನ 
ಚಿತ್ತಾರ ಮೂಡಬೇಕು .. ನಿನ್ನೊಲವ ಸೇರಲು ..




Thursday, May 17, 2012


ಹಾಗೆ ಬಂದು ಸುಮ್ಮನೆ ಹೋಗಿ ಬಿಡಿ ಮೋಡಗಳೇ 
ಈಗಷ್ಟೇ ಸಿಂಗರಿಸಿದ್ದೇನೆ ಕನಸುಗಳ ನನ್ನ ಸಂಗಾತಿಗೆಂದು 
ಮಳೆಸುರಿಸಬೇಡಿ...
ಒಂದಷ್ಟು ಹಣತೆಗಳ ಹಚ್ಚಿಟ್ಟು , ಬೆಳದಿಂಗಳಿಗಾಗಿ ಕಾಯುತ್ತಿದ್ದೇನೆ 
ಈ ಮುಸ್ಸಂಜೆ ಬೆಳದಿಂಗಳಿಗೆ ಮಾತ್ರ ಆಮಂತ್ರಣ ..
ತಂಗಾಳಿಗೂ ಹೇಳಿಬಿಟ್ಟಿದ್ದೇನೆ .. ಕದ್ದು ಕದ್ದು ನೋಡ ಬೇಡವೆಂದು ,..
ನನ್ನವಳ ಜೊತೆಗೊಂದು ಸುಂದರ ಮುಸ್ಸಂಜೆಯ ನನಗೆ ಬಿಡು ..
ನಮ್ಮಿಬ್ಬರ ಆತುರಕ್ಕೆ ಸೂರ್ಯನೂ ನಾಚಿ ಮೊದಲೇ ಮರೆಯಾಗಿ 
 ಮುಸ್ಸಂಜೆಯ  ಕಳಿಸಿ ಕೊಟ್ಟಿದ್ದಾನೆ ..
ಹಂಚಿ ಕೊಳ್ಳುವುದಿದೆ ಎಷ್ಟೋ ಕನಸುಗಳ ಮುಸ್ಸಂಜೆ ಸಾಕ್ಷಿಯಾಗಿ ..
ಇಡೀ ರಾತ್ರಿ ಕೈ ಕೈ ಹಿಡಿದು ಆಗಸದ ನಕ್ಷತ್ರಗಳ ಪಾಲು ಮಾಡ ಬೇಕಿದೆ ..
ಕಾಲುಗಳ ನೀರಲ್ಲಿ ಬಿಟ್ಟು ಹಾಗೆ ಆಗಸವ ನೊಡುತ್ತ ಅಷ್ಟೂ ಬೆಳದಿಂಗಳ  
ಬೆಳಕನ್ನು ನನ್ನವಳ ಕಣ್ಣ ತುಂಬಬೇಕಿದೆ ..
ನಮಗಾಗೆ ಇರುವ ಮುಸ್ಸಂಜೆಯಿದು ಸುಮ್ಮನೆ ದೂರದಿಂದ 
ನಾಲ್ಕೇ ನಾಲ್ಕು ಹನಿಯ ನಯವಾಗಿ ನನ್ನವಳ ತುಟಿಯ ಮೇಲೆ  ಸುರಿಸಿಬಿಡು ..
ಬೆಳದಿಂಗಳ ಬೆಳಕಿಗೆ ನೀರ ಹನಿಗಳೆಲ್ಲ  ಮುತ್ತಾಗಲಿ..
ಆ ಮುತ್ತುಗಳನೆಲ್ಲ  ಬಚ್ಚಿಡಬೇಕಿದೆ  ನನ್ನೊಳಗಿನ ಕನಸುಗಳಲ್ಲಿ ...

