Friday, July 30, 2010

ಮಳೆಗಾಲದ ಸಂಜೆ



ಅದೊಂದು ಮಳೆಗಾಲದ ಸಂಜೆ
ನಾ ಕುಳಿತು ಆಗಸದೆಡೆ ಕಣ್ಣು ನೆಟ್ಟಿದ್ದೆ .
ಆ ಕಪ್ಪು ಮೋಡಗಳು ಆಗಸದ ತುಂಬೆಲ್ಲ ,
ಇನ್ನೇನು ಮಳೆ ಹನಿ ಹನಿಯಾಗಿ ಬರಬೇಕು ,
ಅಷ್ಟರಲ್ಲೇ ನೀನು ಬಂದೆ ಕೋಲ್ಮಿಂಚಿನಂತೆ .
ಮೆಲ್ಲಗೆ ಚುಂಬಿಸಿ ಕಣ್ಣು ತೆರೆಯುವುದರಷ್ಟಲ್ಲೇ
ಮಾಯವಾಗಿ ಬಿಟ್ಟಿದ್ದೆ .
ನಿನ್ನ ನೆನಪಲೆ ಕುಳಿತಿದ್ದೆ ,ಆಗಲೇ ಹನಿಹನಿಯಾಗಿ
ಬೀಳುತ್ತಿದ್ದವು ಜಲಧಾರೆ ....
ಹಾಗೆ ಕಣ್ಣು ಮುಚ್ಚಿದೆ ನಿನ್ನ ನೆನಪಿಗಾಗಿ ,
ಮತ್ತೆ ಬಂದೆ ಸದ್ದಿಲ್ಲದೇ ......
ಕಿವಿಕಚ್ಚಿ, ಪಿಸುನುಡಿದು ಓಡಿ ಬಿಟ್ಟಿದ್ದೆ
ಕಣ್ಣು ಬಿಟ್ಟಾಗ ತೊಟ್ಟಿಕ್ಕುದ್ದವು ಎಲೆಗಳ ತುದಿಯಲ್ಲಿ
ಮಳೆಹನಿಗಳು ....
ಇದೇನು ಕನಸೋ ,ನನಸೋ ಎಂಬ ಭ್ರಮೆಯಲ್ಲಿರುವಾಗ
ಮತ್ತೆ ನೀ ಬಂದೆ ....ಹತ್ತಿರ,, ಹತ್ತಿರ,, ಬಲು ಹತ್ತಿರ ...
ಇನ್ನೇನು ಹಿಡಿಯಬೇಕು ಎನ್ನುವಷ್ಟರಲ್ಲಿ
ಕೈಗೆ ಸಿಗದೇ ಚಿಟ್ಟೆಯಾಗಿ ಹಾರಿ ಬಿಟ್ಟಿದ್ದೆ

Saturday, July 24, 2010

ಸಾವಿರ ಕನಸುಗಳ ಧಾರಾವಾಹಿ ...


ಮನಸಿನಾಳದ ಸುತ್ತ ಕಟ್ಟಿಕೊಂಡ ಕನಸುಗಳು
 ಗಿರಕಿ ಹೊಡೆಯುತ್ತಿದೆ ನಿನ್ನ ಸುತ್ತ..
ಬರಿ ಮಾತು ಚೂರು ನಗು ಒಂದು ಕಣ್ಣ ನೋಟಕ್ಕೆ
 ಕಟ್ಟಿಕೊಂಡ ರಾಶಿ ಕನಸುಗಳವು,
ಹೇಗೆ ತಿಳಿಸಲೇ ನಿನಗೆ ???
ಅದಾರೋ ಹೇಳಿದರು ಪ್ರೀತಿ ಹುಟ್ಟುವುದು ,
ಹೃದಯ ಮಿಡಿಯುವುದು ಮನಸುಗಳು ಕೂಡಿದಾಗ
ನೀನಾದರೋ ಕೈಗೆಸಿಗದ ಮರೀಚಿಕೆ ,
ನನ್ನ ಮನಸಿನ ಬಾವನೆಗಳು, ನನ್ನ ಕವನಗಳು.
ಕವನಗಳೋ ನಿನಗೊಂದು ಅರ್ಥವಾಗದ ರಾಮಾಯಣ ,
ಕೇಳಿಲ್ಲಿ ....
ಎಲ್ಲವನ್ನೂ ಹೇಳಲಾಗುವುದಿಲ್ಲ ಬಾಯ್ಬಿಟ್ಟು,
ನನ್ನ ಕಣ್ಣುಗಳನೊಮ್ಮೆ ಕಣ್ಣಿಟ್ಟು ನೋಡು ...
ಅರ್ಥವಾಗುತ್ತದೆ ನನ್ನ ಸಾವಿರ ಕನಸುಗಳ ಧಾರಾವಾಹಿ ....