Monday, April 23, 2012


ಕನಸುಗಳೂ ಹಠ ಹಿಡಿದಿವೆ ..
ನೀನಿಲ್ಲದ ಕಣ್ಣುಗಳ ಜೊತೆ ನಿದ್ದೆ ಹೋಗಲು..
ನೀ ನಂಬಿಸಿ ಹೋದ ಮೇಲೆ .. 
 ಕಣ್ಣ ರೆಪ್ಪೆಗಳಿಗೂ ನಿನ್ನದೇ ಚಿಂತೆ  ..
ಸುಮ್ಮಗೆ ಒಂದಕ್ಕೊಂದು ಪಿಸುಗುಡುತ್ತಾ 
ಯೋಚಿಸುತ್ತಿರುತ್ತವೆ ..
ಅಷ್ಟೆಲ್ಲ ದಿನಗಳು ನಿನ್ನ ಜೊತೆಗಿದ್ದ 
ಮನಸೀಗ ಒಂಟಿತನದ ನಿತ್ಯ ಸಂಗಾತಿ 
ಸುಮ್ಮಗೆ ಮೂಲೆಯ ಹಿಡಿದು ನಿನ್ನ ಹೆಸರ ಗೀಚುತ್ತಿದೆ ..
ಬಣ್ಣದಲ್ಲಿ ಗೀಚಿದ ಹೆಸರಿಗ ಅಸ್ಪಷ್ಟ ...
ಮನಸಿಗೂ ತಿಳಿಯುತ್ತಿಲ್ಲ ....ಒಂಟಿತನ ಬಿಡುತ್ತಿಲ್ಲ ..
ಜೊತೆ ಜೊತೆಗೆ ಇರುವ ಒಂಟಿತನವೀಗ 
ಕಣ್ಣ ರೆಪ್ಪೆಗಳಿಗೂ ಇಷ್ಟ ...
ಒಂದಷ್ಟು ಹೊತ್ತು ಪಿಸು ನುಡಿದು
ಕನಸಿನೊಳಗೆ ನೀನಿದ್ದಿಯೋ ಇಲ್ಲವೋ ಎಂದು ನೋಡಿ 
ಸುಮ್ಮಗೆ ನಿದ್ದೆ ಹೋಗುತ್ತಿವೆ .. 
ಕನಸುಗಳು ... ಈಗೀಗ ಮೌನಿಯಾಗಿವೆ ...
ಕೊನೆಯ ಉಸಿರಿನ ಮೌನ ...









Thursday, April 12, 2012


ಭೂಮಿಗೆ ಬಂದ ವರ್ಷದೊಳಗೆ ಕಲಿತಿದ್ದೆ 
ದಾರಿಗಳ ಗುರುತಿಸಲು ..
ಆಗ ಸ್ಪಷ್ಟವಿರಲಿಲ್ಲ ದಾರಿ ಯಾವುದೆಂದು 
ಕಂಡ ದಾರಿಯೆಲ್ಲ ಚೆನ್ನ ... ನಡೆಯುವ ಉತ್ಶಾಹ 
ನಡೆದದ್ದಷ್ಟೇ ಗೊತ್ತು .. 
ಹಲವಾರು ಏಳು ಬೀಳುಗಳು ... ಕೈ ಹಿಡಿದು ನಡೆಸುವ ಕೈಗಳಿತ್ತು..
ಭದ್ರವಾದ ಕೈಗಳು .. ಕುಶಿಯಿತ್ತು ಎಂದೂ ಬೀಳುವುದಿಲ್ಲ ಎಂದು ... 
ವರ್ಷ ಕಳೆದಂತೆ  ನಡಿಗೆ ಸ್ಪಷ್ಟ ವಿತ್ತು ..
ಉತ್ಸಾಹ ದಲ್ಲಿದ್ದ ನನಗೆ ಭದ್ರವಾಗಿ ಹಿಡಿದ ಕೈಗಳು ಬಿಟ್ಟು ಹೋದದ್ದು ಗಮನವಿರಲಿಲ್ಲ ..
ಕಣ್ಣ ಮುಂದೆ ಹಲವಾರು ದಾರಿಗಳು ..
ಹಲವಾರು ಮುಖಗಳು ... ಎಲ್ಲ ಒಳ್ಳೆಯವೇ ..ಪರಿಚಿತರೆ ..
ನಡೆಯುವ ಛಲ ... ತಪ್ಪಿಹೋಗಿತ್ತು ದಾರಿ ... 
ಹಿಂದೆ ನೋಡಿದರೆ ಹಿಡಿದು ನಡೆಸುವ ಕೈಗಳಿಲ್ಲ ..
ಮುಂದೆ ಏನಿದೆ ಅಂದು ನೋಡುವ ಆತುರ..
ತಪ್ಪಿದ ದಾರಿಯಾದರೇನು ಸರಿ ದಾರಿ ಸಿಗಬಹುದಲ್ಲ .. 
ಎನ್ನುತ್ತಲೇ ಸಾಗಿದ ದಾರಿ ...
ಕೊನೆಗೂ ಸಿಗಲಿಲ್ಲ ... ಕೈ ಹಿಡಿದು ನಡೆಸುವ ಕೈಗಳು 
ವಯಸ್ಸು ಮೀರಿತ್ತು ಸರಿ ದಾರಿ ಹುಡುಕುವ ಆಸೆ ಯಿತ್ತು 
ಕಾಲ ಮೀರಿದಂತೆ  ದಾರಿ ಗೋಚರವಾಗಿತ್ತು ... 
ಎಲ್ಲ ದಾರಿಗಳೂ ಅಲ್ಲಿ ಬಂದು ಸೇರಿತ್ತು ...
ಅಲ್ಲಿಂದ ಮುಂದೆ ಅದೊಂದೇ ದಾರಿ ... 