Thursday, July 22, 2010

ಕೋರ್ಟು, ಕಲಾಪ ,ಪ್ರಲಾಪ


ಇಂದು ಮಾತ್ರ ಕೋರ್ಟಿನ ಕಲಾಪಗಳು
ಮನಸ್ಸಿಗೆ ಹಿತ ನೀಡಿದ್ದವು ,ಹಳೆ ಫೈಲುಗಳೆಲ್ಲ
ಧೂಳು  ಕೊಡವಿ ಅತ್ತಿಂದಿತ್ತ ಹಾರಾಡತೊಡಗಿದ್ದವು
ಪ್ರೇಮದ ಸಂದೇಶ ಹೊತ್ತು .
ಹುಡುಗೀ ಮೊದಲ ಸಲ ಏನೊಂದೂ ಗೊತ್ತಾಗುತ್ತಿರಲಿಲ್ಲ ,
ನನ್ನೆದುರಿಗೆ ಬಂದು ನಿಂತ ನಿನ್ನ ನೋಡಿ .
ನ್ಯಾಯಾಧೀಶರ ಮಾತೂ ಕೇಳದಾಗಿತ್ತು.
ಹುಡುಗೀ ನಿನ್ನ ನಗುವಿಗೆ ನನ್ನ ಮಾತೂ ಮರೆತುಹೋಗಿತ್ತು .
ಕಣ್ಣು ತೆಗೆಯದಾಗಿದ್ದೆ ನಿನ್ನ ಕಣ್ಣ ಬಿಟ್ಟು
ಮುಂಗುರುಳ ಸರಿಸಿ ಬೀರೋ ಓರೆನೋಟ ,
ಕಣ್ಣಂಚಿನ  ಕಪ್ಪು ಕಾಡಿಗೆ , ಅರಳು ಹುರಿದ ಮಾತು
ನಕ್ಕಾಗ ನಿನ್ನ ಕೆಂಪುಗೆನ್ನೆಗುಳಿಯೊಳಗೆ ನನ್ನ ನಾನೇ ಮರೆತಿದ್ದೆ
ಯಾರ ಕೂಗೂ ಕೇಳದಾಗಿತ್ತು ನನಗೆ ,
ನಿನ್ನ ನೋಡುತ್ತಾ ನನ್ನ ಕೇಸನ್ನೇ ನಾ ಮರೆತಿದ್ದೆ !  