{ ಚಿತ್ರಕೃಪೆ : - ದಿಗ್ವಾಸ್ ಹೆಗಡೆ} 

Thursday, April 5, 2012



ನನ್ನ ಹುಡುಗಿ ಕೇಳಿದಳೊಮ್ಮೆ ನನ್ನ ,
ನನ್ನನ್ನೇಕೆ ಇಷ್ಟೊಂದು ಪ್ರೀತಿಸುವೆಯೆಂದು?
ನಾ ಹೇಳಿದೆ ಹುಡುಗೀ ,ಪ್ರೀತಿಗೆ ಕಾರಣ ಬೇಕೇ ?
ಆದರೂ ಹಠ ಹಿಡಿದಳವಳು
ಪ್ರೀತಿಗೆ ಕಾರಣವೇನೆಂದು ?
ಏನು ಹೇಳಲಿ ಹುಡುಗೀ ,ನನ್ನ ಪ್ರೀತಿಗೆ ಕಾರಣವ
ನೀನೆಲ್ಲಿ ಸುಂದರವಾಗಿರುವೆಯೆಂದು ಹೇಳಿದರೆ ,
ರಂಬೆ ಊರ್ವಶಿ,ಮೆನಕೆಯರು ಕೋಪಗೊಂಡು
ಆಮೇಲೆ ಶಾಪ ಕೊಟ್ಟಾರು.
ನಿನಗೀಗಿರುವ ಸೌಂದರ್ಯವೇ ಸಾಕಲ್ಲವೇ?
ನೀನೆ ಆಕರ್ಷಣೆಯ ಕೇಂದ್ರಬಿಂದು ,ನಿನ್ನ ಬಿಟ್ಟರೆ ಬೇರಿಲ್ಲ
ಎಂದೆಲ್ಲ ಹೇಳಲು ವಯಸ್ಸು ನನ್ನ ಬಿಡಬೇಕಲ್ಲ ,
ನಿನಗಿಂತ ಸುಂದರ ಹುಡುಗಿ ಎದುರಿಗೆ ಬಂದರೆ
ಕಣ್ಣು ಮುಚ್ಚಿಕೊಳ್ಳಲೇ ?
ಕೇಳಿಲ್ಲಿ ಹುಡುಗಿ
ಪ್ರೀತಿ ಹುಟ್ಟುವುದು ,ಸೌಂದರ್ಯದಿಂದಲ್ಲ,
ಹೃದಯದಾಳದ ಮನಸಿನಿಂದ ,
ಅದಕ್ಕೆ ಕಾರಣ ಬೇಕಿಲ್ಲಾ,
ಅದು ವಿನಾಕಾರಣ

Thursday, March 22, 2012


ಅದೊಂದು ದಿನ ನನ್ನ ಹಳೆ ಪುಸ್ತಕಗಳನ್ನು 
ಜಾಲಾಡಿದಾಗ ನನಗೆ ನೀ ಕೊಟ್ಟ ನವಿಲುಗರಿ 
ಸಿಕ್ಕಿತ್ತು .. 
ಅಲ್ಲೆಲ್ಲೋ ಪಾಪದ ನವಿಲು ಗರಿಬಿಚ್ಚಿ ಕುಣಿವಾಗ 
ಬಿದ್ದ  ಗರಿಯದು ..ನಿನಗದು ನಮ್ಮಿಬ್ಬರ ಪ್ರೀತಿಯ 
ಸಂಕೇತವಾಗಿತ್ತದು ..
ಆ ಬೆಳದಿಂಗಳ ನಡುವೆ ಮರದ ಕೆಳಗೆ 
ಬುಜದ ಮೇಲೆ ತಲೆಯಾನಿಸಿ ಪಿಸುನುಡಿದಿದ್ದೆ
ನನ್ನಾಣೆ .. ಈ ನವಿಲುಗರಿಯಲ್ಲಿದೆ ನನ್ನ ಹೃದಯ 
ಕಳೆಯಬೇಡ.. ಹೇಗೆ ಬಚ್ಚಿಡುತ್ತೀಯ ಕೇಳಿದ್ದಳವಳು..
ಸುಮ್ಮಗೆ  ಮುಂಗುರುಳ ಸರಿಸಿ , ನಕ್ಕು ಹೇಳಿದ್ದೆ .....
ಎಂದೂ ನಾ ನೋಡದ ಪುಸ್ತಕದಲ್ಲಿಡುತ್ತೇನೆ.. 
ಕಣ್ಣಂಚಿನ ಕಂಬನಿಯೊಂದು ಜಾರಿ ನನ್ನ ಎದೆಯ ಮೇಲೆ 
ಬಿದ್ದಿತ್ತು ...ನಾ ರಾಧೆ ,, ನೀ ಕೃಷ್ಣ .. ಹೀಗೆ ಇರಲಿ ನಮ್ಮಿಬ್ಬರ 
ಪ್ರೀತಿ ಎಂದು ಬಿಗಿದಪ್ಪಿದ್ದಳು ... 
ಅಲ್ಲೆಲ್ಲೋ ಮಿಂಚಿನ ಬೆಳಕು ಭುವಿಯ ಸೇರಿತ್ತು ..
ಅಲ್ಲೇ ಕೀಟಲೆ ಮಾಡಿದ್ದೆ ... ನೀ ರಾಧೆಯಾದರೆ .....
ರುಕ್ಮಿಣಿ ಯಾರು ಅಂದು ... 
ನೀ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೆ ... ರುಕ್ಮಿಣಿಯ ಮಾತು ಮರೆತು ಹೋಗಿತ್ತು ..
ಹಾಗೆ ಹೇಳಿದವಳೇ ಮೌನವಾಗಿದ್ದೆ ..
ನವಿಲುಗರಿಯೂ ಕನಸ ಕಂಡಿತ್ತು ..
ಎಂದೂ ನೋಡದ ಪುಸ್ತಕದಲ್ಲಿ ಶಾಶ್ವತವಾಗಿ ಇರುತ್ತೇನೆ ಎಂದು ..
ಪಾಪದ ನವಿಲುಗರಿ ... ಇನ್ನೂ ಹಾಗೆ ಇದೆ ..
ಇಂದೇಕೋ ನವಿಲು ಗರಿ ಮತ್ತೆ ನೆನಪಾಗುತ್ತಿದೆ ..
ಬಚ್ಚಿಟ್ಟುಕೊ ಎಂದ  ರಾಧೆಯೂ ಮೌನ ತಳೆದಿದ್ದಾಳೆ ... 