Friday, July 16, 2010

ಬಂದಿರುವಳೆನ್ನ ಹುಡುಗಿ




ಓ ಚೈತ್ರ ಸಂಕುಲವೇ ,ಹೂವ ಮಳೆಯನು ಸುರಿಸು
ಬಂದಿರುವಳೆನ್ನ ಹುಡುಗಿ .
ಬೀಸುವ ಗಾಳಿಯೇ ರಾಗಗಳ ನೀ ನುಡಿಸು
ಬಂದಿರುವಳೆನ್ನ ಹುಡುಗಿ ,
ಆ ಸುಂದರ ಕೈಗಳಿಗೆ ,ಕೆಂಪು ಹೂ ಮದರಂಗಿಯ
ಬಳಿದುಬಿದು ತಿಳಿದ ಹಾಗೆ .
ಕಪ್ಪು ಕಾಡಿಗೆಯಾಗಿ ಬನ್ನಿ ಓ ಮೋಡಗಳೇ
ಈ ಕಪ್ಪು ಕಣ್ಣುಗಳಿಗೆ ,
ಸಿಂಗರಿಸಿ ತಾರೆಗಳೇ ,ನೀಳಜಡೆ ..ಬೈತಲೆಯ ...
ಓ ಚೆಲುವ ನೋಟಗಳೆ ಹೊದಿಸಿಬಿಡಿ ಎಲ್ಲೆಡೆ
ಬೆಳಕ ಮಕಮಲ್ಲ ಹೊದಿಕೆಯ ,
ಸಜ್ಜುಗೊಲಿಸಿವೆ ಇಲ್ಲಿ ಅರೆಬಿರಿದ ಮೊಗ್ಗುಗಳು ,
ಸೊಗಸಾದ ಪ್ರೇಮಮಂಚ.
ಅವಳ ಹೆಜ್ಜೆಯನರಸಿ ಬಂದರೂ ಬರಬಹುದು .....
ಗೊತ್ತಿರಲಿ ನಿಮಗೂ ಕೊಂಚ .
ಅವಳ ಹೆಜ್ಜೆಯನರಿಸಿ ಪ್ರೇಮರುತು ಬಂದರೂ ಬರಬಹುದು
ರಂಗಾದ ರುತುಗಳೇ ಬಣ್ಣಗಳ ಹರವಿಬಿಡಿ ,
ತುಂಬಾ ನಾಚಿಕೆಯವಳು ,ನಿಮ್ಮೆದುರು ನಸುನಾಚಿ
ಹೊರತುಹೊದಾಳು ಆಕೆ ...
ಒಂದಿಷ್ಟು ಒಳಗಿಳಿದು ಹೃದಯವನು ಚೇತರಿಸಿ ,
ಬಂದಿರುವಳೆನ್ನ ಹುಡುಗಿ














ನಿದ್ದೆಯೂ ಮುಷ್ಕರ ಹೂಡಿವೆ 
ನೀನು ಹೊರಟು ಹೋದ ಮೇಲೆ ...
ರಾತ್ರಿಯಿಡೀ ಕಣ್ಣುಬಿಟ್ಟು,ಆಗಸದಲ್ಲಿ 
ನಕ್ಷತ್ರಗಳ ಲೆಕ್ಕ ಹಾಕುತ್ತಿವೆ ...
ಮನಸಿಗೂ ಲೆಕ್ಕ ತಪ್ಪಿವೆ,,
ಕೂಡಿ ಕಳೆಯುವ ಲೆಕ್ಕಾಚಾರ 
ಆಕಾಶವೆಲ್ಲ ಖಾಲಿ ಖಾಲಿ 
ನೀನು ಹೊರಟು ಹೋದ ಮೇಲೆ 
ಹೃದಯ ಬುಟ್ಟಿಯ ತುಂಬಾ  ನಿನ್ನದೇ ಕನಸುಗಳ ಮೆರವಣಿಗೆ 
ದಿಕ್ಕು ತಪ್ಪಿವೆ  ಎಲ್ಲ ನಿನ್ನ ಕಾಣದೆ 
 ಬರಿ ಮೌನ  ಮನದ ಮೂಲೆಯ ತುಂಬಾ 
ಮೂಕವಾಗಿದೆ ಮನಸು ನಿನ್ನ ಮಾತು ಕೇಳದೆ ...

Wednesday, July 14, 2010

ನನ್ನ ಪ್ರೀತಿಯ ಹುಡುಗಿ



ನನ್ನ ಪ್ರೀತಿಯ ಹುಡುಗಿ ಒಂದು ದಿನ ತೀರ ನಸುಕಿನಲಿ ,
ಬೆಳಕಿನ್ನೂ ಕಣ್ಣುಜ್ಜಿಕ್ಕೊಳ್ಳುತ್ತ   ಎಚ್ಚರಾಗುವ ಸಮಯದಲಿ 
ನನ್ನ ಎದೆಯಲ್ಲೊಂದು ಕವಿತೆ ನೆಟ್ಟು ಹೋದಳು ,
ಪ್ರೀತಿಯ ಮೇಲೆ  ಬದುಕಿನ ಬದುಕಿನ ಮೇಲೆ ,
ನನ್ನ ಪ್ರೀತಿಯ ಹುಡುಗಿ ಹೊನ್ನ ಹೊಳಪುಳ್ಳ ಗೌರವರ್ಣದ ಬೆಡಗಿ ,
ಮುಗುಳ್ನಗುತ್ತ ಮಾತನಾಡುವ ,ಮಾತಿಗೆಳೆಯುವ ಇಷ್ಟಗಲ ಕಣ್ಣುಗಳ 
ಚೆಲುವೆ ,ನೋಡಬೇಕವಳ ಮೂಗಿನ ತುದಿಯ ಬಿಂಕವನ್ನ,
ಹತ್ತಿರ ಕರೆದೂ ....ದೂರವಿರಿಸುವ ,ತುಟಿಗಳ ತುಂಟತನವನ್ನ 
ಬೇಕಷ್ಟೇ ತುಟಿ ತೆರೆದು ನಕ್ಕಾಗ ಹೊಳೆವ ಸಾಲು ಹಲ್ಲುಗಳ ಮೋಹಕತೆಯ ,
ನನ್ನ ಪ್ರೀತಿಯ ಹುಡುಗಿ ,ಮಧ್ಯರಾತ್ರಿಯ ಕತ್ತಲಲಿ ,
ಕನಸು ಬೀಳುವ ಸುಮುಹೂರ್ತ ಸಮಯದಲಿ 
ಕಿವಿಯಲ್ಲುಸುರಿ ಹೋದಳು ,ನಂಬಿಸುವ ದನಿಯಲ್ಲಿ .....
ಹುಚ್ಚು ಹುಡುಗಾ ,
ಕವಿತೆ ಹುಟ್ಟುವುದು ಪ್ರೀತಿ ಮೊಳೆಯುವುದು 
ಒಂದೇ ಜಾಗದಲ್ಲಿ ಎದೆಯ ಗೂಡಿನ ಮೌನದಲ್ಲಿ .......

Saturday, July 10, 2010

ಅಮರ ಪ್ರೇಮ .


ನಾ ಹೇಳುವೆನು  ಜಗದಲ್ಲಿ  ನನ್ನದು ಮಾತ್ರ
ಅಮರ ಪ್ರೇಮ .
ಸ್ವಾರ್ಥ ,ಅಸೂಯೆ ದ್ವೇಷಗಳಲ್ಲಿ ಬೆಂದು ಹೋದವರೆಸ್ಟೋ.
ಪ್ರೀತಿಗಾಗಿ ಪ್ರಾಣ ಕೊಟ್ಟವರೆಷ್ಟೋ,,
ಅವಾವವೂ ಬದುಕುಳಿಯಲಿಲ್ಲ ...ಬದುಕಲು ಪ್ರೇಮಿಗಳು ಇದ್ದಾರೆ ತಾನೇ ?
ಅದಕ್ಕೆ ನಾ ಹೇಳುವುದು ನಾ ಮಾತ್ರ ಅಮರ ಪ್ರೇಮಿ ...
ಏಕೆಂದರೆ ನಾ ಪ್ರೀತಿಸುತ್ತಿರುವುದನ್ನು ನಿನಗೆ ಹೇಳಿದರೆ ತಾನೇ!
ಪ್ರೀತಿ ಸತ್ತರೂ ಪ್ರೇಮಿ ಬದುಕಲು ಬಿಡುವವರಾರು?
ನಿನ್ನ ಅಂತರಂಗವನ್ನು ನಾನೇನೂ ತಿಳಿಯಲಿಲ್ಲವಲ್ಲ ..
ಹೇಗಿರುವುದೋ  ಏನೋ ನನಗೇನು ಗೊತ್ತು ? 
ಈಗಿರುವ ಪ್ರೀತಿಯಲ್ಲೇ ಇರುವುದು ಒಳ್ಳೆಯದಲ್ಲವೇ ?  
ಈಗ ಮಾತ್ರ ನೀನೆ ಎಲ್ಲ ನಿನ್ನ ಬಿಟ್ಟರೆ ಉಸಿರಿಲ್ಲ  
ಎಂದೆಲ್ಲ ಹೇಳುವೆನಾದರೂ ಮುಂದೊಮ್ಮೆ ನಿನ್ನ
ಅಂತರಂಗವ ತಿಳಿದು ಈಗಿರುವ ಪ್ರೀತಿಯೂ
ಇಲ್ಲವಾದರೆ ????
ನನ್ನದಾಗುವುದು ಹೇಗೆ ಅಮರ ಪ್ರೇಮ....