Saturday, March 17, 2012


 ಒಂದಷ್ಟು ಕನಸುಗಳ ಚಿತ್ತಾರ ಬಿಡಿಸಿ 
ಅದಕ್ಕೊಂದಿಷ್ಟು ಬಣ್ಣಗಳ ಹರವಿಬಿಡು..
ಮನದ ಗೂಡ ತುಂಬಾ ಅಲಂಕರಿಸಿಬಿಡುತ್ತೇನೆ..
ಸಿಂಗಾರಗೊಳ್ಳಲಿ ನನ್ನ ಮನಸೂ ಕೊಂಚ 
ನೀ ಕಾಲಿಡುವ ಮುನ್ನ ..
ಹೇಳಿದ್ದೇನೆ ಬಾನ ಚಂದಿರಗೆ ... ಸ್ವಲ್ಪ ಬೆಳಕ 
ಕೂಡಿಟ್ಟುಕೋ ..ಎಲ್ಲವ ಕಾಲಿ ಮಾಡಬೇಡ ...
ನನ್ನವಳು ಬಂದಾಗ ಬೆಳಗುವಿಯಂತೆ ..
ಬಾನ ಚುಕ್ಕಿ ಗಳೂ ಸಿದ್ದವಾಗಿಯೇ ಇವೆ ..
ನೀ ಬಂದಾಗ ಮನದ ಬಾಗಿಲ ಮುಂದೆ ರಂಗೋಲಿ ಬಿಡಿಸಲು ..
ಅಲ್ಲೆಲ್ಲೋ ನೋಡಬೇಡ ...ದಾರಿ ತೋರಿಸಲು 
ತಂಗಾಳಿ ಸಿದ್ದವಾಗಿಯೇ ಇದೆ ..
ನೀ ಬಂದೊಡನೆ ನನ್ನ ಮನದ ಕಡೆಗೆ 
ಅದು ನಿನ್ನ ಜೊತೆಗಿರುತ್ತದೆ ...
 ಸಿಂಗರಿಸಿಕೊಂಡಿವೆ ನೀ ಬರುವ ದಾರಿ ತುಂಬಾ ..
ಎಲ್ಲ ಹೂಗಳು ...ತಾವೇನು ಕಡಿಮೆ ಎಂದು ..
ದುಂಬಿಗಳಿಗೂ ರಜಾ ... ಎಲ್ಲ ಕೂಡಿ ಹಾಡಲು ಸಿದ್ದವಾಗಿವೆ ..
ಮಿಂಚು ಹುಳಗಳೂ ಮಿನುಗುತ್ತಿವೆ ನೀ ಬರುವ ಸುದ್ದಿ ಕೇಳಿ ..
ಮತ್ತೇಕೆ ತಡ ... ನಾ ಕಳಿಸಿದ ಬಾಳ ದೋಣಿ  ಬಂದಿದೆ 
ಹತ್ತಿ ಬಂದುಬಿಡು ... ನನ್ನ ಮನದ ಕಡೆಗೆ ...
ದಾರಿಯಂತೂ ತಪ್ಪುವುದಿಲ್ಲ ...ತಂಗಾಳಿ ನಿನ್ನ ಜೊತೆಗಿದೆ ...